ಶೌಚಾಲಯ ಇಲ್ಲದೆ ಪ್ರೌಢಶಾಲಾ ವಿದ್ಯಾರ್ಥಿಗಳ ಪರದಾಟ

| Published : Jan 06 2024, 02:00 AM IST / Updated: Jan 06 2024, 05:56 PM IST

ಸಾರಾಂಶ

ಲಕ್ಷ್ಮೇಶ್ವರಕ್ಕೆ ಸಮೀಪದ ಪು.ಬಡ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು172 ವಿದ್ಯಾರ್ಥಿಗಳಿಗೆ ಶೌಚಾಲಯವಿಲ್ಲದೆ ಪರದಾಡುವಂತಾಗಿದೆ. ಪ್ರೌಢಶಾಲೆಯಲ್ಲಿ 2 ಶೌಚಾಲಯಗಳನ್ನು ಕಳೆದ 2-3 ವರ್ಷಗಳಿಂದ ನಿರ್ಮಿಸುತ್ತಿದ್ದರೂ ಅವುಗಳು ಮಾತ್ರ ಮುಗಿಯದಿರುವುದು ವಿದ್ಯಾರ್ಥಿಗಳ ಪಾಲಿಗೆ ನೋವಿನ ಸಂಗತಿಯಾಗಿದೆ.

ಲಕ್ಷ್ಮೇಶ್ವರ: ಸಮೀಪದ ಪು.ಬಡ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಒಟ್ಟು172 ವಿದ್ಯಾರ್ಥಿಗಳಿಗೆ ಶೌಚಾಲಯವಿಲ್ಲದೆ ಪರದಾಡುವಂತಾಗಿದೆ. ಪ್ರೌಢಶಾಲೆಯಲ್ಲಿ 2 ಶೌಚಾಲಯಗಳನ್ನು ಕಳೆದ 2-3 ವರ್ಷಗಳಿಂದ ನಿರ್ಮಿಸುತ್ತಿದ್ದರೂ ಅವುಗಳು ಮಾತ್ರ ಮುಗಿಯದಿರುವುದು ವಿದ್ಯಾರ್ಥಿಗಳ ಪಾಲಿಗೆ ನೋವಿನ ಸಂಗತಿಯಾಗಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಪು.ಬಡ್ನಿ ಗ್ರಾಮದ ಎಸ್.ಎಚ್. ಹರದಗಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ 172 ಮಕ್ಕಳಿಗೆ ಮಲ ಮೂತ್ರ ವಿಸರ್ಜನೆಗೆ ಶೌಚಾಲಯವಿಲ್ಲದೆ ಶಾಲೆಯ ಪಕ್ಕದಲ್ಲಿನ ಗಿಡಗಂಟಿಗಳನ್ನು ಆಶ್ರಯಿಸಬೇಕಾಗಿರುವುದು ದುರಂತದ ಸಂಗತಿಯಾಗಿದೆ. 

ಬಾಲಕರು ಹೊರಗಿನ ಬಯಲು ಪ್ರದೇಶವನ್ನು ಆಶ್ರಯಿಸುತ್ತಾರೆ. ಆದರೆ ಬಾಲಕಿಯರು ಶೌಚಕ್ಕೆ ಹೊರಗೆ ಹೋಗಲು ಆಗದೇ ಇರುವುದರಿಂದ ನರಕಯಾತನೆ ಅನುಭವಿಸುವಂತಾಗಿದೆ. ಕಳೆದ 3 ವರ್ಷಗಳ ಹಿಂದೆ ಪು.ಬಡ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 6.30 ಲಕ್ಷವೆಚ್ಚದಲ್ಲಿ ಪಿಂಕ್ ಶೌಚಾಲಯವನ್ನು ನರೇಗಾ ಯೋಜನೆ ಅಡಿಯಲ್ಲಿ ಗ್ರಾಪಂ ಆಡಳಿತ ಮಂಡಳಿನಿರ್ಮಿಸಲು ಆರಂಭಿದ್ದರು. 

ಪಿಂಕ್ ಶೌಚಾಲಯವು ಬುನಾದಿ ಮಟ್ಟದ ಕಾಮಗಾರಿ ಮುಗಿದು ಅರ್ಧಕ್ಕೆ ನಿಂತು ಮೇಲಕ್ಕೆ ಏದ್ದಿಲ್ಲ. ಪಿಂಕ್ ಶೌಚಾಲಯ ಕಾಮಗಾರಿಯು ಯಾಕೆ ಅರ್ಧಕ್ಕೆ ನಿಂತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಪ್ರೌಢಶಾಲೆಯಲ್ಲಿ ಈಗ ಅರ್ಧಕ್ಕೆ ನಿಂತಿರುವ ಶೌಚಾಲಯದ ಪಕ್ಕದಲ್ಲಿ ಇನ್ನೊಂದು ಶೌಚಾಲಯವನ್ನು ಸುಮಾರು 4.30 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಗ್ರಾಪಂ ಆಡಳಿತ ಮಂಡಳಿ ಮುಂದಾಗಿದ್ದು, ಅದು ಮುಕ್ತಾಯದ ಹಂತಕ್ಕೆ ಬಂದು 1 ವರ್ಷವಾದರೂ ಮುಕ್ತಾಯವಾಗದೆ ಹಾಗೆ ಅರ್ಧಕ್ಕೆ ನಿಂತಿದೆ. 

ಹೀಗಾಗಿ ವಿದ್ಯಾರ್ಥಿಗಳು ಬಯಲು ಶೌಚಾಲಯದ ಮೊರೆ ಹೋಗದೆ ಬೇರೆ ದಾರಿ ಕಾಣುತ್ತಿಲ್ಲಎನ್ನುತ್ತಾರೆ ವಿದ್ಯಾರ್ಥಿಗಳ ಪಾಲಕರು. ನಮ್ಮ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶೌಚಾಲಯವಿಲ್ಲದೆ ಪರದಾಡುತ್ತಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಪಂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

 ಶೌಚಾಲಯ ಮುಕ್ತಾಯಗೊಳಿಸುವಂತೆ ಹಲವು ಬಾರಿ ಗ್ರಾಪಂ ಪಿಡಿಓ ಅವರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಇನ್ನೊಂದು ವಾರದಲ್ಲಿ ಶೌಚಾಲಯಗಳು ಮುಕ್ತಾಯಗೊಳ್ಳದೆ ಹೋದರೆ ಪ್ರೌಢಶಾಲೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುವುದು ತಾಪಂ ಮಾಜಿ ಸದಸ್ಯ ಸುಭಾಷ ಬಟಗುರ್ಕಿ ಹೇಳಿದರು.