ಹೆದ್ದಾರಿ ವಿಸ್ತರಣೆ: ಎಂಜಿ ರಸ್ತೆ ಕಟ್ಟಡಗಳ ತೆರವು

| Published : Sep 15 2024, 01:51 AM IST

ಹೆದ್ದಾರಿ ವಿಸ್ತರಣೆ: ಎಂಜಿ ರಸ್ತೆ ಕಟ್ಟಡಗಳ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರ ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕಾರ್ಯಾಚರಣೆ ಪ್ರಾರಂಭಿಸಿದ್ದು, ಮೊದಲಿಗೆ ಸರ್ಕಾರಿ ಕಟ್ಟಡಗಳನ್ನು ತೆರವು ಗೊಳಿಸಲಾಗುದು, ಅಷ್ಟರೊಳಗೆ ಖಾಸಗಿ ಮಾಲೀಕರು ತಾವಾಗಿಯೆ ಕಟ್ಟಡ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗುವುದು. ನಂತರ ಎಲ್ಲ ಕಟ್ಟಡಗಳ ತೆರವು ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಷ್ಟ್ರೀಯ ಹೆದ್ದಾರಿ-234ರ ವಿಸ್ತರಣೆಗೆ ಮೂಹೂರ್ತ ಕೂಡಿ ಬಂದಿದ್ದು, ನಗರದ ಎಂಜಿ ರಸ್ತೆಯಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿಗಳು ಅಬ್ಬರಿಸಿವೆ. ಸರ್ಕಾರಿ ಕಚೇರಿ, ಪೋಲಿಸ್ ಠಾಣೆ ಜಾಗಗಗಳ ತೆರವು ಮಾಡಲಾಯಿತು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಜೆಸಿಬಿಗಳನ್ನು ರಸ್ತೆಗೆ ಇಳಿಸಿ, ಗ್ರಾಮಾಂತರ ಪೋಲಿಸ್ ಠಾಣೆಯ ಕಾಂಪೌಂಡ್ ತೆರವುಗೊಳಿಸುವ ಮೂಲಕ ಕಾರ್ಯಾಚಾರಣೆ ಪ್ರಾರಂಭಿಸಿ, ಎಂಜಿ ರಸ್ತೆಯಲ್ಲಿರುವ ಜಿಪಂ ಎಂಜಿನಿಯರ್ ಕಚೇರಿ ಕಾಂಪೌಂಡ್, ಹಳೇ ಎಸ್ಪಿ ಕಚೇರಿ. ಅರಣ್ಯ ಇಲಾಖೆ, ಪಿಡಬ್ಲ್ಯೂಡಿ ಕ್ವಾರ್ಟರ್ಸ್, ನಗರ ಪೋಲಿಸ್ ಠಾಣೆ, ಎಪಿಎಂಸಿ ಗಳ ಕಾಂಪೌಂಡ್ ಸೇರಿದಂತೆ ಸರ್ಕಾರಿ ಕಚೇರಿಗಳ ಜಾಗಗಳನ್ನು ಬಿಗಿ ಪೋಲಿಸ್ ಬಂದೋ ಬಸ್ತಿನಲ್ಲಿ ತೆರವು ಮಾಡಲಾಯಿತು.

ಖಾಸಗಿ ಕಟ್ಟಡ ತೆರವಿಗೆ ಸೂಚನೆ

ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕಾರ್ಯಾಚರಣೆ ಪ್ರಾರಂಭಿಸಿದ್ದು, ಮೊದಲಿಗೆ ಸರ್ಕಾರಿ ಕಟ್ಟಡಗಳನ್ನು ತೆರವು ಗೊಳಿಸಲಾಗುದು, ಅಷ್ಟರೊಳಗೆ ಖಾಸಗಿ ಮಾಲೀಕರು ತಾವಾಗಿಯೆ ತೆರವುಗೊಳಿಸಲು ಅವಕಾಶ ಕಲ್ಪಿಸಬೇಕು. ನಂತರ ಎಲ್ಲ ಕಟ್ಟಡಗಳನ್ನ ತೆಗೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ 234 ರ ಎಂಜಿನಿಯರ್ ಮಲ್ಲಿಕಾರ್ಜುನ್ ತಿಳಿಸಿದರು.

