ಇಂದು ಹೆದ್ದಾರಿ ತಡೆ, 28ರಂದು ದಾವಣಗೆರೆ ಬಂದ್

| Published : Jun 25 2025, 12:34 AM IST

ಸಾರಾಂಶ

ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ ನಿಷೇಧವಿದ್ದರೂ ಡ್ಯಾಂನ ಬಲದಂಡೆ ನಾಲೆ ಸೀಳಿ, ನೀರು ಪೂರೈಸುವ ಕಾಮಗಾರಿ ಕೈಗೊಂಡಿದ್ದಾರೆ. ಈ ತಕ್ಷಣವೇ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ-48 ಬಂದ್ ಹಾಗೂ ಜೂ.28ರಂದು ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

- ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಾಡಾ ಕ್ರಾಸ್ ಬಳಿ ರಸ್ತೆ ತಡೆ: ರೇಣು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ ನಿಷೇಧವಿದ್ದರೂ ಡ್ಯಾಂನ ಬಲದಂಡೆ ನಾಲೆ ಸೀಳಿ, ನೀರು ಪೂರೈಸುವ ಕಾಮಗಾರಿ ಕೈಗೊಂಡಿದ್ದಾರೆ. ಈ ತಕ್ಷಣವೇ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ-48 ಬಂದ್ ಹಾಗೂ ಜೂ.28ರಂದು ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.25ರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ರಸ್ತೆ ತಡೆ ನಡೆಯಲಿದೆ. ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ಒಳಪಡುವ ಎಲ್ಲ ತಾಲೂಕುಗಳಲ್ಲೂ ಬಂದ್ ಆಚರಿಸುವ ಮೂಲಕ ಸರ್ಕಾರದ ನಡೆ ಖಂಡಿಸಲಿದ್ದೇವೆ ಎಂದರು.

ಬಫರ್‌ ಝೋನ್‌ನಲ್ಲೇ ಪೈಪ್‌ಲೈನ್:

ಬಹುಗ್ರಾಮ ಕುಡಿಯುವ ನೀರಿನ ಘಟಕ ನಿರ್ಮಿಸಲು ಭದ್ರಾ ಬಲದಂಡೆ ನಾಲೆಯ ಬಫರ್ ಝೋನ್‌ನಲ್ಲೇ ಪೈಪ್ ಲೈನ್ ತೆಗೆಯಲು ನಾಲೆಯ ಕೆಳಭಾಗದಲ್ಲಿ ಏಳೆಂಟು ಅಡಿ ಗುಂಡಿ ತೆಗೆದಿರುವ ಜಾಗ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಇದು ತಾಯಿಯ ಎದೆಯನ್ನೇ ಸೀಳಿದಂತೆ. ಅಂತಹ ದುಷ್ಕಾರ್ಯವನ್ನು ರಾಜ್ಯ ಸರ್ಕಾರ, ನೀರಾವರಿ ಇಲಾಖೆ ಅಧಿಕಾರಿಗಳು ಮಾಡಲು ಹೊರಟಿದ್ದಾರೆ ಎಂದರು.

4 ದಿನಗಳಿಂದ ಕಾಮಗಾರಿ ವಿರುದ್ಧ ನಿರಂತರ ಹೋರಾಟ ನಡೆಸಿದ್ದು, ಇದೀಗ ವಿವಿಧ ಹಂತಗಳ ಹೋರಾಟ ಕೈಗೊಂಡಿದ್ದೇವೆ. ಸರ್ಕಾರ ಸೌಜನ್ಯಕ್ಕೂ ಭದ್ರಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು, ರೈತರ ಸಭೆ ಕರೆಯದೇ ಕಾಮಗಾರಿ ಕೈಗೊಂಡಿದೆ. ಇದು ಅಚ್ಚುಕಟ್ಟು ರೈತರ ಕತ್ತು ಹಿಸುಕುವ ಕೃತ್ಯ ಎಂದು ಕಟುವಾಗಿ ಟೀಕಿಸಿದ ಅವರು, ದಾವಣಗೆರೆ, ಶಿವಮೊಗ್ಗ ಜಿಲ್ಲೆ ರೈತರ ಪಾಲಿಗೆ ಇದು ಅತ್ಯಂತ ಮಾರಕ ಕಾಮಗಾರಿ ಎಂದು ದೂರಿದರು.

