ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು ಮನುಷ್ಯನ ಗೌರವಯುತ ಅಂತಿಮ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಒತ್ತುವರಿಯಾಗಿರುವ ಸ್ಮಶಾನಗಳ ತೆರವು ಹಾಗೂ ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಕರುನಾಡ ವಿಜಯಸೇನೆಯ ಹೆಬ್ಬೂರು ಹೋಬಳಿ ಘಟಕ ಅಧ್ಯಕ್ಷ ಶ್ರೀನಿವಾಸ್ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.ರಸ್ತೆ ತಡೆ ನಡೆಸಿ, ಸರಕಾರದ, ಅದರಲ್ಲಿಯೂ ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿದರು.ಈ ಸಂಬಂಧ ಮನವಿ ಪತ್ರವನ್ನು ತುಮಕೂರು ತಹಶೀಲ್ದಾರ್ ರಾಜೇಶ್ವರಿ ಅವರಿಗೆ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಕರುನಾಡ ವಿಜಯಸೇನೆಯ ಹೆಬ್ಬೂರು ಹೋಬಳಿ ಘಟಕದ ಅಧ್ಯಕ್ಷ ಶ್ರೀನಿವಾಸ್ ಸೋಪನಹಳ್ಳಿ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು ಹೋಬಳಿಯಲ್ಲಿ 78 ಕಂದಾಯ ಗ್ರಾಮಗಳಿದ್ದು, ಇವುಗಳಲ್ಲಿ 26ಗ್ರಾಮಗಳಿಗೆ ಮಾತ್ರ ಸರಕಾರದಿಂದ ಸ್ಮಶಾನ ನಿಗದಿ ಪಡಿಸಲಾಗಿದೆ. ಉಳಿದ ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲ. ದಿನೇ ದಿನ ಕೃಷಿ ಭೂಮಿ ಕಿರಿದಾಗುತ್ತಿದೆ. ಕೃಷಿ ಭೂಮಿ ಇಲ್ಲದ ಜನರು ತಮ್ಮ ಕುಟುಂಬದಲ್ಲಿ ಯಾರಾದರೂ ಸಾವನ್ನಪಿದರೆ ಸರಕಾರಿ ಜಾಗಗಳಾದ ಕೆರೆ, ಕುಂಟೆಗಳ ಬದಿಯಲ್ಲಿ, ರಸ್ತೆ ಬದಿಯಲ್ಲಿ ಶವ ಸಂಸ್ಕಾರ ಮಾಡುವುದು ವಾಡಿಕೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶವ ಸಂಸ್ಕಾರಕ್ಕೆ ಕೆರೆ, ಕಟ್ಟೆಗಳನ್ನು ಬಳಸುವಂತಿಲ್ಲ ಎಂದು ಸರಕಾರ ಆದೇಶ ಹೊರಡಿಸಿದ ನಂತರ, ರಸ್ತೆ ಬದಿಯಲ್ಲಿ ಹೂಳಲು ಆಯಾಯ ಭಾಗದ ಜನರು ಅವಕಾಶ ನೀಡದ ಕಾರಣ ಶವಸಂಸ್ಕಾರಕ್ಕೆ ತುಂಬ ತೊಂದರೆಯಾಗಿದೆ ಎಂದರು.
ಸತ್ತವರ ದುಖಃಕ್ಕಿಂತ ಆತನ ಶವಸಂಸ್ಕಾರವೇ ದೊಡ್ಡ ತಲೆನೋವಾಗಿ ಪರಿಣಿಮಿಸಿದೆ. ಹಾಗಾಗಿ ಸರಕಾರ ಗ್ರಾಮಾಂತರ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಸ್ಮಶಾನ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾಡಳಿತ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸುಮಾರು 26 ಗ್ರಾಮಗಳಿಗೆ ಸ್ಮಶಾನ ಮಂಜೂರು ಮಾಡಿ, ಆಯಾಯ ಗ್ರಾಮಪಂಚಾಯಿತಿಯ ಸುಪರ್ದಿಗೆ ನೀಡಿದೆ. ಆದರೆ ಅವುಗಳಲ್ಲಿ ಕೆಲವನ್ನು ಬಲಾಢ್ಯರು ಒತ್ತುವರಿ ಮಾಡಿ, ತೆಂಗು, ಅಡಿಕೆ ತೋಟಗಳನ್ನು ಮಾಡಿ, ಸಾರ್ವಜನಿಕ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದರು.ಗರುಗದಕುಪ್ಪೆ, ದೊಮ್ಮನ ಕುಪ್ಪೆ, ಲಕ್ಕೇನಹಳ್ಳಿ , ರಂಗನಾಥಪುರ, ಸೀಗೆಪಾಳ್ಯ, ನಾಗವಲ್ಲಿ ಗ್ರಾಮಗಳಿಗೆ ಕಂದಾಯ ಇಲಾಖೆಯಿಂದ ಸ್ಮಶಾನಕ್ಕೆ ಜಾಗ ಮೀಸಲಿಡಲಾಗಿದೆ. ಆದರೆ ವಾಸ್ತವದಲ್ಲಿ ಸ್ಮಶಾನಕ್ಕೆ ಮೀಸಲಿರುವ ಜಾಗದಲ್ಲಿ ಈಗಾಗಲೇ ತೋಟ, ತುಡಿಕೆಗಳು ಇರುವುದರಿಂದ ಅಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿ ಪಡಿಸುತಿದ್ದು, ಈ ಬಗ್ಗೆ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಸ್ಮಶಾನ ಒತ್ತುವರಿ ತೆರವಿಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಸ್ಮಶಾನ ಜಾಗಗಳನ್ನು ಸಮರ್ಪಕವಾಗಿ ಗುರುತಿಸಿ, ಒತ್ತುವರಿ ತೆರವು ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಶ್ರೀನಿವಾಸ್ ತಿಳಿಸಿದರು.ಮಾನವ ಜಾಗೃತಿ ದಳದ ರಾಜ್ಯಾಧ್ಯಕ್ಷ ಲೋಕೇಶ್ ಮಾತನಾಡಿ, ಸರಕಾರದ ಆದೇಶದಂತೆ ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು ಎಂಬ ನಿಯಮ ರೂಪಿಸಿದೆ. ಸರಕಾರದ ಆದೇಶದ ಅನ್ವಯ ಸ್ಮಶಾನ ಗುರುತಿಸುವ ಮುನ್ನ ಸ್ಥಳ ಪರಿಶೀಲನೆ ಮಾಡದ ಕಾರಣ, ಈಗಾಗಲೇ ವ್ಯವಸಾಯ ಮಾಡುತ್ತಿರುವ ಜಾಗಗಳನ್ನು ಸ್ಮಶಾನ ಎಂದು ಪಹಣಿಯಲ್ಲಿ ನಮೂದು ಮಾಡಲಾಗಿದೆ. ಈ ಗೊಂದಲವನ್ನು ಜಿಲ್ಲಾಡಳಿತ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ತಹಸೀಲ್ದಾರ್ ರಾಜೇಶ್ವರಿ ಅವರು ಮುಂದಿನ ಒಂದು ತಿಂಗಳಲ್ಲಿ ಇಡೀ ಕ್ಷೇತ್ರದ ಸ್ಮಶಾನ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಕರುನಾಡ ವಿಜಯಸೇನೆಯ ಪದಾಧಿಕಾರಿಗಳು, ಮಾನವ ಜಾಗೃತಿ ದಳದ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.