ಹುಬ್ಬಳ್ಳಿ:

ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿರುವುದನ್ನು ಖಂಡಿಸಿ ಸೋಮವಾರ ಶ್ರೀರಾಮಸೇನಾ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ನಗರದ ಕನಕದಾಸ ಶಿಕ್ಷಣ ಸಮಿತಿಯ ಕಾಲೇಜು, ಮಹಿಳಾ ವಿದ್ಯಾಪೀಠ ಸೇರಿದಂತೆ ಹಲವೆಡೆ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಂಚುವ ಮೂಲಕ ಪ್ರತಿಭಟಿಸಿತು.

ಈ ವೇಳೆ ಪ್ರಮುಖರಾದ ಶ್ರೀಧರ ಕಲಬುರ್ಗಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಚಿಹ್ನೆಗಳಿಂದ ಮುಕ್ತವಾಗಿರಬೇಕು ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ನಿಯಮಗಳು ಅನ್ವಯವಾಗಬೇಕು ಎಂದು ಈ ಹಿಂದಿನ ಬಿಜೆಪಿ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಹಾಕಿಕೊಂಡು ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಜತೆಗೆ ಶಾಲೆಗಳಲ್ಲಿ ಸಮವಸ್ತ್ರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿರುವುದು ಖಂಡನಾರ್ಹ. ಇದನ್ನು ವಿರೋಧಿಸಿ ಶ್ರೀರಾಮಸೇನಾ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ರಾಜ್ಯಾದ್ಯಂತ ಎಲ್ಲ ಕೇಸರಿ ಶಾಲು ವಿತರಿಸುತ್ತಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಶಾಲಾ- ಕಾಲೇಜುಗಳಲ್ಲಿ ಶ್ರೀರಾಮಸೇನೆಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಪ್ರಮುಖರಾದ ಮಹಾಲಿಂಗ ಐಗಳಿ, ಅಣ್ಣಪ್ಪ ದಿವಟಗಿ, ಮಂಜು ಕಾಟಕರ, ರಘು ಯಲ್ಲಕ್ಕನವರ, ಬಸು ದುರ್ಗದ, ವಿಶ್ವನಾಥ ಭೂದುರ, ಬಸು ಗೌಡರ, ಅಮಿತ್ ಬದ್ದಿ, ಗಣೇಶ ಲದ್ವಾ, ದರ್ಶನ ಬಾಕಳೆ, ಗುಣಗರ್ ದೊಡ್ಡತಿ, ಪರಶುರಾಮ ಕೊಟಗಿ, ವೆಂಕಟೇಶ್ ದಾಸರ, ಕರಣ ಶಿಕ್ಕಲಗಾರ ಸೇರಿ ಹಲವರಿದ್ದರು.