ಕೊಪ್ಪಳ ನಗರದಲ್ಲಿ ಹಸಿರಿನಿಂದ ಕಂಗೊಳಿಸಲಿದೆ ಹೆದ್ದಾರಿ

| Published : Jan 10 2025, 12:47 AM IST

ಸಾರಾಂಶ

ನಗರದ ಹೃದಯ ಭಾಗದ ರಸ್ತೆ ಜೆ.ಎಚ್. ಪಟೇಲ್ ಹೆದ್ದಾರಿಯಲ್ಲಿ ಜಪಾನ ಶೈಲಿಯಲ್ಲಿ ಈಗಾಗಲೇ ಬೆಳೆದು ದೊಡ್ಡವಾಗಿರುವ ಗಿಡಗಳನ್ನು ನೆಡಲು ಮುಂದಾಗಿದ್ದಾರೆ. ಹೀಗಾಗಿ, ಆರೂವರೆ ಕಿಲೋಮೀಟರ್ ಉದ್ದಕ್ಕೂ ಒಂದೆರೆಡು ದಿನಗಳಲ್ಲಿಯೇ ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ.

ಜಪಾನ ಮಾದರಿಯಲ್ಲಿ ಹಸಿರೀಕರಣಕ್ಕೆ ಮುಂದಾದ ಪ್ರಾಧಿಕಾರ

ರಾಜಮಂಡ್ರಿಯಿಂದ ಬಂದ ಆಳೆತ್ತರದ ಗಿಡ

ಪ್ರಾಧಿಕಾರದ ಅಧ್ಯಕ್ಷರ ವಿನೂತನ ಪ್ರಯತ್ನ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾ ಕೇಂದ್ರವಾಗುವುದಕ್ಕೂ ಮೊದಲು ಈಗಿನ ಹೆದ್ದಾರಿಯುದ್ದಕ್ಕೂ (ಆಗ ಹೆದ್ದಾರಿಯಾಗಿರಲಿಲ್ಲ) ಇದ್ದ ಬೃಹದಾಕಾರದ ಮರಗಳು ರಸ್ತೆ ಅಗಲೀಕರಣದಿಂದಾಗಿ ನೆಲಸಮವಾಗಿವೆ. ಅಂದಿನಿಂದ ನಗರದಲ್ಲಿ ಹಾದು ಹೋಗಿರುವ ಹೆದ್ದಾರಿಯೂ ಬೋಳಾದಂತೆ ಆಗಿತ್ತು. ಆದರೆ, ಈಗ ಇದನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮುಂದಾಗಿದ್ದಾರೆ.

ನಗರದ ಹೃದಯ ಭಾಗದ ರಸ್ತೆ ಜೆ.ಎಚ್. ಪಟೇಲ್ ಹೆದ್ದಾರಿಯಲ್ಲಿ ಜಪಾನ ಶೈಲಿಯಲ್ಲಿ ಈಗಾಗಲೇ ಬೆಳೆದು ದೊಡ್ಡವಾಗಿರುವ ಗಿಡಗಳನ್ನು ನೆಡಲು ಮುಂದಾಗಿದ್ದಾರೆ. ಹೀಗಾಗಿ, ಆರೂವರೆ ಕಿಲೋಮೀಟರ್ ಉದ್ದಕ್ಕೂ ಒಂದೆರೆಡು ದಿನಗಳಲ್ಲಿಯೇ ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ.

ಜ. 10ರಂದು ಬೆಳಗ್ಗೆ 10 ಗಂಟೆಗೆ ಈ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಎಲ್ಲ ಗಿಡಗಳನ್ನು ನೆಡುವ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ನಗರದ ಹೃದಯ ಭಾಗದ ರಸ್ತೆ ಗವಿಸಿದ್ಧೇಶ್ವರ ಜಾತ್ರೆಗೂ ಮುನ್ನವೇ ಹಸಿರಿನಿಂದ ಕಂಗೊಳಿಸಲಿದೆ. ಜಾತ್ರೆಗೆ ಬರುವ ಯಾತ್ರಿಕರಿಗೆ ಈ ಹಸಿರು ಗಿಡಗಳು ಸ್ವಾಗತಿಸುವಂತೆ ಮಾಡುವುದಕ್ಕಾಗಿಯೇ ಪ್ರಯತ್ನ ನಡೆದಿದೆ.

