ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಕಂಪನಿಯವರ ನಿರ್ಲಕ್ಷ್ಯಕ್ಕೆ ಮಹಿಳೆಯೋರ್ವರ ಅಡಕೆ ಕೃಷಿಗೆ ನೀರು ನುಗ್ಗಿ ಕೃಷಿ ನಾಶವಾಗಿರುವುದಲ್ಲದೆ , ಕಲ್ಲುಗಳನ್ನು ಸಿಡಿಸಿದ ಪರಿಣಾಮ ಇದೀಗ ಸುಂದರವಾಗಿರುವ ಮನೆಯ ಟೈಲ್ಸ್ ಗಳು, ಗೋಡೆಗಳು ಬಿರುಕುಬಿಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ದೊರ್ಮೆ ಎಂಬಲ್ಲಿ ನಡೆದಿದೆ.ಇಲ್ಲಿನ ನಿವಾಸಿ ಚಂದ್ರಾವತಿ ಅವರ ಅಡಿಕೆ ಕೃಷಿಯ ತೋಟದಲ್ಲಿ ಕೆಸರು ನೀರು ನಿಂತಿದ್ದು, ಲಕ್ಷಾಂತರ ರು. ಫಸಲು ನೀಡುವ ಅಡಿಕೆ ಗಿಡಗಳು ನಾಶವಾಗಿವೆಯಾದರೂ ಗುತ್ತಿಗೆ ವಹಿಸಿಕೊಂಡ ಕಂಪನಿಯಾಗಲಿ ಅಥವಾ ಇಲ್ಲಿನ ಅಧಿಕಾರಿಯಾಗಲಿ ಯಾವುದೇ ಸ್ಪಂದನ ನೀಡಿಲ್ಲ , ರಸ್ತೆ ಕಾಮಗಾರಿ ವೇಳೆ ಮಳೆ ನೀರಿಹರಿದು ಹೋಗುವ ವ್ಯವಸ್ಥೆ ಮಾಡದ ಕಂಪೆನಿಯ ನಿರ್ಲಕ್ಷ್ಯಕ್ಕೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ನೀರು ಫಸಲು ನೀಡುವ ಅಡಿಕೆ ತೋಟದಲ್ಲಿ ತುಂಬಿದೆ. ಇದರಿಂದಾಗಿ ಲಕ್ಷಾಂತರ ರು. ಬೆಲೆ ಬಾಳುವ ಅಡಿಕೆ ಗಿಡಗಳು ಸಂಪೂರ್ಣ ನಾಶವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಸಂದರ್ಭದಲ್ಲಿ ಕೃಷಿಕರ ಭೂಮಿ ಕಳೆದುಕೊಂಡಿದ್ದಾರೆ. ಕಳೆದುಕೊಂಡ ಭೂಮಿಯಲ್ಲಿದ್ದ ಅಡಿಕೆ ಕೃಷಿಗಳು ನಾಶವಾಗಿವೆ. ಕಳೆದ ವರ್ಷ ಇದೇ ರೀತಿ ಮಳೆ ನೀರು ತುಂಬಿ ಅರ್ಧ ಕೃಷಿ ನಾಶವಾಗಿದೆ. ಇವರ ಸ್ವಂತ ಕೃಷಿ ಜಮೀನಿನ ಮೂಲಕ ರಸ್ತೆ ನಿರ್ಮಾಣ ಮಾಡಲಾಗಿದೆ. ಇದೀಗ ರಸ್ತೆ ನಿರ್ಮಾಣ ಮಾಡಿ ಬಾಕಿ ಉಳಿದ ಜಾಗದಲ್ಲಿರುವ ಅಡಿಕೆ ಕೃಷಿಯಲ್ಲಿ ನೀರು ತುಂಬಿಕೊಂಡಿದೆ. ಅಡಿಕೆ ಕೃಷಿಯನ್ನೇ ನಂಬಿ ಬದುಕುವ ಮಹಿಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯವರ ನಿರ್ಲಕ್ಷ್ಯಕ್ಕೆ ಲಕ್ಷಾಂತರ ರು. ನಷ್ಟ ಸಂಭವಿಸಿದೆ.ಇದೀಗ ರಸ್ತೆ ನಿರ್ಮಾಣಕ್ಕೆಂದು ಕಪ್ಪು ಕಲ್ಲುಗಳನ್ನು ಒಡೆಯಲಾಗುತ್ತಿದ್ದು, ಸ್ಪೋಟದ ತೀವ್ರತೆಗೆ ಮನೆಯ ಬಾಗಿಲಿನ ಮುಂಭಾಗದಲ್ಲಿ ಗೋಡೆಗಳು, ನೆಲಕ್ಕೆ ಹಾಕಲಾದ ಟೈಲ್ಸ್ ಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಮನೆಯ ಸುತ್ತ ಸಾವಿರಾರು ರು. ಖರ್ಚು ಮಾಡಿ ಕಟ್ಟಲಾದ ಕಂಪೌಂಡ್ ಕೂಡ ಬಿರುಕು ಬಿಟ್ಟಿದ್ದು ಮನೆ ಮತ್ತು ಕೃಷಿ ಎರಡು ಕೂಡ ಸಂಪೂರ್ಣ ಹಾಳಾಗಲಿವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅನೇಕ ಬಾರಿ ಕಂಪನಿಯವರಲ್ಲಿ ಮತ್ತು ಇಲ್ಲಿನ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪನಿಯಿಂದಾಗಿ ಒಂದು ಕುಟುಂಬ ಮನೆ ಮತ್ತು ಕೃಷಿ ಎರಡನ್ನು ಕಳೆದುಕೊಂಡು ಬೀದಿಗೆ ಬರಬೇಕಾದ ಪರಿಸ್ಥಿತಿ ಉಂಟಾಗಿದ್ದು,ಕನಿಷ್ಠ ಪಕ್ಷ ಮಳೆ ನೀರು ಹರಿದು ಹೋಗಲು ಉತ್ತಮವಾದ ವ್ಯವಸ್ಥೆ ನಿರ್ಮಿಸಿ,ಇವರನ್ನು ನರಕದ ಕೂಪದಿಂದ ಹೊರತರುವ ಕೆಲಸ ಮಾಡಬೇಕಾಗಿದೆ. ತಾಲೂಕಿನ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆಯ ಆಲಿಸಿ ಪರಿಹಾರ ಒದಗಿಸುವ ಕಾರ್ಯ ಮಾಡಬೇಕಾಗಿದೆ.