ಸಾರಾಂಶ
ಕೈಗಾರಿಕಾ ಬಡಾವಣೆಯಲ್ಲಿ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಮರದ ಮಿಲ್ ನೀರಿನಿಂದ ಆವೃತವಾಗಿದೆ. 5 ಅಡಿಗಿಂತ ಎತ್ತರದಲ್ಲಿ ನೀರು ನಿಂತಿರುವ ದೃಶ್ಯ ಕಂಡು ಬಂದಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸಮೀಪ ಕೈಗಾರಿಕಾ ಬಡಾವಣೆಯಲ್ಲಿ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಮರದ ಮಿಲ್ಲೊಂದು ಸಂಪೂರ್ಣ ನೀರಿನಿಂದ ಆವೃತಗೊಂಡು ಕೆಲಸ ಕಾರ್ಯಗಳು ಸ್ಥಗಿತಗೊಂಡ ಘಟನೆ ನಡೆದಿದೆ.ಕಾರ್ಮಿಕರು ಹೊರಬರಲು ಆಗದೆ 2 ಗಂಟೆಗಳ ಕಾಲ ಪರದಾಡುತ್ತಿದ್ದ ದೃಶ್ಯ ಕಂಡುಬಂತು.
ಮೇಲ್ಬಾಗದಿಂದ ಹರಿದು ಬರುವ ನೀರು ಅಲ್ಲಿನ ಮರದ ಮಿಲ್ ಆವರಣಕ್ಕೆ ನುಗ್ಗಿ ಐದು ಅಡಿಗಿಂತಲೂ ಎತ್ತರದಲ್ಲಿ ನೀರು ನಿಂತ ದೃಶ್ಯ ಎದುರಾಗಿದೆ.ಈ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಸಂಬಂಧಿಸಿದ ಕೈಗಾರಿಕಾ ಬಡಾವಣೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಮರದ ಮಿಲ್ ಮಾಲೀಕ ಎಂ ಎಂ ಸಾಹಿರ್.
ಹಲವು ವರ್ಷಗಳಿಂದ ಚರಂಡಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಈ ಆವಾಂತರ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.ಆವರಣದಲ್ಲಿದ್ದ ವಾಹನಗಳು ಸಂಪೂರ್ಣ ನೀರಿನಿಂದ ತುಂಬಿ ಕೆಟ್ಟು ನಿಂತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ನೀರು ತುಂಬಿದ ಹಿನ್ನೆಲೆಯಲ್ಲಿ ಮಿಲ್ ಯಂತ್ರೋಪಕರಣಗಳು ಕೆಟ್ಟು ನಿಂತಿದ್ದು ಇದರೊಂದಿಗೆ ವಿದ್ಯುತ್ ಅಪಾಯದ ಆತಂಕ ಕೂಡ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಮಿಲ್ ಹೊರಭಾಗದ ಸಂಪರ್ಕ ರಸ್ತೆಯ ಮೇಲೆ ಮೂರು ಅಡಿಗಿಂತ ಎತ್ತರದಲ್ಲಿ ನೀರು ನಿಂತು ಕಚೇರಿ ಕಾರ್ಮಿಕರು ಮತ್ತು ಯಾವುದೇ ವಾಹನಗಳು ಓಡಾಡದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.