ಯಾವ ಗಿಡಗಳಿವೆ?:

ಫಾಕ್ಸ್‌ಟೇಲ್ ಪಾಮ್ ಎಂದು ಕರೆಯಿಸಿಕೊಳ್ಳುವ 750 ಗಿಡಗಳನ್ನು ಆಂಧ್ರದ ರಾಜಮಂಡ್ರಿಯಿಂದ ತರಿಸಲಾಗಿದೆ. ಈಗಾಗಲೇ ಇವುಗಳ ಎತ್ತರವೇ 10-15 ಅಡಿ ಇದೆ. ನಗರದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಡಿವೈಡರ್ ಮಧ್ಯೆ ಇವುಗಳನ್ನು ನೆಡಲಾಗುತ್ತದೆ. ಇದಕ್ಕೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನುರಿತ ಪರಿಣತರೇ ಇದನ್ನು ನೆಡಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಿಂದ ಹಿಡಿದು ಗದಗ ರಸ್ತೆಯ ಮಳೆಮಲ್ಲೇಶ್ವರ ದೇವಸ್ಥಾನ ಹಾಗೂ ಗವಿಮಠ ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ನಲ್ಲಿ ಈ ಸುಂದರ ಗಿಡಗಳನ್ನು ನೆಡಲಾಗುತ್ತದೆ.

ಕಂಗೊಳಿಸಲಿದೆ:

ಕೊಪ್ಪಳ ನಗರದ ಹೃದಯಭಾಗ ಹಸಿರಿನಿಂದ ಕಂಗೊಳಿಸಲಿದೆ. ಆದರೆ ಈ ಗಿಡಗಳಿಂದ ಸಂಚಾರಕ್ಕೆ ಸಮಸ್ಯೆ ಆಗಲಾರದು. ಗಿಡ ಎತ್ತರಕ್ಕೆ ಬೆಳೆದು ಮೇಲೆ ಗರಿ ಹೊಂದಿರುತ್ತವೆ. ಅಂದವೂ ಹೌದು, ಅನುಕೂಲಕರವಾಗಿಯೂ ಇರುತ್ತವೆ.

ಅಧ್ಯಕ್ಷರ ಕಾರ್ಯ:

ಇವುಗಳನ್ನು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೆಡಲಾಗುತ್ತಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಅವರು ತಮ್ಮ ಸ್ವಂತ ಖರ್ಚಿನಿಂದ ನಗರದ ಸೌಂದರ್ಯವನ್ನು ಹೆಚ್ಚಿಸಲು ಮುಂದಾಗಿದ್ದಾರೆ. ತಾವು ಅಧ್ಯಕ್ಷರಾಗಿರುವುದಕ್ಕೆ ಕೊಪ್ಪಳ ನಗರಕ್ಕೊಂದು ಸೊಬಗು ಹೆಚ್ಚಿಸುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಮಾಡುತ್ತಿದ್ದಾರೆ. ಖುದ್ದು ತಾವೇ ರಾಜಮಂಡ್ರಿಯಲ್ಲಿರುವ ಸಸ್ಯಧಾಮದಲ್ಲಿ ಸುತ್ತಾಡಿ, ಈ ಗಿಡಗಳನ್ನು ಆಯ್ಕೆ ಮಾಡಿದ್ದಾರೆ. ವಿವಿಧೆಡೆ ಈಗಾಗಲೇ ಈ ಗಿಡಗಳನ್ನು ನೆಟ್ಟಿರುವುದರಿಂದ ನಗರದ ಸೌಂದರ್ಯವೂ ಹೆಚ್ಚಳವಾಗಿದೆ.

ಉದುರುವುದಿಲ್ಲ:

ಈ ಗಿಡಗಳ ವಿಶೇಷ ಎಂದರೆ, ಎಲೆ ಉದುರುವುದು, ಕಾಯಿ ಬೀಳುವುದು ಆಗುವುದಿಲ್ಲ. ಅಷ್ಟೇ ಅಲ್ಲ, ಮಳೆಗಾಲ ಇರಲಿ, ಬೇಸಿಗೆ ಇರಲಿ, ವರ್ಷಪೂರ್ತಿ ಹಸಿರಾಗಿಯೇ ಇರುತ್ತದೆ. ಹೀಗಾಗಿಯೇ ಇದನ್ನು ನಗರ ಪ್ರದೇಶದ ರಸ್ತೆಗಳ ಮಧ್ಯೆ ನೆಡಲಾಗುತ್ತದೆ.

ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದ ಸೌಂದರ್ಯ ಹೆಚ್ಚಿಸುವುದಕ್ಕಾಗಿ ಹಲವಾರು ಯೋಜನೆ ಹಾಕಿಕೊಂಡಿದ್ದೇನೆ. ಅದರ ಮೊದಲ ಭಾಗವಾಗಿ ಈಗ ನಗರದ ಹೆದ್ದಾರಿ ಮಧ್ಯದಲ್ಲಿ ಡಿವೈಡರ್‌ನಲ್ಲಿ ಫಾಕ್ಸ್‌ಟೇಲ್ ಪಾಮ್ ಗಿಡ ನೆಡಲಾಗುತ್ತದೆ. ಹದಿನೈದಿಪ್ಪತ್ತು ಅಡಿ ಇರುವುದರಿಂದ ನೆಡುತ್ತಿದ್ದಂತೆ ಅಂದವಾಗುತ್ತದೆ ಎನ್ನುತ್ತಾರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ.