ಸಾರಾಂಶ
ಕಾರವಾರ: ಗೋವಾ ವ್ಯಾಪ್ತಿಯ ಅನಮೋಡ ಘಟ್ಟದ ಹೆದ್ದಾರಿಯಲ್ಲಿ ಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
ಜೋಯಿಡಾ ತಾಲೂಕಿನಿಂದ ಗೋವಾವನ್ನು ಸಂಪರ್ಕಿಸುವ ಈ ಘಟ್ಟದಲ್ಲಿ ಹೆದ್ದಾರಿಯ ಒಂದು ಪಾರ್ಶ್ವ ಶನಿವಾರ ಕುಸಿತಕ್ಕೊಳಗಾಗಿದೆ. ಶುಕ್ರವಾರ ಹೆದ್ದಾರಿಯ ಪಕ್ಕದಲ್ಲಿ ಬಿರುಕು ಕಾಣಿಸಿಕೊಂಡಾಗ ಗೋವಾದ ಲೋಕೋಪಯೋಗಿ ಇಲಾಖೆ ಕಾಂಕ್ರೀಟ್ ಹಾಕಿತ್ತು. ಆದರೆ ಶನಿವಾರ ಕುಸಿತವಾಗಿದೆ. ಗೋವಾ ಹಾಗೂ ಕರ್ನಾಟಕದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದ್ದು, ವಾಹನಗಳು ಕಾರವಾರ ಅಥವಾ ಬೆಳಗಾವಿ ಮೂಲಕ ಗೋವಾವನ್ನು ಸಂಪರ್ಕಿಸಬೇಕಾಗಿದೆ.
ಜೋಯಿಡಾದಲ್ಲಿ ಹಲವೆಡೆ ರಸ್ತೆ ಕುಸಿತ:
ಜೋಯಿಡಾ ತಾಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.ತಾಲೂಕಿನಲ್ಲಿ ರಸ್ತೆ, ಸೇತುವೆಗಳು ನೆಲ ಕಚ್ಚುತ್ತಿದ್ದು, ಸಾರ್ವಜನಿಕರು ಪಡಬಾರದ ಕಷ್ಟಪಡುವಂತಾಗಿದೆ. ದಾಂಡೇಲಿ ಗುಂದ, ಉಳವಿ ನಡುವಿನ ಕೈಟಾ ಕಿರುಸೇತುವೆ ಕುಸಿದ ಪರಿಣಾಮ, ಸಾರಿಗೆ ಸಂಪರ್ಕ ಇಲ್ಲಿಂದ ಬಂದಾಗಿದೆ. ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ, ಜೋಯಿಡಾ ಕುಂಬಾರವಾಡ, ಉಳವಿ, ಮಾರ್ಗದಲ್ಲಿ ಗುಂದಕ್ಕೆ ಸದ್ಯ ಒಂದು ಬಸ್ಸು ಮಾತ್ರ ಓಡಾಡುತ್ತಿದೆ.
ಶಿರಸಿ ಉಳವಿ ಬಸ್ ಗುಂದ ಯರಮುಖದ ವರೆಗೆ ಬರಬೇಕಾಗಿದೆ. ಡಿಗ್ಗಿ ರಸ್ತೆಯ ಸೇತುವೆ ಸಿಸೈಯಲ್ಲಿ ಕೊಚ್ಚಿ ಹೋದ ಕಾರಣ ಅಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗಿದೆ. ಅನ್ಮೋಡ ಘಾಟ್ ರಸ್ತೆ ಕುಸಿತದಿಂದ ಗೋವಾ ಹೋಗುವ ವಾಹನಗಳಿಗೆ ತೊಂದರೆ ಯಾಗಿದ್ದು, ಸದ್ಯ ಒಂದು ಮಾರ್ಗದಲ್ಲಿ, ನಿಧಾನವಾಗಿ ವಾಹನ ಬಿಡಲು ಅನುಮತಿ ನೀಡಲಾಗಿದೆ. ಇಲ್ಲಿ ರಸ್ತೆ ಮತ್ತೆ ಕುಸಿದರೆ, ವಾಹನ ಸಂಚಾರ ಪೂರ್ತಿಯಾಗಿ ಬಂದಾಗುತ್ತದೆ. ಅಲ್ಲಿನ ಜಾಗವೇ ಹಾಗಿದೆ. ಪ್ರತಿದಿನವೂ ಗಿಡ, ಮರಗಳು ಬೀಳುತ್ತಾ, ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದೆ.ಮಳೆಗಾಲದ ಪೂರ್ವ ತಯಾರಿಯನ್ನು ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು ಸರಿಯಾಗಿ ಮಾಡಿಕೊಂಡಿರದ ಕಾರಣ ಹಲವಾರು ಸಮಸ್ಯೆಗಳು ಜನರ ನಿದ್ದೆಗೆಡಿಸಿವೆ. ರಸ್ತೆಯಲ್ಲಿ ಬಿದ್ದ ಮರ ತೆರವು, ಗ್ರಾಮೀಣ ಹಳ್ಳಿಗಳ ರಸ್ತೆ ಸುರಕ್ಷೆ, ಇವನ್ನೆಲ್ಲ ಸಂಬಂಧಪಟ್ಟ ಇಲಾಖೆಗಳು ಮಾಡುತ್ತಿಲ್ಲ ಎಂದು ಜನತೆ ದೂರಿದ್ದಾರೆ, ಮಳೆಯಿಂದ ಅನೇಕ ರಸ್ತೆ ಸೇತುವೆಗಳಿಗೆ ಹಾನಿಯಾಗಿದ್ದು, ಸಂಬಂಧಪಟ್ಟ ಗ್ರಾಪಂನವರು ಜಿಲ್ಲಾ ಆಡಳಿತದ ಗಮನಕ್ಕೆ ತರಬೇಕಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.