ನಾರಾಯಣಪುರ ಬಲದಂಡೆ ನಾಲೆ ಹಾಗೂ ರಾಂಪೂರ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ಡಿಸೆಂಬರ್ ವರೆಗೂ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗುರುವಾರ ಲಿಂಗಸುಗೂರು ಪಟ್ಟಣದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಸವಸಾಗರ ವೃತ್ತದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ನಾರಾಯಣಪುರ ಬಲದಂಡೆ ನಾಲೆ ಹಾಗೂ ರಾಂಪೂರ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ಡಿಸೆಂಬರ್ ವರೆಗೂ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗುರುವಾರ ಲಿಂಗಸುಗೂರು ಪಟ್ಟಣದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150(ಎ) ಬಸವಸಾಗರ ವೃತ್ತದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ತಾಲೂಕಿನ ಗುರುಗುಂಟಾದಿಂದ ಬೈಕ್ ರ್‍ಯಾಲಿ ಮೂಲಕ ಲಿಂಗಸುಗೂರು ಪಟ್ಟಣಕ್ಕೆ ಆಗಮಿಸಿದ ರೈತರು ಪಟ್ಟಣದ ಬಸವ ಸಾಗರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕುಳಿತು ಡಿಸೆಂಬರ್ ತಿಂಗಳ ವರೆಗೂ ಬಲದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶ ಜಮೀನುಗಳಿಗೆ ನೀರು ಹರಿಸಬೇಕು ಇಲ್ಲದೇ ಹೋದರೆ ಸಾವಿರಾರು ಹೇಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿ ಭತ್ತ, ಮೆಣಸಿನ ಕಾಯಿ ಸಂಪೂರ್ಣ ಹಾಳಾಗಲಿವೆ. ಬೆಳೆ ಕೈಗೆ ಬರಲು ಡಿಸೆಂಬರ್ ತಿಂಗಳವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಮುಂಗಾರು ಬೆಳೆಗೆ ವಾರಬಂದಿ ಪದ್ದತಿಯಡಿ ನೀರು ಹರಿಸಿದ್ದರಿಂದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಲ್ಲ ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ. ಅಲ್ಲದೇ ವಾರಬಂದಿ ಪದ್ಧತಿಯಡಿ ನೀರು ಹರಿಸಿದಾಗ ರೈತರ ಜಮೀನುಗಳಿಗೆ ನೀರು ತಲುಪಿದ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಗಮನಿಸಬೇಕು ಇಲ್ಲದೇ ಹೋದರೆ ಬರಗಾಲದಿಂದ ತತ್ತರಿಸಿದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಚಾರ ಅಸ್ತವ್ಯಸ್ತ:

ಬಲದಂಡೆ ನಾಲೆಗೆ ಡಿಸೆಂಬರ್ ವರೆಗೆ ನೀರು ಹರಿಸಬೇಕೆಂದು ರೈತರು ರಾಷ್ಟ್ರೀಯ ಹೆದ್ದಾರಿ ಬಂದ್‌ಗೊಳಿಸಿ ಹೋರಾಟ ನಡೆಸಿದ್ದರಿಂದ ಪಟ್ಟಣದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಲ್ಲದೇ ಕಿ.ಮೀ. ದೂರದ ವರೆಗೂ ಬಸ್, ಲಾರಿ ಸೇರಿದಂತೆ ವಾಹನಗಳು ನಿಂತಿದ್ದವು.

ಹೆದ್ದಾರಿ ತಡೆಯ ಹೋರಾಟದಲ್ಲಿ ರೈತ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ತಾಲೂಕ ಅಧ್ಯಕ್ಷ ದುರ್ಗಾಪ್ರಸಾದ. ರಾಮಣ್ಣ ಅಡಿಕೇರ ಗುರುಗುಂಟಾ, ಮಹಾದೇವಿ ಬೇವಿನಾಳಮಠ, ಉಮಾದೇವಿ ನಾಯಕ, ದೇವಕಿ ನಾಯಕ, ಸೋಮರೆಡ್ಡಿ, ನಾಗಪ್ಪ ಪೂಣೇದ, ಮಲ್ಲೇಶ ನಾಯಕ, ಅಮರಯ್ಯ ಗುಡದನಾಳ, ದುರುಗಪ್ಪ ಗೌಡೂರು, ಹನುಮಂತ ಹಳ್ಳಿ ಸೇರಿದಂತೆ ನೂರಾರು ರೈತರು ಇದ್ದರು.

---

ಬಾಕ್ಸ್:

ರೈತರು, ತಹಸೀಲ್ದಾರರ ಮಧ್ಯೆ ವಾಗ್ವಾದ

ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ನಡೆಸುತ್ತದ ಹೆದ್ದಾರಿ ಬಂದ್ ಹೋರಾಟದ ಸ್ಥಳಕ್ಕೆ ಬಂದ ತಹಸೀಲ್ದಾರರು ರೈತರಿಂದ ಮನವಿ ಸ್ವೀಕರಿಸಲು ಆಗಮಿಸಿದಾಗ ತಹಸೀಲ್ದಾರರು ರೈತರ ಸಮಸ್ಯೆ ಸ್ಪಂದಿಸುತ್ತಿಲ್ಲ. ಮೊಬೈಲ್ ಕರೆ ಮಾಡಿದರೂ ಸ್ವೀಕರಿ ಸುವುದಿಲ್ಲ. ರೈತರ ಬೇಡಿಕೆಗೆ ಸ್ಪಂದಿಸದ ನಿಮಗೇ ಮನವಿ ಪತ್ರ ಸಲ್ಲಿಸುವುದಿಲ್ಲ ಜಿಲ್ಲಾಧಿಕಾರಿಗಳನ್ನು ಕರೆಯಿಸಿ ಮನವಿ ಪತ್ರ ನೀಡುತ್ತೇವೆ ಎಂದು ಅಧ್ಯಕ್ಷ ದುರ್ಗಾಪ್ರಸಾದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಹಸೀಲ್ದಾರ್‌ ಸತ್ಯಮ್ಮ ಮಾತನಾಡಿ, ರೈತರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ನೀವು ಸರಿಯಾದ ಭಾಷೆಯಲ್ಲಿ ಮಾತನಾಡಿ ಎಂದರು. ಈ ವೇಳೆ ರೈತರು ಮತ್ತು ತಹಸೀಲ್ದಾರರ ಮಧ್ಯೆ ವಾಗ್ವಾದ ನಡೆಯಿತು.

---

05ಕೆಪಿಎಲ್ಎನ್ಜಿ01 : ಲಿಂಗಸುಗೂರು ಪಟ್ಟಣದಲ್ಲಿ ರೈತರು ಬಸವಸಾಗರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬಲದಂಡೆ ನಾಲೆ ನೀರು ಹರಿಸಲು ಆಗ್ರಹಿಸಿದರು.