ಗುಣಮಟ್ಟದ ಹಾಲು ಪೊರೈಕೆಯಿಂದ ಅಧಿಕ ಲಾಭ

| Published : Jul 17 2024, 12:59 AM IST

ಸಾರಾಂಶ

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೈತರು ಗುಣಮಟ್ಟದ ಹಾಲು ಪೊರೈಕೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವ ಜೊತೆಗೆ ರೈತರ ಸಂಸ್ಥೆಯಾಗಿರುವ ಒಕ್ಕೂಟವನ್ನು ಅಭಿವೃದ್ದಿಪಡಿಸಿದ ಕೀರ್ತಿ ನಿಮ್ಮದಾಗುತ್ತದೆ ಎಂದು ಚಾಮುಲ್ ಹಿರಿಯ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು.

ಕನ್ನಡಪ್ರಭವಾರ್ತೆ ಚಾಮರಾಜನಗರ

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೈತರು ಗುಣಮಟ್ಟದ ಹಾಲು ಪೊರೈಕೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವ ಜೊತೆಗೆ ರೈತರ ಸಂಸ್ಥೆಯಾಗಿರುವ ಒಕ್ಕೂಟವನ್ನು ಅಭಿವೃದ್ದಿಪಡಿಸಿದ ಕೀರ್ತಿ ನಿಮ್ಮದಾಗುತ್ತದೆ ಎಂದು ಚಾಮುಲ್ ಹಿರಿಯ ನಿರ್ದೇಶಕ ಎಚ್.ಎಸ್. ಬಸವರಾಜು ತಿಳಿಸಿದರು. ತಾಲೂಕಿನ ಬಿಸಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಸಲವಾಡಿ ಡೇರಿ 1979ರಲ್ಲಿ ಆರಂಭವಾಗಿರುವ ಬಹಳ ಹಳೇಯ ಡೇರಿಯಾಗಿದೆ. ತಮಿಳುನಾಡು ಗಡಿಯಲ್ಲಿರುವ ಬಿಸಲವಾಡಿ ಡೇರಿಯು ಈ ಭಾಗದ ರೈತರ ಜೀವನಾಡಿಯಾಗಿದೆ. ಉತ್ತಮ ವ್ಯಾಪಾರ ವಹಿವಾಟು ಮಾಡಿ 6,21,543 ರು. ನಿವ್ವಳ ಲಾಭ ಪಡೆದುಕೊಂಡಿದೆ. ಒಕ್ಕೂಟ ಹಾಗೂ ಸರ್ಕಾರದಿಂದ ದೊರೆಯುವ ಸವಲತ್ತುಗಳು ರೈತರಿಗೆ ಸಮರ್ಪಕವಾಗಿ ತಲುಪುತ್ತಿದೆ. ಇಂಥ ಡೇರಿಗಳಿಂದ ಗ್ರಾಮದ ಅಭಿವೃದ್ದಿಯಾಗುತ್ತದೆ. ಪ್ರತಿ ವಾರ ರೈತರ ಖಾತೆಗೆ ಹಣ ಜಮಾವಾಗುತ್ತದೆ. ಹೀಗಾಗಿ ಖಾಸಗಿ ಡೇರಿಗಳ ವ್ಯಾಮೋಹ ಬಿಟ್ಟು ರೈತರು ನಂದಿನಿ ಡೇರಿಗೆ ಹಾಲು ಪೊರೈಕೆ ಮಾಡಬೇಕೆಂದು ತಿಳಿಸಿದರು. ನಿರ್ದೇಶಕ ಸದಾಶಿವಮೂರ್ತಿ ಪ್ರಸಕ್ತ ವರ್ಷದಲ್ಲಿ ಹೆಚ್ಚು ಹಾಲು ಪೊರೈಕೆ ಮಾಡಿದ ೫೧ ಮಂದಿ ಸದಸ್ಯರಿಗೆ ಬಹುಮಾನವಾಗಿ ಹಾಲಿನ ಕ್ಯಾನ್, ಕುಕ್ಕರ್, ಪರಿಕರಗಳನ್ನು ವಿತರಿಸಿ ಮಾತನಾಡಿ, ಇದೊಂದು ಉತ್ತಮ ಯೋಜನೆಯಾಗಿದ್ದು, ಈ ವರ್ಷದ 51 ಮಂದಿ ಡೇರಿಗೆ ಒಂದು ಲಕ್ಷ ರು.