₹1600 ಕೋಟಿ ವೆಚ್ಚದ ಕಾಮಗಾರಿಗೆ ಬಿಜೆಪಿ ಸರ್ಕಾರದಲ್ಲೇ ಅನುಮೋದನೆ ನೀಡಲಾಗಿತ್ತು. ಆಗ ಭದ್ರಾ ಡ್ಯಾಂ ಹಿನ್ನೀರಿನಿಂದ ನೀರನ್ನು ಲಿಫ್ಟ್ ಮಾಡಿ ಇಲ್ಲವೇ ಅಕ್ವಾಡೇಟರ್ ನಿರ್ಮಿಸಿ, ನೀರೊಯ್ಯಬೇಕೆಂದಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಯೋಜನೆ ಮೂಲ ಉದ್ದೇಶವನ್ನೇ ಗಾಳಿಗೆ ತೂರಿದೆ. ನಮ್ಮ ಪ್ರಾಣ ಹೋದರೂ ಇಂತಹ ಅಪಾಯಕಾರಿ ಕಾಮಗಾರಿ ಕೈಗೊಳ್ಳಲು ಬಿಡುವುದಿಲ್ಲ. ಸರ್ಕಾರ ಹೋರಾಟಕ್ಕೆ ಸ್ಪಂದಿಸದಿದ್ದರೆ ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.

ಪಕ್ಷದ ಮುಖಂಡರಾದ ಬಿ.ಎಂ. ಸತೀಶ ಕೊಳೇನಹಳ್ಳಿ, ಎಂ.ಬಸವರಾಜ ನಾಯ್ಕ, ಚಂದ್ರಶೇಖರ ಪೂಜಾರ, ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಧನಂಜಯ ಕಡ್ಲೇಬಾಳು, ನರೇಂದ್ರ ಗೌಡ, ಮಾರುತಿ ನಾಯ್ಕ, ಪ್ರವೀಣ ಜಾಧವ್, ಎನ್.ಎಚ್. ಹಾಲೇಶ ನಾಯ್ಕ, ಪಂಜು ಇತರರು ಇದ್ದರು.

- - -

(ಬಾಕ್ಸ್) * ಕುಮಾರ ಬಂಗಾರಪ್ಪ, ಬಿ.ಪಿ.ಹರೀಶ ವಿರುದ್ಧವೂ ಆಕ್ರೋಶ ದಾವಣಗೆರೆ: ಕುಮಾರ ಬಂಗಾರಪ್ಪಗೆ ಬಿಜೆಪಿ ತತ್ವ, ಸಿದ್ಧಾಂತದ ಗಂಧ ಗಾಳಿಯೂ ಗೊತ್ತಿಲ್ಲ. ನೀವು ಯಾರು ವಿಜಯೇಂದ್ರ ಬದಲಾವಣೆ ಮಾಡುವುದಕ್ಕೆ? ಆ ತಾಕತ್ತು ಇದೆಯಾ ಎಂದು ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ಹರಿಹಾಯ್ದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಾಜಿ ಸಚಿವ ಕುಮಾರ ಬಂಗಾರಪ್ಪ, ಬಿ.ಪಿ.ಹರೀಶ ಹೇಳಿಕೆಗಳಿಗೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ನನ್ನನ್ನು ಉಚ್ಚಾಟನೆ ಮಾಡುವಂತೆ ಹೇಳಲು ನೀನು ಯಾವ ದೊಡ್ಡ ಮನುಷ್ಯ? ಹಿಂದಿನಿಂದಲೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು ನೀವು. ಲೋಕಸಭೆ ಚುನಾವಣೆಯಲ್ಲಿ ನಿಮ್ಮದೇ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಎಷ್ಟು ಲೀಡ್ ಕೊಡಿಸಿದ್ದೀರಿ ಎಂದು ಶಾಸಕ ಹರೀಶ ವಿರುದ್ಧವೂ ವಾಗ್ದಾಳಿ ನಡೆಸಿದರು.

ಭದ್ರಾ ನೀರಿನ ಹೋರಾಟವನ್ನು ನಾವು ಶನಿವಾರದಿಂದಲೇ ಮಾಡುತ್ತಿದ್ದೇವೆ. ಆದರೆ, ಸೋಮವಾರ ಇಲ್ಲಿ ಕೆಲವರು ಡಿಸಿಗೆ ಮನವಿ ಅರ್ಪಿಸುತ್ತೇವೆಂದು ಹೇಳಿ, ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಇಂಥವರಿಂದ ರೈತರಿಗೆ ನಾವು ಉತ್ತರ ಕೊಡಲಾಗುತ್ತಿಲ್ಲ. ತೋಡಿದ ಬಾವಿಗೆ ನೀರೇ ಸಾಕ್ಷಿ. ಭದ್ರಾ ಹೋರಾಟಕ್ಕೆ ಸೋಮವಾರ ಡ್ಯಾಂ ಬಳಿ ಸೇರಿದ್ದ ಜನರೇ ಸಾಕ್ಷಿ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಬಿ.ಪಿ.ಹರೀಶ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದರು.

- - -

-24ಕೆಡಿವಿಜಿ1, 2.ಜೆಪಿಜಿ:

ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.