ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ, ಪರೀಕ್ಷಾ ಭಯ ಮತ್ತು ಮಾನಸಿಕ ತಡಿತಗಳಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಂಪ್ ರೋಪ್ ನಂತಹ ಸರಳ ಆದರೆ ಪರಿಣಾಮಕಾರಿ ಕ್ರೀಡೆ ದೈಹಿಕ ಸದೃಢತೆ ಮಾತ್ರವಲ್ಲದೆ ಮಾನಸಿಕ ಶಾಂತಿಗೂ ಕಾರಣ
ಹನುಮಸಾಗರ: ವಿದ್ಯಾರ್ಥಿ ಜೀವನದಲ್ಲಿ ಕೇವಲ ಪಠ್ಯ ಶಿಕ್ಷಣ ಮಾತ್ರವಲ್ಲ, ಕ್ರೀಡೆ, ಸಂಸ್ಕೃತಿ ಹಾಗೂ ಶಿಸ್ತುಬದ್ಧ ಜೀವನವೂ ಅಗತ್ಯ. ಜೀವನದಲ್ಲಿ ಗೆಲುವು–ಸೋಲು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ನಿರಂತರ ಅಭ್ಯಾಸ, ಶ್ರಮ ಮತ್ತು ಆತ್ಮವಿಶ್ವಾಸ ಇದ್ದರೆ ಕ್ರೀಡೆಯಲ್ಲಿ ಉನ್ನತ ಮಟ್ಟದ ಸಾಧನೆ ಸಾಧ್ಯ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್.ಪಾಟೀಲ ಹೇಳಿದರು.
ಪಟ್ಟಣದ ಸಪಪೂ ಕಾಲೇಜಿನ ನೇತೃತ್ವದಲ್ಲಿ ಹನುಮಸಾಗರದ ಇಂದಿರಾ ಗಾಂಧಿ ವಸತಿ ಶಾಲೆಯ ಆವರಣದಲ್ಲಿ ಭಾನುವಾರ ಆಯೋಜಿಸಲಾದ ಪಿಯು ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಜಂಪ್ ರೋಪ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ, ಪರೀಕ್ಷಾ ಭಯ ಮತ್ತು ಮಾನಸಿಕ ತಡಿತಗಳಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಂಪ್ ರೋಪ್ ನಂತಹ ಸರಳ ಆದರೆ ಪರಿಣಾಮಕಾರಿ ಕ್ರೀಡೆ ದೈಹಿಕ ಸದೃಢತೆ ಮಾತ್ರವಲ್ಲದೆ ಮಾನಸಿಕ ಶಾಂತಿಗೂ ಕಾರಣವಾಗುತ್ತದೆ. ಪ್ರತಿದಿನ ಕನಿಷ್ಠ ಸಮಯ ಕ್ರೀಡೆಗೆ ಮೀಸಲಿಟ್ಟರೆ ವಿದ್ಯಾರ್ಥಿಗಳು ಆರೋಗ್ಯಕರ ಜೀವನ ನಡೆಸಬಹುದು ಎಂದು ಹೇಳಿದರು.ಹನುಮಸಾಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ದೂರದ ಪಟ್ಟಣಗಳಿಗೆ ಹೋಗಬೇಕಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಗ್ರಾಮಕ್ಕೆ ಪದವಿ ಕಾಲೇಜಿನ ಅಗತ್ಯತೆ ಸ್ಪಷ್ಟವಾಗಿದೆ. ಈ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಮುಂದಿಟ್ಟು, ಕಾಲೇಜು ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜಂಪ್ ರೋಪ್ ಸಂಸ್ಥೆಯ ಅಬ್ದುಲ್ ರಜಾಕ ಟೇಲರ್ ಮಾತನಾಡಿ, ಗ್ರಾಮಸ್ಥರು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಸಹಕಾರದಿಂದ ಈ ರಾಜ್ಯಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿಯೇ ಇಂತಹ ದೊಡ್ಡ ಮಟ್ಟದ ಕ್ರೀಡಾಕೂಟ ಆಯೋಜನೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದ ಸ್ಪರ್ಧೆ ಆಯೋಜಿಸುವ ಗುರಿ ಹೊಂದಿದ್ದೇವೆ ಎಂದರು.ಪಪೂ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಜಗದೀಶ ಜಿ.ಎಚ್.ಮಾತನಾಡಿ, ಜಂಪ್ ರೋಪ್ ಕ್ರೀಡೆ ದೈಹಿಕ ಶಕ್ತಿ, ಚುರುಕುತನ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ. ಹನುಮಸಾಗರದಲ್ಲಿ ಹುಟ್ಟಿ ಬೆಳೆದ ಈ ಕ್ರೀಡೆ ಇಂದು ರಾಜ್ಯ,ಅಂತಾರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದು ಅತ್ಯಂತ ಹೆಮ್ಮೆಯ ವಿಷಯ. ಕ್ರೀಡೆಯಲ್ಲಿ ಭಾಗವಹಿಸುವಿಕೆಯೇ ಮುಖ್ಯ. ಸೋಲು–ಗೆಲುವು ಸಹಜ. ನಿರ್ಣಾಯಕರು ಎಲ್ಲ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡಬೇಕು. ಪ್ರಾಮಾಣಿಕ ತೀರ್ಪು ಬಂದಾಗ ಮಾತ್ರ ನಿಜವಾದ ಪ್ರತಿಭಾವಂತರನ್ನು ಗುರುತಿಸಲು ಸಾಧ್ಯ ಎಂದರು.
