ಸಾರಾಂಶ
ಶಿರಸಿ: ಕರ್ನಾಟಕ ಮತ್ತು ಗೋವಾ ಮಧ್ಯೆ ಕರ್ನಾಟಕದ ಹೆದ್ದಾರಿಯಲ್ಲಿ ಕ್ಯಾಸಲ್‌ರಾಕ್ ಬಳಿಯ ಸೇತುವೆಯನ್ನು ಅಗಲಗೊಳಿಸಿ, ಅರೆಬರೆಗೊಂಡಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ರಾಜ್ಯ ಲಾರಿ ಮಾಲೀಕರಿಂದ ಸಂಸದ ವಿಶ್ವೇಶ್ವರ ಹೆಗಡೆಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಸಂಸದರನ್ನು ಭೇಟಿಯಾಗಿ, ಕರ್ನಾಟಕ ಮತ್ತು ಗೋವಾ ಮಧ್ಯೆ ಅನಮೋಡ, ರಾಮನಗರ ಮಾರ್ಗದ ಕ್ಯಾಸರ್‌ಲಾಕ್ ರಸ್ತೆಯ ಬಳಿ 71ನೇ ನಂಬರ್ ಸೇತುವೆಯನ್ನು 7 ಮೀ. ಮಾಡಲಾಗುತ್ತಿದೆ. ಆದರೆ ಆ ರಸ್ತೆಯು 12 ಮೀ. ಇದೆ. ಈ ಸೇತುವೆಯು ರಸ್ತೆಯ ತಿರುವಿನಲ್ಲಿದ್ದು, ರಸ್ತೆಯ ಅಗಲಕ್ಕೆ ಸಮನಾಗಿ ಮಾಡದಿದ್ದಲ್ಲಿ ಅಪಘಾತಗಳು ಹೆಚ್ಚಾಗುವ ಸಂಭವವಿದೆ. ಸೇತುವೆ 7 ಮೀ. ಇದ್ದು, ಎರಡೂ ಬದಿ ಅರ್ಧ ಮೀಟರ್ ಜಾಗ ಬಿಟ್ಟರೆ ವಾಹನಗಳಿಗೆ ಕೇವಲ 6 ಮೀ. ಸೇತುವೆ ಮಾತ್ರ ಲಭ್ಯವಾಗಲಿದೆ ಎಂದರು.ಈ ಸೇತುವೆ ಮೂಲಕ ಭಾರಿ ಹಾಗೂ ಇತರೆ ವಾಹನಗಳು ಓಡಾಡುವುದರಿಂದ ಸೇತುವೆ ಕಾಮಗಾರಿಯಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಬಗ್ಗೆ ಕೂಲಂಕಷವಾಗಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಸೇತುವೆಯನ್ನೂ 12 ಮೀ. ಅಗಲೀಕರಣ ಮಾಡಿ ವಾಹನಗಳು ಸುಗಮವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಕೆ.ಎಸ್. ಮಣಿ, ಹುಬ್ಬಳ್ಳಿ- ಧಾರವಾಡ ಜಿಲ್ಲೆಯ ಅಧ್ಯಕ್ಷ ಹಾಗೂ ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಗಿರೀಶ ಮಲೆನಾಡು, ಕಾರವಾರ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಮಾಧವ ನಾಯಕ, ಕಿರಣ ನಾಯ್ಕ ಮುಂತಾದವರು ಇದ್ದರು.ಬೆಂಗಳೂರಿಗೆ ಶರಾವತಿ ನೀರಿನ ಯೋಜನೆ ಅನುಮಾನ
ಕಾರವಾರ: ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಪ್ರಾರಂಭವಾಗುವುದು ಅನುಮಾನ. ಇಲ್ಲಿನ ಜನರಿಗೆ ತೊಂದರೆ ಆಗುತ್ತದೆ ಎಂದರೆ ನಮ್ಮ ವಿರೋಧವಿದೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಯೋಜನೆ ಕುರಿತು ಸಮಿತಿ ರಚನೆ ಮಾಡಿ ಅಧ್ಯಯನ ಮಾಡಿದರೆ ಏನಾಗುಬಹುದು ಎಂದು ತಿಳಿಯುತ್ತದೆ. ತೊಂದರೆಯಾದರೆ ನೀರನ್ನು ತೆಗೆದುಕೊಂಡು ಹೋಗಲು ಕೊಡುವುದಿಲ್ಲ. ಏನು ಸಮಸ್ಯೆ ಆಗುವುದಿಲ್ಲ ಎಂದರೆ ಅವರಿಗೆ ನೀರು ಕೊಡುವಷ್ಟು ಭಾಗ್ಯವಂತರೆಂದು ತಿಳಿದುಕೊಳ್ಳುತ್ತೇವೆ ಎಂದರು.ಪಶು ಸಂಗೋಪನಾ ಇಲಾಖೆಯಲ್ಲಿ ವೈದ್ಯರ ಕೊರತೆ ಇರುವುದು ತಿಳಿದಿದೆ. ಈ ವೈದ್ಯಕೀಯ ಕೋರ್ಸ್ ಮಾಡಿದವರ ನೇಮಕ ಮಾಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ನಿವೃತ್ತಿ ಹೊಂದಿದವರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ಹೈನುಗಾರರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು,
ನಮ್ಮ ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್ ಸಮಸ್ಯೆ ಉಂಟಾಗಿಲ್ಲ. ಸಹಕಾರಿ ಸಂಸ್ಥೆಗಳೂ ಕಾನೂನುಬದ್ಧವಾಗಿ ಕೆಲಸ ಮಾಡಬೇಕು. ಕಾನೂನು ಮೀರಿದರೆ ಮುಲಾಜಿಲ್ಲದೇ ಕ್ರಮ ವಹಿಸುತ್ತೇವೆ ಎಂದ ಅವರು, ಗೋಹತ್ಯೆ, ಕಳ್ಳತನ ಇಂತಹ ಕೃತ್ಯದಲ್ಲಿ ಯಾವುದೇ ಜಾತಿ, ಧರ್ಮದವರು ತೊಡಗಿದ್ದರೂ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮವಹಿಸುತ್ತವೆ ಎಂದರು.ಸಂಸದರು ಟೋಲ್ ಬಂದ್ ಮಾಡಿಸಲಿ: ಸಚಿವರ ಸವಾಲು
ರಾಜ್ಯ ಸರ್ಕಾರದಿಂದ ಕಾರವಾರ- ಭಟ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತದೆ ಎಂದು ಸಂಸದರು ಹೇಳಿದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಐಆರ್‌ಬಿ ಸಂಸ್ಥೆ ಬಿಜೆಪಿ ಸರ್ಕಾರದಲ್ಲಿ ಸಚಿವರಿರುವ ಮಕ್ಕಳ ಕಂಪನಿಯಾಗಿದೆ. ಹೀಗಾಗಿ ಸಂಸದರು ಅವರ ಪರ ಮಾತನಾಡಬೇಕು. ಭಟ್ಕಳ ಗಡಿಯಿಂದ ಕಾರವಾರದ ಗಡಿಯವರೆಗೆ ರಾಜ್ಯದಿಂದ ಆಗಬೇಕಾದ ಯಾವ ಕೆಲಸವನ್ನೂ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ವಿಳಂಬ ಮಾಡಿಲ್ಲ.ತಮ್ಮವರಿಗಾಗಿ ರಾಜ್ಯ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಂಸದರು ಯೋಚಿಸಿ ಮತನಾಡಿದರೆ ಒಳ್ಳೆಯದು. ಬಾಯಿಗೆ ಬಂದಂತೆ ಮಾತನಾಡಬಾರದು. ಕೆಲಸ ವಿಳಂಬವಾಗಿದೆ ಎಂದು ಟೋಲ್ ಬಂದ್ ಮಾಡಿಸಲು ಸಂಸದರು ಹೇಳಲಿ ಎಂದು ಸವಾಲು ಹಾಕಿದ ವೈದ್ಯ, ಕಾಳಿ ಸೇತುವೆ ಬಿದ್ದಾಗ ಏನು ಮಾತನಾಡಿದ್ದಾರೆ? ಅವರಿಗೆ ಹೇಳುವವರಿಲ್ಲ. ಕೇಳುವವರಿಲ್ಲ. ರಾಜ್ಯ ಸರ್ಕಾರದ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ ಮಾತನಾಡುವಾಗ ಯೋಚಿಸಬೇಕು ಎಂದು ವೈದ್ಯ ಖಡಕ್ ಎಚ್ಚರಿಕೆ ನೀಡಿದರು.