ಕಾವೇರಿ ನದಿಗೆ ಹೆಚ್ಚಿನ ನೀರು, ಮುತ್ತತ್ತಿಯಲ್ಲಿ ಪ್ರವಾಸಿಗರಿಗೆ ನಿಷೇಧ

| Published : Jul 30 2025, 12:45 AM IST

ಸಾರಾಂಶ

ಜು.28 ರಂದು ಸೋಮವಾರ ಸಂಜೆ 6 ಗಂಟೆಯಿಂದ ಮುಂದಿನ ಆದೇಶದವರೆಗೆ ಪ್ರವಾಸಿ ತಾಣ ಮುತ್ತತ್ತಿ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಆದೇಶ ಮಾಡಿದ್ದಾರೆ.

ಹಲಗೂರು: ಕಾವೇರಿ ನದಿಗೆ ಹೆಚ್ಚಿನ ನೀರನ್ನು ಬಿಟ್ಟಿರುವುದರಿಂದ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಗೆ ಬರುವ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿ ತಾಲೂಕು ದಂಡಾಧಿಕಾರಿ ಎಸ್.ವಿ.ಲೋಕೇಶ್ ಆದೇಶ ಮಾಡಿದ್ದಾರೆ.

ಮುತ್ತತ್ತಿ ಗ್ರಾಮ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಪ್ರೇಕ್ಷಣೀಯ ಸ್ಥಳ, ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು ಕಾವೇರಿ ನದಿಗೆ ಇಳಿದು ಈಜಾಡಲು ಹೋಗುವುದನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾವೇರಿ ನದಿ ಪಾತ್ರದಲ್ಲಿ ನೈಸರ್ಗಿಕವಾಗಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಕೃಷ್ಣರಾಜಸಾಗರದಿಂದ 80 ಸಾವಿರಕ್ಕೂ ಹೆಚ್ಚಿನ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುಂದೆ ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಡೆಯಲು ವನ್ಯಜೀವಿ ಸಂರಕ್ಷಣೆ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡುವಂತೆ ಹಲಗೂರು ಪಿಎಸ್ಐ ಲೋಕೇಶ್ ಅವರು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಜು.28 ರಂದು ಸೋಮವಾರ ಸಂಜೆ 6 ಗಂಟೆಯಿಂದ ಮುಂದಿನ ಆದೇಶದವರೆಗೆ ಪ್ರವಾಸಿ ತಾಣ ಮುತ್ತತ್ತಿ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಆದೇಶ ಮಾಡಿದ್ದಾರೆ.