ಹೊನ್ನಾಳಿ: ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದೆ. ಇದು ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ಧೋರಣೆ ಎತ್ತಿತೋರಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.
ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಧರಿಸುವ ಸಂಬಂಧ ಪ್ರಕರಣ ಸುಪ್ರೀಂ ಕೋರ್ಟ್ ಮುಂದಿದೆ. ಇನ್ನೂ ಇತ್ಯರ್ಥ ಆಇಲ್ಲ. ಹೀಗಿರುವಾಗ ಕಾಂಗ್ರೆಸ್ ಸರ್ಕಾರದ ನಡೆ ನ್ಯಾಯಾಂಗ ನಿಂದನೆ ಆಗುವುದಿಲ್ಲವೇ? ಬಿಜೆಪಿ ಬಗ್ಗೆ ಕೋಮುವಾದಿ ಎಂಬ ಆರೋಪ ಹೊರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಜಾಬ್ ವಿಚಾರದಲ್ಲಿ ಕೋಮುವಾದ ಸಂಘರ್ಷಕ್ಕೆ ನಾಂದಿ ಹಾಡಲು ಹೊರಟಿದೆ ಎಂದರು.ಬಿಜೆಪಿ ಸರ್ಕಾರವಿದ್ದಾಗ ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ರದ್ದು ಮಾಡಲಾಗಿತ್ತು. ಹೈಕೋರ್ಟ್ ಈ ಹಿಂದೆ ಬಿಜೆಪಿ ಸರ್ಕಾರದ ನಿಲುವನ್ನು ಎತ್ತಿಹಿಡಿದಿತ್ತು. ಅನಂತರ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರಿಂದ ಈಗ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಿದ್ದೂ ರಾಜ್ಯ ಸರ್ಕಾರದ ಈ ಕ್ರಮ ಎಷ್ಟು ಸರಿ ಎಂದು ಪ್ರಶ್ನಿಸಿದರು.
ದಾವಣಗೆರೆಯಲ್ಲಿ ನಡೆದ ಉಪ ಚುನಾವಣೆ ಫಲಿತಾಂಶದಿಂದ ಕಂಗೆಟ್ಟಿರುವ ಕಾಂಗ್ರೆಸ್ ಮುಖಂಡರು, ಮುಂದಿನ ದಿನಗಳಲ್ಲಿ ಮುಸ್ಲಿಮರು ಕಾಂಗ್ರೆಸ್‌ನಿಂದ ದೂರು ಸರಿಯುತ್ತಾರೆ ಎನ್ನುವ ಭಯಕ್ಕೆ ಹಿಜಾಬ್ ಪ್ರಕರಣ ಮತ್ತೆ ಎಳೆದು ತಂದಿದ್ದಾರೆ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ನಾವು ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಿ ಶಾಲಾ- ಕಾಲೇಜುಗಳಿಗೆ ಬನ್ನಿ ಎಂದು ಹೇಳಬೇಕಾಗುತ್ತದೆ. ಈ ವಿಷಯ ವಿವಾದದ ಸ್ವರೂಪ ಪಡೆದುಕೊಂಡರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದರು.ಸುದ್ದಿಗೋಷ್ಠಿಯಲ್ಲಿ ಅರಕೆರೆ ನಾಗರಾಜ್, ಜೆ.ಕೆ.ಸುರೇಶ್, ರಂಗನಾಥ್, ಫಾಲಾಕ್ಷಪ್ಪ, ಓಬಳದಾರ ಬಾಬು, ಮಾರುತಿ ನಾಯ್ಕ ನೆಲಹೊನ್ನೆ ಮಂಜುನಾಥ, ಕೆ.ವಿ.ಶ್ರೀಧರ್ ಇತರರು ಉಪಸ್ಥಿತರಿದ್ದರು.
- - -