ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಜ.22 ರಂದು ಸೋಮವಾರ ನಡೆಯಲಿರುವ ನಿಮಿತ್ತ ತಾಲೂಕಿನ ಯರಗೋಳ ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ರಾಮಲಿಂಗೇಶ್ವರ ಬೆಟ್ಟದ ತೀರ್ಥಕೊಳ್ಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.ಕೆಲವು ಭಕ್ತರು ರಾಮಲಿಂಗೇಶ್ವರ ಬೆಟ್ಟದಲ್ಲಿನ ಮಂದಿರದ ಜಾಗದಲ್ಲಿ ಸ್ವಚ್ಛಗೊಳಿಸಿ ಬಣ್ಣ, ಸುಣ್ಣದ ಅಲಂಕಾರ ಮಾಡುತ್ತಿದ್ದಾರೆ. ಮತ್ತೊಂದು ಯುವಕರ ಪಡೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪಾದಯಾತ್ರೆ ಭಕ್ತರಿಗೆ ಪ್ರಸಾದ ಮತ್ತು ನೀರಿನ ವ್ಯವಸ್ಥೆ ಮಾಡುತ್ತಿದೆ. ಯುವಕರ ತಂಡ ಮಂದಿರಕ್ಕೆ ಹೋಗುವ ದಾರಿಗೆ ಅಡ್ಡಲಾಗಿರುವ ಮುಳ್ಳಿನ ಪೊದೆ, ದಾರಿಯಲ್ಲಿ ಬಿದ್ದಿರುವ ಕಲ್ಲು ಜೆಸಿಬಿ ಸಹಾಯದಿಂದ ಸ್ವಚ್ಛಗೊಳಿಸುವ ಕಾರ್ಯವೂ ನಡೆದಿದೆ.
ಬಸ್ ನಿಲ್ದಾಣ, ಗುಡೆ-ಕಟ್ಟಿ, ಮೇದರ ಬಂಡಿ ಪ್ರದೇಶಗಳಲ್ಲಿ ಬೃಹತಾಕಾರದ ಪಾದಯಾತ್ರೆಗೆ ಸ್ವಾಗತ ಕೋರುವ ಬ್ಯಾನರ್ ಗಳನ್ನು ಕಟ್ಟಲಾಗಿದೆ. ರಾಮಲಿಂಗೇಶ್ವರ ಬೆಟ್ಟದ ಪಾದಯಾತ್ರೆ ಯಶಸ್ವಿಗಾಗಿ ಗ್ರಾಮದ ಹಿರಿಯರು, ಯುವಕರು, ಭಕ್ತರು ತನು, ಮನದಿಂದ ನೆರವು ನೀಡುತ್ತಿದ್ದಾರೆ.ಜ.22ರ ಸೋಮವಾರ ಬೆಳಗ್ಗೆ 7.30ಕ್ಕೆ ಗ್ರಾಮದ ಹೊಟ್ಟೆ ಹನುಮಂತ ಮಂದಿರದ ಮೂಲಕ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ನೂರಾರು ಸಂಖ್ಯೆ ಪಾದಯಾತ್ರಿಗಳು ಹಲಗೆ, ಭಜನೆ, ವಾದ್ಯ ತಂಡಗಳ ಜೊತೆಯಲ್ಲಿ ರಾಮಲಿಂಗೇಶ್ವರ ಬೆಟ್ಟಕ್ಕೆ ತೆರಳಲಿದ್ದಾರೆ. ಮಾರ್ಗ ಮಧ್ಯೆ ಇರುವ ಮಂದಿರಗಳಗೆ ಪೂಜೆ ನೆರವೇರಿಸಲಾಗುತ್ತದೆ ಎಂದು ಪಾದಯಾತ್ರೆ ಸಮಿತಿ ಸಾಯಿಬಣ್ಣ ಬಾನರ ಅವರು ತಿಳಿಸಿದ್ದಾರೆ.