ಪ್ರಾಚಾರ್ಯ ಭೀಮಪ್ಪ ಗೊಲ್ಲರ ಮಾತನಾಡಿ, ನಮ್ಮ ಊರಿನಲ್ಲಿ ಆರಂಭವಾದ ಜಂಪ್ ರೋಪ್ ಕ್ರೀಡೆ ಇಂದು ರಾಜ್ಯ,ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹನುಮಸಾಗರದ ಹೆಮ್ಮೆ. ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಹಾಗೂ ಶಿಸ್ತು ಪಾಲಿಸಿದರೆ ಕ್ರೀಡೆಯಲ್ಲಿ ಮಾತ್ರವಲ್ಲ, ಜೀವನದಲ್ಲೂ ಶ್ರೇಷ್ಠತೆ ಸಾಧಿಸಬಹುದು ಎಂದರು.25 ಜಿಲ್ಲೆಗಳ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪ್ರದರ್ಶನ
ರಾಜ್ಯಮಟ್ಟದ ಜಂಪ್ ರೋಪ್ ಕ್ರೀಡಾಕೂಟದಲ್ಲಿ ಬೆಂಗಳೂರು ನಗರ, ಮಂಡ್ಯ, ದಕ್ಷಿಣ ಕನ್ನಡ, ಮೈಸೂರು, ದಾವಣಗೆರೆ, ಕೊಪ್ಪಳ, ರಾಮನಗರ, ವಿಜಯಪುರ, ಉಡುಪಿ, ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ ಸೇರಿದಂತೆ ಒಟ್ಟು 25 ಜಿಲ್ಲೆಗಳ ಪಿಯು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ, ಪ್ರಾಚಾರ್ಯ ಭೀಮಪ್ಪ ಗೊಲ್ಲರ, ಅನಿಲ ಸಂಗಮ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಗ್ರಾಪಂ ಉಪಾಧ್ಯಕ್ಷೆ ಗೌರಮ್ಮ ವಾಲ್ಮೀಕಿ, ಜಂಪ್ ರೋಪ್ ಸಂಸ್ಥೆಯ ಅಬ್ದುಲ್ ಕರೀಂ ವಂಟೆಳಿ, ಅಬ್ದುಲ್ ರಜಾಕ್ ಟೇಲರ್, ಬಸವರಾಜ ಹಳ್ಳೂರ, ಸೂಚಪ್ಪ ದೇವರಮನಿ, ಡಾ. ಶರಣು ಹವಾಲ್ದಾರ, ಸಿದ್ದಯ್ಯ ಬಾಳಿಹಳ್ಳಿಮಠ, ವಿಶ್ವನಾಥ ಕನ್ನೂರ, ನಾಗರಾಜ ಹಕ್ಕಿ, ಶಿವಪ್ಪ ಕಂಪ್ಲಿ, ಶ್ರೀಶೈಲ ಮೊಟಗಿ, ಭವಾನಿಸಾ ಪಾಟೀಲ್, ವಿಶ್ವನಾಥ ನಾಗೂರು, ವಿಜಯಮಹಾಂತೇಶ ಕುಷ್ಟಗಿ, ಚಂದ್ರು ಹಿರೇಮನಿ, ಸೋಮಪ್ಪ ಹೊಸಮನಿ, ಚಂದ್ರು ಬೆಳಗಲ್, ಮೌಲಾಲಿ ಮೋಟಗಿ ಸೇರಿದಂತೆ ಅನೇಕ ಗಣ್ಯರು ಹಾಗೂ ಶಿಕ್ಷಕರು ಇತರರು ಇದ್ದರು.