ಸಾರಾಂಶ
ವಿಶೇಷ ವರದಿ
ಹೊನ್ನಾವರ: ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರ್ಯ ಕುಂಟುತ್ತಾ ಸಾಗಿದ್ದು, ಕಾಮಗಾರಿ ಯಾವಾಗ ಮುಗಿಯುತ್ತದೆ ಎಂದು ಸಾರ್ವಜನಿಕರು ಅಲವತ್ತುಕೊಳ್ಳುತ್ತಿದ್ದಾರೆ.ಸಮರ್ಪಕವಾಗಿ ಕೆಲಸ ನಡೆಯುತ್ತಿಲ್ಲ ಅನ್ನುವುದಕ್ಕಿಂತ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ ಎಂಬುದೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಅಗಲೀಕರಣದ ಕಾರಣ ರಸ್ತೆಯನ್ನು ಅಗೆಯುವುದು ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆರವು ಕಾರ್ಯ ನಡೆದಿದೆ. ಆದರೆ ರಸ್ತೆ ಅಗಲೀಕರಣ ಕೆಲಸ ನಿರೀಕ್ಷೆಯಂತೆ ಆಗುತ್ತಿಲ್ಲ.
ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಹೆದ್ದಾರಿಯಲ್ಲಿ ಮುಖ್ಯವಾಗಿ ಕುಮಟಾ ಹಾಗೂ ಬೆಂಗಳೂರಿನ ಕಡೆ ಸಾಗುವ ಕ್ರಾಸ್ ಹೈವೆ ಸರ್ಕಲ್ ಅಥವಾ ಗೇರುಸೊಪ್ಪ ಸರ್ಕಲ್ ಎಂದು ಕರೆಯುವ ಸ್ಥಳದಲ್ಲಿ ರಸ್ತೆ ಮಾಡಿದ್ದಾರೆ ಎಂದರೂ ಅದು ದೇವರಿಗೆ ಪ್ರೀತಿ. ಯಾಕೆಂದರೆ ನಾಲ್ಕು ಕಡೆಯಿಂದ ರಸ್ತೆ ಸೇರುವ ಸರ್ಕಲ್‌ನಲ್ಲಿ ಅಲ್ಲಿ ಯಾವ ಕಡೆಗೆ ತಿರುಗಬೇಕೆನ್ನುವ ಸೂಚನಾ ಫಲಕವಾಗಲಿ, ಸಿಗ್ನಲ್ ದೀಪಗಳಾಗಲಿ ಇಲ್ಲವೇ ಇಲ್ಲ.ನಿತ್ಯ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತದೆ. ಜತೆಗೆ ಇದೇ ಹೈವೇ ಸರ್ಕಲ್‌ನಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳ ದಟ್ಟಣೆ ಇರುತ್ತದೆ. ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಎಲ್ಲಿಯೂ ಪಾದಚಾರಿಗಳಿಗೆ ಸೂಕ್ತ ಜಾಗ ಮಾಡಿಲ್ಲ.ಸಂಚಾರಕ್ಕೆ ತೊಂದರೆಯಾಗಿದೆ: ನಿತ್ಯ ಇದೇ ಸರ್ಕಲ್‌ನಿಂದ ಓಡಾಟ ನಡೆಸಬೇಕು. ಆದರೆ ಈ ಸರ್ಕಲ್‌ನಲ್ಲಿ ಸಿಗ್ನಲ್ ದೀಪಗಳೂ ಇಲ್ಲ, ಸೂಕ್ತ ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ. ಇದರಿಂದ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತದೆ ಎಂದು ಬೈಕ್ ಸವಾರ ಸಂತೋಷ್ ಹೇಳಿದರು.ರಸ್ತೆ ನಿರ್ಮಿಸುವಾಗ ಪ್ರಮುಖ ಸ್ಥಳಗಳಲ್ಲಿ ಸಿಗ್ನಲ್ ದೀಪ ಅಥವಾ ಸೂಚನಾ ಫಲಕಗಳಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಇನ್ನು ಕಾಲ ಮಿಂಚಿಲ್ಲ. ಸಂಬಂಧಿಸಿದ ಅಧಿಕಾರಿಗಳು ವಾಹನ ಸವಾರರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರೆ ಒಳಿತಾಗುತ್ತದೆ ಎಂದು ಮಂಜುನಾಥ ಹೆಗಡೆ ಹೇಳಿದರು.