ಭಜರಂಗದಳ ಗ್ರಾಮ ಘಟಕದ ವತಿಯಿಂದ ಬೆಳಗ್ಗೆ 7 ಗಂಟೆಗೆ ಬಸವೇಶ್ವರ ಮಂದಿರದ ಎದುರಿಗೆ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಗ್ರಾಮ ಘಟಕದ ಅಧ್ಯಕ್ಷ ಚಂದ್ರು ಜನಬೋ ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಅಲ್ಲಿಪುರ ಹಾಗೂ ಸದಸ್ಯರು, ರಾಮಭಕ್ತರು ಹಮ್ಮಿಕೊಂಡಿರುವ ಪಾದಯಾತ್ರೆಗೆ ಸಂಪೂರ್ಣವಾಗಿ ಸಹಕಾರ ಇದೆ ಎಂದರು. ಗುರುಮಠಕಲ್ ಮತಕ್ಷೇತ್ರದ ಶಾಸಕರಾದ ಶರಣಗೌಡ ಕಂದಕೂರ ಅಂದು ಮಧ್ಯಾಹ್ನ 11 ಗಂಟೆಗೆ ಮಂದಿರಕ್ಕೆ ಆಗಮಿಸಿ ಪೂಜೆ ನೆರವೇರಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.
ಗ್ರಾಮದ ಸುತ್ತಲಿನ ದಂಡಗುಂಡ, ಅಲ್ಲೂರು, ಮಲ್ಲಕಪ್ಪನಳ್ಳಿ, ಯಾಗಪುರ, ಮಲಕಪ್ಪನ ಹಳ್ಳಿ, ಅಲ್ಲಿಪುರ, ಬಾಚವಾರ, ಬೆಳಗೇರಾ ಗ್ರಾಮದಿಂದ ನೂರಾರು ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ ಎಂದು ಹಣಮಂತ ತಳವಾರ ತಿಳಿಸಿದರು.ಶಾಸಕ ಕಂದಕೂರರಿಂದ ರಾಮಲಿಂಗೇಶ್ವರನಿಗೆ ವಿಶೇಷ ಪೂಜೆ
ಯಾದಗಿರಿ: ಸೋಮವಾರ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಪುಣ್ಯಕ್ಷೇತ್ರವಾದ ಯರಗೋಳದ ಶ್ರೀರಾಮಲಿಂಗೇಶ್ವರ ಬೆಟ್ಟದ ''''ತೀರ್ಥಕೊಳ'''' ಕ್ಕೆ ಗ್ರಾಮದ ರಾಮ ಭಕ್ತರು ಪಾದಯಾತ್ರೆ ಹಮ್ಮಿಕೊಂಡಿದ್ದು, ರಾಮಭಕ್ತರೊಂದಿಗೆ ವಿಶೇಷ ಪೂಜೆ ಸಲ್ಲಿಸುವುದಾಗಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶ್ರೀರಾಮನ ವೇಷದಲ್ಲಿ ಬಾಲಕ ಸರ್ವೇಶ್ವರಯ್ಯ ಹಿರೇಮಠ್
ಶಹಾಪುರ : ರಾಮಲಲ್ಲಾ ಪ್ರತಿಷ್ಠಾಪನೆ ಅಂಗವಾಗಿ ನಗರದ ಕುಂಬಾರಗೇರಿ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮದ ಅಂಗವಾಗಿ ಶ್ರೀಮಠದ ಬಾಲಕ ಸರ್ವೇಶ್ವರಯ್ಯ ಜಿ. ಹಿರೇಮಠ್ ಶ್ರೀರಾಮನ ವೇಷಧರಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಈ ಕುರಿತು ಮಾತನಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಕ ಸೋಮಶೇಖರಯ್ಶ ಹಿರೇಮಠ, ಎಲ್ಲರೂ ಪರಿಶುದ್ಧ ಮನಸ್ಸಿನಿಂದ ರಾಮನಾಮ ಜಪಿಸಿದರೆ ಕಷ್ಟವೋ ಕರ್ಪೂರದಂತೆ ಕರಗಿ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಪಡೆಯಲು ಶ್ರೀರಾಮನಾಮ ಒಂದೇ ಸಾಕು. ರಾಮನಲ್ಲಿ ಭಕ್ತಿ ಹಾಗೂ ನಂಬಿಕೆಯಿಟ್ಟು ನಡೆದರೆ ಜೀವನವು ಸದಾ ಸಂತೃಪ್ತಿಯಿಂದ ಕೂಡಿರುವುದು ಎಂದು ಹೇಳಿದ್ದಾರೆ.