ರಾಮಸಾಗರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ಕಂಪ್ಲಿ: ಇಲ್ಲಿನ ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜೊನ್ನಲಗಡ್ಡ ಅರುಣಾ ಹಣ ದುರ್ಬಳಕೆ ಮಾಡಿಕೊಂಡಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಪಂ ಉಪಾಧ್ಯಕ್ಷ ಆರ್.ಎಂ. ರಾಮಯ್ಯ ಆಗ್ರಹಿಸಿದರು.ರಾಮಸಾಗರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು, ಪಾಲಕ ಪೋಷಕರು, ನಾನಾ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಶಾಲಾವರಣದಲ್ಲಿ ನಡೆಸಿದ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಆರ್.ಎಂ. ರಾಮಯ್ಯ, ಹಣ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಕುಡುತಿನಿ ಸರ್ಕಾರಿ ಪ್ರೌಢಶಾಲೆಗೆ ನಿಯೋಜನೆಗೊಳಿಸಿ ಎಂಟು ತಿಂಗಳಾದರೂ ಹಣಕಾಸಿನ ಜವಾಬ್ದಾರಿಯನ್ನು ವಹಿಸದ ಕಾರಣ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆಯಾಗಿದೆ. ವಿದ್ಯುತ್ ತಂತಿಗಳು ಸುಟ್ಟಿದ್ದರಿಂದ ವಿದ್ಯುತ್ ಸಂಪರ್ಕ ಇಲ್ಲ. ಹೆಣ್ಣು ಮಕ್ಕಳ ಶೌಚಾಲಯ ಸ್ವಚ್ಛಗೊಳಿಸದಿದ್ದರಿಂದ ವಿದ್ಯಾರ್ಥಿನಿಯರು ಪರದಾಡಬೇಕಿದೆ. ಕುಡಿವ ನೀರಿನ ಫಿಲ್ಟರ್ ಕೆಟ್ಟಿದೆ ದುರಸ್ತಿಗೆ ಹಣ ನೀಡುತ್ತಿಲ್ಲ. ಮುಖ್ಯಶಿಕ್ಷಕ ಜವಾಬ್ದಾರಿಯನ್ನು ಸುಗ್ಗೇನಹಳ್ಳಿ ರಮೇಶ್ ಅವರಿಗೆ ವಹಿಸಿ ಎಲ್ಲ ಅಧಿಕಾರ ಒದಗಿಸುವಂತೆ ಬಿಇಒ ಸೂಚಿಸಿದರು ಅಧಿಕಾರ ನೀಡಿಲ್ಲ. ಇವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ 2026ರ ಆ.5ರಂದು ಶಾಲಾವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಂ. ಕರಿಬಸಯ್ಯಸ್ವಾಮಿ ಮಾತನಾಡಿ, ಎಲ್ಲ ಖಾತೆಗಳನ್ನು ಮುಖ್ಯಶಿಕ್ಷಕರಿಗೆ ವಹಿಸದಿದ್ದರಿಂದ ಸಣ್ಣಪುಟ್ಟ ವೆಚ್ಚ ನಿರ್ವಹಿಸಲು ಹಣ ಇಲ್ಲ. ₹25 ಸಾವಿರನಲ್ಲಿ ಕ್ರೀಡಾ ಸಾಮಗ್ರಿ ಖರೀದಿಸಿದ್ದಾಗಿ ಹೇಳಿದ ಅರುಣಾ, ಮೂರ‍್ನಾಲ್ಕು ಬಾಲ್ ತಂದಿದ್ದು ಬಿಟ್ಟರೆ ಉಳಿದ ಕ್ರೀಡೋಪಕರಣಗಳು ಶಾಲೆಗೆ ಒದಗಿಸಿಲ್ಲ. ಸರ್ಕಾರಿ ಶುಲ್ಕ ₹80 ಇದ್ದರೆ ಅರುಣಾ ಸ್ವತಃ ರಸೀದಿ ಹಾಕಿಸಿಕೊಂಡು ಪ್ರತಿ ವಿದ್ಯಾರ್ಥಿಗಳಿಂದ ₹520 ಸಂಗ್ರಹಿಸಿ ದುರ್ಬಳಕೆ ಮಾಡಿದ್ದಾರೆ. ಶಾಲೆ ಶಿಕ್ಷಕರಿಗೆ ಮಾನಸಿಕ ಕಿರುಕುಳ ನೀಡುವುದು, ಹಳೆ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಂದ ಬಲವಂತದಿಂದ ಪಡೆದು ಗುಜರಿ ಹಾಕಿ ಹಣ ಮಾಡಿಕೊಂಡಿದ್ದಾರೆ. ನಿತ್ಯ 12.30ಕ್ಕೆ ಶಾಲೆಗೆ ಬರುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಧಿಕ್ಕರಿಸುತ್ತಿದ್ದರು. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಪರ ಮುಖ್ಯಕಾರ್ಯದರ್ಶಿ, ಗುಲ್ಬರ್ಗದ ಕಮೀಷನರ್, ಡಿಡಿಪಿಐ, ಬಿಇಒ ಅವರಿಗೆ ದೂರಿದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದರು.
ಎಸ್‌ಡಿಎಂಸಿ ಪದಾಧಿಕಾರಿಗಳಾದ ಆಜಮ್ಮ, ಕೆ.ರಾಜಾವಲಿ, ಜೆ.ಮಹೇಶ್, ಆನೆ ಫಕ್ಕೀರಪ್ಪ, ಪ್ರಮುಖರಾದ ರಾಘವೇಂದ್ರ, ಎಂ.ಅಂಕಲೇಶ್, ಆನೆ ಮಹಾಂತೇಶ್, ಆರ್.ಎಂ.ಹುಲುಗಪ್ಪ, ಶಾಲಾ ಸುಧಾರಣಾ ಸಮಿತಿ ಸದಸ್ಯ ಎಚ್.ಕುಮಾರಸ್ವಾಮಿ ಇದ್ದರು.