ಪಂಚಮಸಾಲಿ ಮೀಸಲಿಗಾಗಿ 10ರಂದು ಹೆದ್ದಾರಿ ತಡೆ

| Published : Nov 08 2023, 01:00 AM IST

ಸಾರಾಂಶ

ಮುಂದಿನ ಹೋರಾಟದ ಚೈತನ್ಯಕ್ಕೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ: ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಮುಂದಿನ ಹೋರಾಟದ ಚೈತನ್ಯಕ್ಕೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ: ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ, ಲಿಂಗಾಯತ ಉಪ ಸಮಾಜಗಳ ಕೇಂದ್ರದ ಒಬಿಸಿ ಮೀಸಲಾತಿಗೆ ಶಿಫಾರಸ್ಸು ಮಾಡಲು ಒತ್ತಾಯಿಸಿ ನ.10ರಂದು ನಗರದ ಹೊರ ವಲಯದ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮುಂಭಾಗ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಹೆದ್ದಾರಿ ತಡೆ ಹೋರಾಟ ಹಮ್ಮಿಕೊಂಡಿರುವುದಾಗಿ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ, ಹೆದ್ದಾರಿ ತಡೆ ಹೋರಾಟ ಆರಂಭಿಸಲಿದ್ದು, ಕಳೆದ 3 ವರ್ಷದಿಂದಲೂ ಹೋರಾಟ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ನಮ್ಮ ಬೇಡಿಕೆ ಈಡೇರಿಸಬೇಕಿದೆ. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟಕ್ಕೂ ಸಜ್ಜಾಗಿದ್ದೇವೆ. ನ.10ರ ನಂತರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜದ ನಿಲುವು ಏನೆಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶೆಪ್ಪನವರ್‌, ಅರವಿಂದ ಬೆಲ್ಲದ್ ಸೇರಿ ಅನೇಕ ನಾಯಕರು ಹೋರಾಟದಲ್ಲಿ ಭಾಗವಹಿಸುವರು.

ಬಜೆಟ್‌ ನಂತರ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದ್ದ ಸಿಎಂ 4 ತಿಂಗಳು ಕಳೆದರೂ ಸಭೆ ಕರೆದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟ ಮತ್ತಷ್ಟು ತೀವ್ರತೆ ಪಡೆಯಲಿದೆ ಎಂದು ಎಚ್ಚರಿಸಿದರು. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ, ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲು ಸರ್ಕಾರಕ್ಕೆ ಸದ್ಭುದ್ಧಿ, ಮುಂದಿನ ಹೋರಾಟಕ್ಕೂ ಚೈತನ್ಯ ಕಾರಣಕ್ಕೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲಾ ತಾಲೂಕಿನಲ್ಲೂ ಜಾಗೃತಿ:

ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಮಾತನಾಡಿ, ನ.10ರ ಹೋರಾಟದಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲಾ ತಾಲೂಕಿಗೂ ಭೇಟಿ ನೀಡಿ, ಸಮಾಜ ಬಾಂಧವರಿಗೆ ಕರೆ ನೀಡಲಾಗಿದೆ. ಚನ್ನಗಿರಿಯಲ್ಲಿ ಮಂಗಳವಾರ ಭೇಟಿ ನೀಡಿ, ಜಾಗೃತಿ ಮೂಡಿಸಲಾಗುತ್ತಿದೆ. ನ.8ಕ್ಕೆ ಹೊನ್ನಾಳಿ. ನ.9ಕ್ಕೆ ಹರಿಹರಕ್ಕೆ ಭೇಟಿ ನೀಡಲಾಗುವುದು. 1ನೇ ಹಂತದ ಪಾದಯಾತ್ರೆ, 2ನೇ ಹಂತ ಶರಣು ಶರಣಾರ್ಥಿ, 3ನೇ ಹಂತ ಪ್ರತಿಜ್ಞೆ ಹೋರಾಟ ಆಗಿದೆ ಎಂದರು.