ಗಳಿಗು ಹೆಚ್ಚು ಹಾಲು ಸರಬರಾಜು ಮಾಡಿದ್ದಾರೆ. ಹೀಗಾಗಿ ಇವರಿಗೆ ಬಹುಮಾನ ವಿತರಣೆ ಮಾಡಲಾಗಿದೆ. ಮುಂದಿನ ವರ್ಷ ಇನ್ನು ಹೆಚ್ಚಿನ ರೈತರು ಒಂದು ಲಕ್ಷ ರು.ಗಳ ಹಾಲು ಸರಬರಾಜು ಮಾಡಬೇಕೆಂದು ತಿಳಿಸಿದರು. ಚಾಮುಲ್ ಚಾಮುಲ್ ಸಹಾಯಕ ವ್ಯವಸ್ಥಾಪಕ ಡಾ.ಎನ್.ಅಮರ್ ಮಾತನಾಡಿ, ರಾಸುಗಳ ನಿರ್ವಹಣೆ ಹಾಗೂ ಹಾಲಿನಲ್ಲಿ ಜೆಡ್ಡು, ಪ್ಯಾಡ್ ಅಂಶಗಳನ್ನು ಹೆಚ್ಚಿಸುವ ಕುರಿತು ಮಾಹಿತಿ ನೀಡಿದರು. ವೈಜ್ಞಾನಿಕ ಮಾದರಿಯಲ್ಲಿ ಹಸುಗಳನ್ನು ಸಾಕುವ ಮೂಲಕ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಪ್ರತಿ ವರ್ಷದ ಹಸು ಕರು ಹಾಕುವಂತೆ ಮಾಡುವ ಜಾಣ್ಮೆ ಮತ್ತು ಶಕ್ತಿ ನಿಮ್ಮಲ್ಲಿದೆ. ಹೀಗಾಗಿ ಪ್ರತಿಯೊಬ್ಬರು ಡೇರಿ ಮತ್ತು ಒಕ್ಕೂಟದಿಂದ ದೊರೆಯುವ ಸಲವತ್ತು ಪಡೆದುಕೊಳ್ಳಬೇಕು ಎಂದರು. ಸಂಘದ ಅಧ್ಯಕ್ಷ ಎನ್. ಬಸವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರಸಕ್ತ ವರ್ಷದಲ್ಲಿ ಉತ್ತಮ ವಹಿವಾಟು ನಡೆಸಿ, ರೈತರ ಸಲಹೆಯಂತೆ ಡೇರಿಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ, ಪಶು ವೈದ್ಯರು ತಕ್ಷಣ ಸ್ಪಂದಿಸಿ ರಾಸುಗಳನ್ನು ಪರೀಕ್ಷೆ ಮಾಡಲು ಸೂಚನೆ, ಪ್ರತಿಭಾವಂತೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಬಗ್ಗೆ ಚರ್ಚೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ವರ ಮಹಾಲಕ್ಷ್ಮಿ ಹಬ್ಬಕ್ಕೆ ಎಲ್ಲರಿಗೂ ಬೋನಸ್ ವಿತರಣೆ ಮಾಡಲಾಗುತ್ತದೆ ಎಂದರು. ಸಂಘದ ಕಾರ್ಯನಿರ್ವಾಹಕಾಧಿಕಾರಿ ಎನ್.ಮಹೇಶ್ ವಾರ್ಷಿಕ ವರದಿ ಓದಿ ಅನುಮತಿ ಪಡೆದುಕೊಂಡರು. ಚಾಮುಲ್ ವಿಸ್ತರಣಾಧಿಕಾರಿ ಭಾಗ್ಯರಾಜು, ಸಂಘ ಉಪಾಧ್ಯಕ್ಷ ರಾಚನಾಯಕ, ಸಂಘದ ನಿರ್ದೇಶಕರಾದ ಬಿ.ಶಿವಬಸಪ್ಪ, ಸಿ.ರಾಜಶೇಖರ್, ನಾಗರಾಜು, ಶಿವಬಸಪ್ಪ, ರವಿ, ಮಹದೇವಸ್ವಾಮಿ, ಮಹೇಶ್, ರಾಚಶೆಟ್ಟಿ, ನಾಗರಾಜು, ರೂಪ, ಮಂಜುಳಾ ಇತರರು ಉಪಸ್ಥಿತರಿದ್ದರು.