ಸಾರಾಂಶ
-ರೈತರು, ಕಾಂಗ್ರೆಸ್ ಮುಖಂಡರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಕೆ
-----ಕನ್ನಡಪ್ರಭ ವಾರ್ತೆ ಹುಣಸಗಿ
ತಾಲೂಕಿನಾದ್ಯಂತ ಭತ್ತ ಕಟಾವು ಮಾಡುವ ಯಂತ್ರದ ಮಾಲೀಕರು ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಮಾಲೀಕರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ರೈತರು ಹಾಗೂ ಕಾಂಗ್ರೆಸ್ ಮುಖಂಡರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ದಂಡಿನ್ ಮಾತನಾಡಿ, 2024-25ನೇ ಸಾಲಿನ ಮುಂಗಾರು ಬೆಳೆ ಭತ್ತ ಕಟಾವು ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಭತ್ತ ಕಟಾವು ಮಾಡಲು 2300 ರು. ಗಳು ನಿಗದಿ ಮಾಡಿರುತ್ತಾರೆ. ಆದರೂ ಭತ್ತ ಕಟಾವು ಮಾಡಲು ಯಂತ್ರದ ಮಾಲೀಕರು ಮನಬಂದಂತೆ ರೈತರಿಂದ ಪ್ರತಿ ಗಂಟೆಗೆ 3500 ರು.ಗಳು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಅಕಾಲಿಕ ಮಳೆಯಿಂದಾಗಿ ಭತ್ತ ನೆಲಕಚ್ಚಿದ್ದರಿಂದ ಭತ್ತ ಕಟಾವು ಮಾಡುವ ಸಂದರ್ಭದಲ್ಲಿ ಭತ್ತ ಕಟಾವು ಮಾಡುವ ಸಮಯ ಅಧಿಕವಾಗುತ್ತದೆ. ಮೂರು ಗಂಟೆಗೆ ಮುಗಿಯುವ ಸಮಯ ಆರು ಗಂಟೆಗೆ ಹೋಗುತ್ತಿದೆ. ಇದರಿಂದ ರೈತರಿಗೆ ಭತ್ತ ಹಾನಿಯಾಗಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆಗೆ ಭತ್ತದ ಯಂತ್ರದ ಮಾಲೀಕರು ಹೆಚ್ಚಿನ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿ ಗಂಟೆಗೆ 2300 ರು.ಗಳಂತೆ ರೈತರಿಂದ ಪಡೆಯಬೇಕು ಎಂದು ಒತ್ತಾಯಿಸಿದರು.ಪಟ್ಟಣ ಪಂಚಾಯಿತಿ ಸದಸ್ಯ ಸಿದ್ರಾಮಪ್ಪ ಮುದಗಲ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಹಿಳಾ ರಾಜ್ಯ ಉಪಾಧ್ಯಕ್ಷ ಮಹಾದೇವಿ ಬೇವಿನಾಳಮಠ, ಗೌಡಪ್ಪ ಬಾಲಗೌಡ್ರ, ಪ್ರಮೋದ ಪಾಟೀಲ್, ರುದ್ರಗೌಡ ಮೇಟಿಗೌಡ್ರೆ, ಬಸವರಾಜ ಬೂದಿಹಾಳ, ಮಾನಪ್ಪ ಪೂಜಾರಿ, ನಾರಾಯಣ ಪವಾರ, ಬಾಬು ಪವಾರ, ಗುರು ಶೇವಟಿ, ಹಣಮಂತ ದೊರೆ, ಶರಣು ಮಲ್ಲಬಾದಿ, ಶಿವು ದೇಸಾಯಿ ಸೇರಿದಂತೆ ಇತರರಿದ್ದರು.
---15ವೈಡಿಆರ್4: ಹುಣಸಗಿ ತಾಲೂಕಿನಾದ್ಯಾಂತ ಭತ್ತ ಕಟಾವು ಮಾಡುವ ಯಂತ್ರದ ಮಾಲೀಕರು ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತ ಸಂಘದ ಹಾಗೂ ಕಾಂಗ್ರೆಸ್ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.