ರಾಜಕೀಯ ದೃಷ್ಟಿಯಿಂದ, ಚುನಾವಣೆ ಹಿನ್ನೆಲೆಯಲ್ಲಿ ಸಮಾಜ ಸಂಘಟನೆ ಮಾಡುತ್ತಿಲ್ಲ. ಸಮಾಜದ ಭವಿಷ್ಯವಾದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಮೀಸಲಾತಿಗಾಗಿ ಹೋರಾಟ ನಡೆದಿದೆ. ಸ್ವಾಮೀಜಿ ಕೆಲಸವೆಂದರೆ ಮನೆಗಳಿಗೆ ಹೋಗಿ ಪಾದಪೂಜೆ, ಕಾಣಿಕೆ ಪಡೆಯುವುದಲ್ಲ. ಸಮಾಜಕ್ಕಾಗಿ 718 ಕಿಮೀ ಪಾದಯಾತ್ರೆ ಕೂಡಲ ಸಂಗಮದ ಶ್ರೀ ಮಾಡಿದ್ದಾರೆ. ನಮ್ಮ ಹೋರಾಟ ಸ್ವಾರ್ಥಕ್ಕಲ್ಲ. ಪರಿಷ್ಕರಣೆ ಮಾಡಿ, ಎಲ್ಲ ಸಮುದಾಯಗಳಿಗೆ ಮೀಸಲಾತಿ ಕೊಡಬೇಕು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಕೆಲ ಸಮಾಜಗಳಿಗೆ ಶಿಫಾರಸ್ಸು ಮಾಡಿದ್ದು, ಪಂಚಮಸಾಲಿ, ಲಿಂಗಾಯತ ಉಪ ಸಮಾಜಗಳಿಗೂ ಮಾಡಲಿ ಎಂದು ಒತ್ತಾಯಿಸಿದರು.

ಅಭಿ ಕಾಟನ್ಸ್ ಮಾಲೀಕ ನ್ಯಾಮತಿ ಬಕ್ಕೇಶ್, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಅಶೋಕ ಗೋಪನಾಳ್‌, ಎಸ್‌.ಓಂಕಾರಪ್ಪ, ಮಂಜುನಾಥ ಪೈಲ್ವಾನ್‌, ಈಶ್ವರಪ್ಪ, ಮಾಲತೇಶ ಇತರರಿದ್ದರು.

...................... ಪಂಚಮಸಾಲಿ ಸಮಾಜ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕ ಪ್ರಯತ್ನ ಮಾಡದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸಮಾಜದ ನಿಲುವು ಕಾಣಬಹುದು. 2 ಎ ಮೀಸಲಾತಿಗೆ ಕಾನೂನು ತಜ್ಞರ ಸಲಹೆ, ಸೂಚನೆ ತಡವಾದರೆ ಕೇಂದ್ರದ ಒಬಿಸಿಗಾದರೂ ಶಿಫಾರಸ್ಸು ಮಾಡಲಿ. ನಮ್ಮ ಸಮಾಜಕ್ಕಷ್ಟೇ ಎಲ್ಲಾ ಸಮಾಜಕ್ಕೂ

ಮೀಸಲಾತಿ ಸಿಗಲೆಂಬುದು ಸಮುದಾಯದ ಉದ್ದೇಶ.

ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಪೀಠ, ಕೂಡಲ ಸಂಗಮ.

........... ದಲಿತ ಸಿಎಂ ಆಗಲಿ, ಆ ಸಮಾಜಕ್ಕೂ ನ್ಯಾಯ ಸಿಗಲಿ

ದಲಿತ ಸಿಎಂ ಆಗಬೇಕು. ಆ ಸಮಾಜಕ್ಕೂ ನ್ಯಾಯ ಸಿಗಬೇಕು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ದಲಿತ ಸಿಎಂ ಕೂಗಿಗೆ ಧ್ವನಿಗೂಡಿಸಿದ್ದಾರೆ. ದಲಿತ ಸಿಎಂ ಮಾಡುವುದು ಆಯಾ ಪಕ್ಷಗಳ ನಿರ್ಧಾರಕ್ಕೆ ಬಿಟ್ಟ ವಿಚಾರ. ಆಯಾ ಸಮಾಜಕ್ಕೆ ನ್ಯಾಯ ಸಿಗಬೇಕು. ಲಿಂಗಾಯತ, ಒಕ್ಕಲಿಗರು ಹೇಗೆ ಮುಖ್ಯಮಂತ್ರಿ ಆದರೋ, ಅದೇ ರೀತಿ ದಲಿತರೂ ಮುಖ್ಯಮಂತ್ರಿ ಆಗಬೇಕು ಎಂದರು.