ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಯಕ್ಷದೀವಿಗೆ ತುಮಕೂರು ಕಲಾತಂಡವು ಸಿದ್ಧಗಂಗಾಮಠದಲ್ಲಿ ನಡೆಸಿಕೊಟ್ಟ ‘ಜಗಜ್ಯೋತಿ ಬಸವೇಶ್ವರ’ ಎಂಬ ಯಕ್ಷಗಾನ ಪ್ರದರ್ಶನವು ಬಸವೇಶ್ವರರ ಬದುಕು ಹಾಗೂ ಸಂದೇಶಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿತು.12ನೇ ಶತಮಾನದ ಕ್ರಾಂತಿಕಾರಿ ವಚನಕಾರರಾದ ಬಸವಣ್ಣನವರು ಸಮಾಜದಲ್ಲಿ ಕಂಡ ಅಸಮಾನತೆ ಹಾಗೂ ವೈರುಧ್ಯಗಳನ್ನು ಚಿತ್ರಿಸಿದ ಯಕ್ಷಗಾನವು, ಅವರು ಅನುಷ್ಠಾನಕ್ಕೆ ತಂದ ಸಮಾಜ ಸುಧಾರಣೆಗಳನ್ನು ವಿಶಿಷ್ಟವಾಗಿ ಚಿತ್ರಿಸಿತು. ಬಸವಣ್ಣನವರ ಬಾಲ್ಯ, ತಾರುಣ್ಯ, ಬಿಜ್ಜಳನ ಮಂತ್ರಿಯಾಗಿ ಅವರು ಎದುರಿಸಿದ ಸವಾಲುಗಳು, ವಚನಕಾರರಾಗಿ ಅವರು ಮೆರೆದ ಆದರ್ಶಗಳನ್ನು ಯಕ್ಷಗಾನವು ಸಾದರಪಡಿಸಿತು.
ಸರಳ ಭಕ್ತಿ, ಜಾತೀಯತೆ ಹಾಗೂ ಅಂಧಃಶ್ರದ್ಧೆಗಳ ವಿರುದ್ಧ ಹೋರಾಟ, ಢಾಂಬಿಕ ಆಚರಣೆಗಳ ಪೊಳ್ಳುತನ, ಮಹಿಳೆಯರಲ್ಲಿ ಗೌರವ, ಸಂಪತ್ತಿನ ಅಶಾಶ್ವತೆ, ಷಟ್‌ಸ್ಥಲ ಸಿದ್ಧಾಂತ ಇವುಗಳನ್ನು ಅನುಭವ ಮಂಟಪದ ಮೂಲಕ ಚರ್ಚಿಸಿದ ಬಸವಣ್ಣನವರ ವಿಚಾರಗಳನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸಲಾಯಿತು.ಹಿಮ್ಮೇಳದಲ್ಲಿ ಭಾಗವತರಾಗಿ ದೀಪಕ್ ತುಳುಪುಳೆ, ಚೆಂಡೆ-ಮದ್ದಳೆ ವಾದಕರಾಗಿ ಅವಿನಾಶ್ ಬೈಪಾಡಿತ್ತಾಯ, ಪೃಥ್ವಿ ಬಡೆಕ್ಕಿಲ, ಚಕ್ರತಾಳದಲ್ಲಿ ಮುರಳಿ ಬಾಯಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ಸಿಬಂತಿ ಪದ್ಮನಾಭ (ಬಸವೇಶ್ವರ), ಆರತಿ ಪಟ್ರಮೆ (ಬಿಜ್ಜಳ), ಶಶಾಂಕ ಅರ್ನಾಡಿ (ಜಾತವೇದಿ ಮುನಿ), ಈಶ್ವರಚಂದ್ರ ನಿಡ್ಲೆ (ತೈಲಪ), ಮಾಲತಿ ಪಟ್ರಮೆ (ನಾರದ), ದಾಮೋದರ ನಾಯಕ್ (ಮಾದರಸ), ಹೇಮಲತಾ ಎಂ.ಎಸ್. (ಸಿದ್ಧರಸ), ಲಹರಿ ಟಿ. ಜೆ. (ಬಲದೇವ), ಸಾತ್ವಿಕ್ ನಾರಾಯಣ ಭಟ್ (ದೇವೇಂದ್ರ ಹಾಗೂ ಭೈರವ), ಮನಸ್ವಿ ಭಟ್ (ಮಾಯಾದೇವಿ), ಸಂವೃತ ಶರ್ಮಾ (ಬಾಲ ಬಸವಣ್ಣ ಹಾಗೂ ವಿಷ್ಣುಶರ್ಮಾ), ಧನುಷ್ ಓಂಕಾರ್ (ಈಶ್ವರ), ನಿಶಾಂತ್ ಓಂಕಾರ್ (ಮಾದಲಾಂಬಿಕೆ), ಜನ್ಯ ಟಿ. ಜೆ. (ಗಂಗಾಂಬಿಕೆ), ಫಾಲ್ಗುಣಿ ಶ್ರೀಧರ್ (ವಾಯು ಹಾಗೂ ಮಾತಂಗ), ಅದಿತಿ ಕೃಷ್ಣ (ಅಗ್ನಿ), ಅದೈತ್ (ವರುಣ) ಹಾಗೂ ಆರ್ಯ (ನಿಋತಿ) ಭಾಗವಹಿಸಿದರು.
ತಲೆಂಗಳ ರಾಮಕೃಷ್ಣ ಅವರು ರಚಿಸಿದ ಪ್ರಸ್ತುತ ಪ್ರಸಂಗವು ಯಕ್ಷಗಾನ ರಂಗದಲ್ಲಿ ಅಪರೂಪ ಎನಿಸುವ ಪ್ರಯತ್ನವಾಗಿದೆ. ಯಕ್ಷದೀವಿಗೆಯ ಅಧ್ಯಕ್ಷೆ ಆರತಿ ಪಟ್ರಮೆಯವರು ತಂಡಕ್ಕೆ ತರಬೇತಿ ನೀಡಿ ನಿರ್ದೇಶಿಸಿದ್ದರು.