ಸಂಸದರು, ಜಿಲ್ಲಾ ಮಂತ್ರಿಗಳು,ಶಾಸಕರು ಎಲ್ಲರೂ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಇನ್ನೂ ಶಿಡ್ಲಘಟ್ಟ ಸರ್ಕಲ್ ಬಳಿಯಿಂದ ವಿಶ್ವೇಶ್ವರಯ್ಯ ಶಾಲೆಯ ವರೆಗೂ ನಾಲ್ಕು ಪಥದ ರಸ್ತೆಗೆ ಅಡ್ಡಿ ಇಲ್ಲಾ ಅಲ್ಲಿಂದ ಅಣಕನೂರು ಕ್ರಾಸ್ ವರೆಗೂ ರೈಲ್ವೆ ಇಲಾಖೆಯೊಂದಿಗೆ ಜಂಟಿ ಸಮಾವೇಶ ನಡೆಸಿ ಎಡಕ್ಕೆ ಎಷ್ಟು ಬರಬೇಕು ಅಷ್ಟು ಜಮೀನನ್ನ ಗುರ್ತಿಸಿ ಕಾಮಗಾರಿ ಶುರು ಮಾಡಲಾಗುವುದು ಎಂದರು.12.5 ಮೀಟರ್ ಅಗಲ ತೆರವು

ನಿಯಮದ ಪ್ರಕಾರ ರಸ್ತೆಯ ಎರಡೂ ಬದಿಯಲ್ಲಿ ತಲಾ 15 ಮೀ. ಜಾಗದ ವರೆಗೂ ತೆರವು ಮಾಡ ಬೇಕು. ಆದರೆ ಜಿಲ್ಲಾ ಮುಖ್ಯ ರಸ್ತೆ ಮದ್ಯದಿಂದ 12.5 ಮೀಟರ್ ತೆರವು ಗೊಳಿಸಲಾಗುವುದು. ಎಂ ಜಿ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಗೆ ಕಟ್ಟಲಾಗಿರುವ ಕಟ್ಟಡಗಳ ತೆರವಿಗೆ ಗಡಿ ಗುರ್ತಿಸಲಾಗಿದೆ. ಅದರಂತೆ ತೆರವು ಕಾರ್ಯಾಚರಣೆಯೂ ನಡೆಯಲಿದೆ ಎಂದರು.

ಒಟ್ಟು 30 ಮೀಟರ್ ರಸ್ತೆ ನಿರ್ಮಾಣವಾಗಲಿದೆ. ಇದನ್ನು ಬಿಟ್ಟು ಇನ್ನು 6 ಅಡಿ ಖಾಲಿ ಜಾಗವನ್ನು ರಸ್ತೆ ಪಕ್ಕ ಬಿಡಬೇಕೆಂಬ ನಿಯಮವಿದೆ. ಎಡ ಬಲ 6 ಅಡಿವರೆಗೆ ಗುರ್ತಿಸಿದ್ದು ಪುಟ್ ಪಾತ್, ವಿದ್ಯುತ್ ದೀಪ ಅಳವಡಿಸಲು ಸ್ಥಳಾವಕಾಶ ಒದಗಿಸಲಾಗಿದೆ. ಹೀಗಾಗಿ ಯಾವ ಕಟ್ಟಡಗಳು ಎಲ್ಲಿಯವರೆಗೂ ಹೋಗುತ್ತವೆ ಎನ್ನುವುದು ಈಗ ಕಟ್ಟಡ ಮಾಲಿಕರ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ. ತೆರವಿಗಿಳಿದ ಮಾಲೀಕರು

ಹೆದ್ದಾರಿನಿರ್ಮಾಣಕ್ಕೆ ಕಟ್ಟಡಗಳು ತೆರವಾಗುವುದು ಶತಸಿದ್ದ. ಹೀಗಾಗಿ ಹೆದ್ದಾರಿ ಪ್ರಾಧಿಕಾರದ ಸುಪರ್ದಿಗೆ ಕೊಟ್ಟರೆ ಯಾವ ಕಟ್ಟಡ ಹೇಗೆ ಹಾಳಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೇ ತೆರವಿಗೆ ತಗುಲುವ ವೆಚ್ಚವನ್ನು ಕಟ್ಟಡದ ಮಾಲೀಕರೇ ಭರಿಸಬೇಕಿದೆ. ಇದ್ಯಾವುದರ ಗೊಡವೆ ಬೇಡ ಎಂದು ಕೆಲವು ಅಂಗಡಿ ಮಾಲೀಕರು ಗುರುತನ್ನು ಆಧರಿಸಿ ಕಟ್ಟಡಗಳನ್ನು ತೆರವು ಮಾಡುತ್ತಿದ್ದಾರೆ.