ಉನ್ನತ ಶಿಕ್ಷಣ ಉದ್ಯೋಗ ವಿದ್ಯಾರ್ಥಿಗಳ ಗುರಿಯಾಗಿರಬೇಕು

| Published : Oct 10 2025, 01:00 AM IST

ಉನ್ನತ ಶಿಕ್ಷಣ ಉದ್ಯೋಗ ವಿದ್ಯಾರ್ಥಿಗಳ ಗುರಿಯಾಗಿರಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯ ಶಾಲೆಯಲ್ಲಿ ನಡೆದ ‘ಗ್ರ್ಯಾಜುಯೇಶನ್ ಡೇ’ ಕಾರ್ಯಕ್ರಮದಲ್ಲಿ 2024 – 25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾದ 148 ವಿದ್ಯಾರ್ಥಿಗಳಿಗೆ ‘ಗ್ರ್ಯಾಜುಯೇಶನ್ ಸರ್ಟಿಫಿಕೇಟ್’ ನೀಡುವ ಮೂಲಕ ಅಭಿನಂದಿಸಲಾಯಿತು. ಜಿಲ್ಲಾಧಿಕಾರಿಗಳಾದ ಕೆ.ಎಸ್.ಲತಾ ಕುಮಾರಿ ಪೋಷಕರ ಸಹಕಾರದೊಂದಿಗೆ ಶಿಕ್ಷಣದ ಮೂಲಕ ಉನ್ನತ ಸ್ಥಾನ ಪಡೆಯುವ ಗುರಿಯೊಂದಿಗೆ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಾವು ತೆಗೆದುಕೊಳ್ಳುವ ನಿರ್ಧಾರದ ಮೂಲಕ ನಮ್ಮ ಜೀವನ ಮಾರ್ಗವನ್ನು ನಾವೇ ರೂಪಿಸಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ವಿಜಯ ಶಾಲೆಯಲ್ಲಿ ನಡೆದ ‘ಗ್ರ್ಯಾಜುಯೇಶನ್ ಡೇ’ ಕಾರ್ಯಕ್ರಮದಲ್ಲಿ 2024 – 25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾದ 148 ವಿದ್ಯಾರ್ಥಿಗಳಿಗೆ ‘ಗ್ರ್ಯಾಜುಯೇಶನ್ ಸರ್ಟಿಫಿಕೇಟ್’ ನೀಡುವ ಮೂಲಕ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಒಟ್ಟು 2,15,000 (ಎರಡು ಲಕ್ಷದ ಹದಿನೈದು ಸಾವಿರ) ಮೊತ್ತದ ನಗದನ್ನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಹಾಗೂ 600 ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿಷಯವಾರು ಶೇಕಡ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಿ ಅವರನ್ನು ಪುರಸ್ಕರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕೆ.ಎಸ್.ಲತಾ ಕುಮಾರಿ ಪೋಷಕರ ಸಹಕಾರದೊಂದಿಗೆ ಶಿಕ್ಷಣದ ಮೂಲಕ ಉನ್ನತ ಸ್ಥಾನ ಪಡೆಯುವ ಗುರಿಯೊಂದಿಗೆ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಾವು ತೆಗೆದುಕೊಳ್ಳುವ ನಿರ್ಧಾರದ ಮೂಲಕ ನಮ್ಮ ಜೀವನ ಮಾರ್ಗವನ್ನು ನಾವೇ ರೂಪಿಸಿಕೊಳ್ಳಬೇಕು, ಬಾಲಕಿಯರು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವುದರ ಜೊತೆಗೆ ಉನ್ನತ ಉದ್ಯೋಗ ಪಡೆಯುವಂತೆ ಕಿವಿಮಾತು ಹೇಳಿದರು.

ತಮಗೆ ತಮ್ಮ ತಂದೆಯವರು ನೀಡಿದ ಪ್ರೇರಣದಾಯಕ ಮಾತುಗಳು, ತಮ್ಮಲ್ಲಿದ್ದ ಉದ್ವೇಗ, ಉನ್ನತ ಶಿಕ್ಷಣದ ಬಗೆಗಿನ ಕುತೂಹಲ, ವೃತ್ತಿ ಜೀವನದ ದೃಢತೆ ಹೀಗೆ ತಮ್ಮ ವಿದ್ಯಾರ್ಥಿ ಜೀವನದ ಹಲವಾರು ಅನುಭವಗಳನ್ನು ಹಂಚಿಕೊಂಡರು.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಡಿ.ಪಿ. ಮಾತನಾಡುತ್ತಾ ಮಕ್ಕಳಿಗೆ ಬಲವಂತದಿಂದ ಶಿಕ್ಷಣ ನೀಡದೆ ಅವರು ಉನ್ನತ ಶಿಕ್ಷಣದ ಆಯ್ಕೆಯಲ್ಲಿ ಸ್ವತಂತ್ರರಾಗಿರಲು ಬಿಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ತಂದೆತಾಯಿ ನಂಬಿಕೆಯನ್ನು ಎಂದೂ ಹುಸಿಗೊಳಿಸಬೇಡಿ. ಯಾರ ಮಾತಿಗೂ ಕಿವಿಗೊಡದೆ ಗುರಿ ಸಾಧಿಸುವ ಕಡೆ ಗಮನವಿರಿಸಬೇಕು. ಕಾಲೇಜು ಹಂತ ಜೀವನದ ಪ್ರಮುಖ ಘಟ್ಟವಾಗಿದ್ದು ಚಂಚಲ ಮನಸ್ಸನ್ನು ನಿಗ್ರಹಿಸಿ ಮತ್ತು ಜಾಲತಾಣಗಳನ್ನು ಅಭಿವೃದ್ಧಿ ಹೊಂದಲು ಸದ್ಬಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಮಾತನಾಡುತ್ತಾ ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆಗೈದರೂ ಬೆಳವಣಿಗೆಗೆ ಸ್ಫೂರ್ತಿ ನೀಡಿದ ಶಾಲೆ, ಅಲ್ಲಿನ ಶಿಕ್ಷಕರು, ಹಾಗೂ ನಮ್ಮನ್ನು ಸಾಕಿ ಸಲಹಿದ ಪೋಷಕರು ಮತ್ತು ಹಿರಿಯರನ್ನು ಎಂದಿಗೂ ಮರೆಯದೆ ಸದಾ ಗೌರವಿಸುತ್ತಿರಬೇಕು ಎಂದು ತಿಳಿಸಿ ಎಲ್ಲ ವಿದ್ಯಾರ್ಥಿಗಳಿಗೂ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು. ಪ್ರಜ್ಞಾಪೂರ್ವಕವಾಗಿ ಮುನ್ನಡೆಯಿರಿ, ದಯಾಪರರಾಗಿ ಬಾಳಿ, ಎಂದೆಂದಿಗೂ ಕೃತಜ್ಞರಾಗಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಶಾಲೆಯ ಅಧ್ಯಕ್ಷರಾದ ವೈ ಎನ್ ಸುಬ್ಬಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶೈಕ್ಷಣಿಕ ಮುಖ್ಯಸ್ಥೆ ಡಾ. ಶ್ರೀ ಲಕ್ಷ್ಮೀಯವರು ಎಲ್ಲರನ್ನು ಸ್ವಾಗತಿಸಿದರೆ, ಪ್ರಾಂಶುಪಾಲ ನಂದೀಶ ಕೆ.ಎಸ್ ವಂದಿಸಿದರು. ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು ಉಪಸ್ಥಿತರಿದ್ದರು.