ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್‌. ವೈದ್ಯ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ವೀಕ್ಷಿಸುವ ಸಂದರ್ಭದಲ್ಲಿ ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರದ ಹಾಗೂ ಐಆರ್‌ಬಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಸಚಿವರು, ಜಿಲ್ಲಾಧಿಕಾರಿ ಎದುರಿನಲ್ಲಿ ಆಕ್ರೋಶ । ಕಾಮಗಾರಿ ಕೂಡಲೇ ಮುಗಿಸುವಂತೆ ಆಗ್ರಹ । ಮಳೆಗಾಲದಲ್ಲಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಸೂಚನೆ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್‌. ವೈದ್ಯ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ವೀಕ್ಷಿಸುವ ಸಂದರ್ಭದಲ್ಲಿ ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರದ ಹಾಗೂ ಐಆರ್‌ಬಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಸಾರ್ವಜನಿಕರು ಪಟ್ಟಣದಲ್ಲಿ ವಿಳಂಬಗತಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮಳೆ ಆರಂಭದೊಳಗಾದರೂ ಕಾಮಗಾರಿ ಮುಗಿಸುವ ಕೆಲಸ ಮಾಡಿ. ಮತ್ತೆ ತಡ ಮಾಡಿದರೆ ಮಳೆಗಾಲದಲ್ಲಿ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ಮೂಡಭಟ್ಕಳ ಬೈಪಾಸ್‌ ಬಳಿ ಅಂಡರ್‌ ಪಾಸ್‌ ಕಾಮಗಾರಿ ಪಡೆದುಕೊಂಡ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಸಚಿವ ಮಂಕಾಳ ವೈದ್ಯ ಕಾಮಗಾರಿ ಮುಗಿಸಲು ಇನ್ನೆಷ್ಟು ದಿನಗಳು ಬೇಕು. ಇನ್ನೇಷ್ಟು ಜನರ ಹೆಣ ಇಲ್ಲಿ ಬೀಳಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಹೆದ್ದಾರಿ ಕಾಮಗಾರಿ ಅದ್ವಾನದ ಬಗ್ಗೆ ತಿಳಿಸಿದ ಭಟ್ಕಳ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ, ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿಯವರು ಕೆಲಸ ಆರಂಭಿಸುವ ಮುನ್ನ ಮಳೆಗಾಲದ ನೀರು ಹರಿದು ಹೋಗಲು ಚರಂಡಿ ಹಾಗೂ ಸರ್ವಿಸ್‌ ರಸ್ತೆ ಮಾಡುವ ಭರವಸೆ ನೀಡಿದ್ದರು. ಆದರೆ ಈಗ ಆ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಟ್ಟು ತುರಾತುರಿಯಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಮೇ 17ಕ್ಕೆ ಮಾನ್ಸೂನ್‌ ಮುನ್ಸೂಚನೆ ಇದ್ದು, ಮಳೆ ಆರಂಭವಾದರೆ ಭಟ್ಕಳ ಸಂಪೂರ್ಣ ಮುಳುಗಡೆಯಾಗಲಿದೆ. ಹೆದ್ದಾರಿಯವರು ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಸಾಯಿಸುವ ಬರದಲ್ಲಿದ್ದಾರೆ. ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳದಿದ್ದಲಿ ಹೆದ್ದಾರಿ ಕಾಮಗಾರಿ ಮುಂದುವರೆಸಲು ನಾವು ಅವಕಾಶ ನೀಡುವುದಿಲ್ಲ ಎಂದರು.

ಮೂಡಭಟ್ಕಳ ಬೈಪಾಸ್‌ ಸನಿಹದ ವೆಂಕಟೇಶ ನಾಯ್ಕ ಮಾತನಾಡಿ, ಮಳೆಗಾಲದ ನೀರು ಹರಿದು ಹೋಗಲು ಚರಂಡಿ ನಿರ್ಮಾಣಕ್ಕೆ ಐಆರ್‌ ಬಿ ಮುಂದಾಗಿಲ್ಲ. ಭೂಸ್ವಾಧಿನಪಡಿಸಿಕೊಂಡ ಪ್ರದೇಶದಲ್ಲಿ ಖಾಸಗಿವರು ಅಂಗಡಿಗಳನ್ನು ಇಟ್ಟಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಅದನ್ನು ಖುಲ್ಲಾಪಡಿಸಿ ಜೆಸಿಬಿಯಿಂದ ತುರ್ತು ಚರಂಡಿ ವ್ಯವಸ್ಥೆ ಮಾಡಿದರೂ ಮಳೆಗಾಲದ ನೀರು ನದಿಗೆ ಹರಿದು ಹೋಗುತ್ತದೆ. ಪುರಸಭೆಯ ಒಳಚರಂಡಿ ತ್ಯಾಜ್ಯ ನೀರನ್ನು ಐಆರ್‌ ಬಿಯವರು ನದಿಗೆ ಹರಿಬಿಟ್ಟಿದ್ದಾರೆ. ಇದರಿಂದಾಗಿ ನದಿ ಸಂಪೂರ್ಣ ಕಲ್ಮಶಗೊಂಡಿದ್ದು, ಇದೇ ನೀರನ್ನು ಕುಡಿಯಲು, ಕೃಷಿ ಭೂಮಿಗೆ ಬಳಸುವಂತಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

ತಂಝೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ, ಪಟ್ಟಣದ ಕೊಟೇಶ್ವರ ಕ್ರಾಸ್‌ ಬಳಿ ಮಣ್ಣಿನ ಗುಡ್ಡ ಅಗೆದು ತೆಗೆದು ರಸ್ತೆ ಮಾಡಲಾಗುತ್ತಿದೆ. ಈ ಮಣ್ಣು ಜೇಡಿಮಣ್ಣಾಗಿದ್ದು, ಮಳೆಗಾಲದಲ್ಲಿ ರಸ್ತೆ ಕುಸಿಯುವ ಸಾಧ್ಯತೆ ಹೆಚ್ಚಿದೆ. ಅದೂ ಅಲ್ಲದೇ ಕಳೆದ ಬಾರಿಯಂತೆ ಈ ಬಾರಿಯೂ ಮಳೆಗಾಲದಲ್ಲಿ ಈ ಮಣ್ಣು ನೀರನ ಜೊತೆ ಬಂದು ರಸ್ತೆಯ ಮೇಲೆ ನಿಲ್ಲುವ ಕಾರಣ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಲಿದೆ ಎಂದರು. ಪಟ್ಟಣದ ಸಂಶುದ್ದೀನ್‌ ವೃತ್ತ ಹಾಗೂ ರಂಗಿನಕಟ್ಟೆ ಬಳಿ ತಂಝೀ ಕಾರ್ಯದರ್ಶಿ ಅಬ್ದುರ್‌ ರಕೀಬ್‌ ಹಾಗೂ ರಾಜೇಶ ನಾಯಕ ಮಾತನಾಡಿ, ರಂಗಿನಕಟ್ಟೆ ಹಾಗೂ ವೃತ್ತದ ಬಳಿ ಎತ್ತರಕ್ಕೆ ರಸ್ತೆಯನ್ನು ಏರಿಸಲಾಗಿದೆ. ಇದರಿಂದಾಗಿ ರಸ್ತೆಯ ಅಕ್ಕಪಕ್ಕದ ಅಂಗಡಿಕಾರರು ತಿಂಗಳಿನಿಂದ ವ್ಯಾಪಾರವಿಲ್ಲದೆ ಖಾಲಿ ಕುಳಿತಿದ್ದಾರೆ. ಮಳೆ ಬಂದರೆ ಮುಳುಗಡೆಯಾಗುವ ಭಯ ಇದೆ. ಇವರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನಿತ್ಯ ಈ ಪ್ರದೇಶ ಅಪಘಾತ ತಾಣವಾಗಿ ಮಾರ್ಪಟ್ಟಿದೆ. ರಸ್ತೆ ದಾಟಲು ಸ್ಥಳೀಯ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ. ಇವರು ತಮ್ಮ ಮನಸೋಇಚ್ಚೆ ಕಾಮಗಾರಿ ಮಾಡುತ್ತಿದ್ದು, ಕೇಳುವವರು ಯಾರು ಇಲ್ಲದಾಗಿದೆ ಎಂದರು.

ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವರು ಹಾಗೂ ಜಿಲ್ಲಾಧಿಕಾರಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ನದಿಗೆ ಹರಿದು ಹೋಗಲು ಜೆಸಿಬಿ ತುರ್ತು ಕಾಲುವೆ ನಿರ್ಮಿಸುವಂತೆ ಸೂಚಿಸಿದರು. ರಸ್ತೆ ಕಾಮಗಾರಿಯನ್ನು ಅತೀಶೀಘ್ರವಾಗಿ ಮುಗಿಸುವಂತೆ ಐ.ಆರ್.ಬಿಯವರಿಗೆ ಸೂಚಿಸಿದ ನಂತರ ಕೊಟೇಶ್ವರ ಕಾಲನಿ ಬಳಿ ಜಾಗ ತೆರವು ಮಾಡಿಕೊಡುವಂತೆ ನಗರಸಭೆ ಪೌರಾಯುಕ್ತರಿಗೆ ತಿಳಿಸಿದರು.

ಹೆದ್ದಾರಿ ನೀರು ಹೊರಹರಿವಿನ ಬಗ್ಗೆ ನೀಲನಕ್ಷೆ ರೂಪಿಸಿ ಕಾಮಗಾರಿಗೆ ಅನುಮೋದನೆ ಪಡೆದು ಕೆಲಸ ಆರಂಭಿಸುವಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸಾಜಿದ್‌ ಮುಲ್ಲಾ, ಭಟ್ಕಳ ಉಪವಿಭಾಗಾಧಿಕಾರಿ ಜೆ. ಮಹೇಶ, ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಭಟ್ಕಳ ಡಿವೈಎಸ್ಪಿ ಬಿ. ಗಿರೀಶ, ಬ್ಲಾಕ ಕಾಂಗ್ರೆಸ್‌ ಅಧ್ಯಕ್ಷ ವೆಂಕಟೇಶ ನಾಯ್ಕ, ಹೆದ್ದಾರಿ ಯೋಜನಾಧಿಕಾರಿ ಶ್ರೀನಿವಾಸ, ಐಆರ್‌ ಬಿ ಎಂಜಿನಿಯರ್‌ ಸುದೇಶ, ಪುರಸಭೆ ಅಭಿಯಂತರರಾದ ಅರವಿಂದ್‌, ವೆಂಕಟೇಶ ನಾವುಡ ಮುಂತಾದವರಿದ್ದರು.