ಚನ್ನಗಿರಿ: ಸಾವಯವ ಕೃಷಿ ಪದ್ಧತಿಯಲ್ಲಿ ತೋಟಗಾರಿಕಾ ಪ್ರಮುಖ ಬೆಳೆಗಳಾದ ಮಾವು ಮತ್ತು ತೆಂಗಿನ ಬೆಳೆಗಳನ್ನು ಬೆಳೆದು ಉತ್ತಮವಾದ ಆದಾಯಗಳನ್ನು ಗಳಿಸಲು ಸಾಧ್ಯ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ತಾಲೂಕಿನ ಕಾಕನೂರು ಗ್ರಾಮದಲ್ಲಿ ಮಂಗಳವಾರ ಶ್ರೀ ವಿಶ್ವಗುರು ಬಸವೇಶ್ವರ ಸಮುದಾಯ ಭವನದಲ್ಲಿ ತೋಟಗಾರಿಕಾ ಇಲಾಖೆ, ಫಲದಾಯಿ ಫೌಂಡೇಷನ್ ವತಿಯಿಂದ ಏರ್ಪಡಿಸಿದ್ದ ಸಾವಯವ ತೋಟಗಾರಿಕೆ ಬೆಳೆ ಬೆಳೆಯುವ ಕುರಿತಂತೆ ಮಾಹಿತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಚನ್ನಗಿರಿ ತಾಲೂಕಿನಲ್ಲಿ ಮಾವು ಮತ್ತು ತೆಂಗು ಬೆಳೆಗಾರರು ಹೆಚ್ಚಾಗಿದ್ದು, ಮಾವು ಮತ್ತು ತೆಂಗುಗಳಿಗೆ ಸಾವಯವ ಪದ್ಧತಿಯಲ್ಲಿ ನೈಸರ್ಗಿಕ ಗೊಬ್ಬರಗಳನ್ನು ಬಳಸಿ ಬೆಳೆಯಬೇಕು. ಆಗ ಉತ್ತಮ ದರ ಸಿಗುವ ಜೊತೆಗೆ ಜನರು ಸಹಾ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದರು.
ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ತಜ್ಞ ಬಸವನಗೌಡ ಅವರು ಮಾವು ಮತ್ತು ತೆಂಗಿನ ಬೆಳೆಯಲ್ಲಿ ಸಾವಯವ ಪದ್ಧತಿ ಅಳವಡಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಮಾತನಾಡಿ, ತಾಲೂಕಿನ ಕಾಕನೂರು, ಕೋಗಲೂರು, ಚಿಕ್ಕಬೆನ್ನೂರು, ಸಂತೆಬೆನ್ನೂರು, ಎಸ್.ಬಿ.ಆರ್.ಕಾಲೋನಿ, ತೋಪೇನಹಳ್ಳಿ, ಕಲ್ಲೇನಹಳ್ಳಿ ಪ್ರದೇಶಗಳಲ್ಲಿನ 500 ಹೆಕ್ಟರ್ ಪ್ರದೇಶದಲ್ಲಿ ಮಾವು, ತೆಂಗು ಬೆಳೆಯುತ್ತಿದೆ. ತರಬೇತಿಗಳ ಮೂಲಕ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಎಂದರು.
ಇದೇ ಸಂದರ್ಭದಲ್ಲಿ ತೋಟಗಾರಿಕಾ ಬೆಳೆಯಲ್ಲಿ ಸಾವಯವ ಪದ್ಧತಿ ಅನುಸರಿಸಿದ ರೈತರಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಕಾರ್ಯಾಗಾರದಲ್ಲಿ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್, ಸ್ವರ್ಡ್-ಕೆ ಸಂಸ್ಥೆಯ ಚನ್ನಬಸಪ್ಪ, ಫಲದಾಯಿ ಫೌಂಡೇಷನ್‌ನ ಶ್ರೀಶೈಲ ತೋಟಗಾರಿಕಾ ಬೆಳೆಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
- - -
-29ಕೆಸಿಎನ್‌ಜಿ1:ಕಾರ್ಯಾಗಾರವನ್ನು ಶಾಸಕ ಬಸವರಾಜು ವಿ.ಶಿವಗಂಗಾ ಉದ್ಘಾಟಿಸಿದರು.