ಕೃಷಿಯಿಂದ ಮಲೆನಾಡಿನ ಜನತೆ ವಿಮುಖ

| Published : Jan 03 2024, 01:45 AM IST

ಸಾರಾಂಶ

ಕೃಷಿ ಇಲ್ಲದ ಜಗತ್ತು ಊಹಿಸುವುದಕ್ಕೂ ಅಸಾಧ್ಯ. ಕೃಷಿಗೆ ಶಿಕ್ಷಣವೇ ಬೇಕೆಂದಿಲ್ಲ. ಕೃಷಿ ಕೌಶಲ್ಯವಿದ್ದರೇ ಯಾವ ಕೃಷಿಯನ್ನಾದರೂ ಮಾಡಿ ಆರ್ಥಿಕ ಸ್ಥಿತಿ ಸುಭದ್ರಮಾಡಿಕೊಳ್ಳಬಹುದಾಗಿದೆ.

ಶಿರಸಿ:ಕೃಷಿ ಮಲೆನಾಡಿನ ಜನತೆಯ ಜೀವನದ ಅವಿಭಾಜ್ಯ ಅಂಗ. ಯುವಕರು ಕೃಷಿಯಿಂದ ವಿಮುಕ್ತರಾಗುತ್ತಿರುವುದು ವಿಷಾದಕರ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ಅವರು ಮಂಗಳವಾರ ಐಎಂಎ ಹಾಲ್‌ನಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ದೇಸಾಯಿ ಫೌಂಡೇಶನ್ ಟ್ರಸ್ಟ್‌ ವತಿಯಿಂದ ನಡೆದ ಕೌಶಲ್ಯ ತರಬೇತಿಗಳ ಉದ್ಘಾಟನೆ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕೃಷಿ ಇಲ್ಲದ ಜಗತ್ತು ಊಹಿಸುವುದಕ್ಕೂ ಅಸಾಧ್ಯ. ಕೃಷಿಗೆ ಶಿಕ್ಷಣವೇ ಬೇಕೆಂದಿಲ್ಲ. ಕೃಷಿ ಕೌಶಲ್ಯವಿದ್ದರೇ ಯಾವ ಕೃಷಿಯನ್ನಾದರೂ ಮಾಡಿ ಆರ್ಥಿಕ ಸ್ಥಿತಿ ಸುಭದ್ರಮಾಡಿಕೊಳ್ಳಬಹುದಾಗಿದೆ ಎಂದರು.ಜೇನು ಕೃಷಿಗೆ ದೇಶ-ವಿದೇಶದಲ್ಲೂ ಬಾರಿ ಬೇಡಿಕೆಯಿದೆ. ಈ ಕೃಷಿಯನ್ನು ಮಹಿಳೆಯರೂ ಆಸಕ್ತಿಯಿಂದ ಮೈಗೂಡಿಸಿಕೊಂಡರೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು. ನಮ್ಮ ತಾಲೂಕಿನ ಕಲ್ಲಳ್ಳಿಮನೆಯ ಮಧುಕೇಶ್ವರ ಹೆಗಡೆ ಅವರು ಜೇನು ಕೃಷಿಯಿಂದಲೇ ರಾಜ್ಯಪಾಲರಿಂದ ಅತ್ಯುತ್ತಮ ಕೃಷಿ ಉತ್ಪನ್ನ ಉದ್ಯಮದಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಧುಕೇಶ್ವರ ಹೆಗಡೆ ನಮಗೆಲ್ಲರಿಗೂ ಆದರ್ಶವಾಗಬೇಕೆಂದು ಹೇಳಿದರು.ನಮ್ಮ ಕ್ಷೇತ್ರಕ್ಕೆ ಗಾರ್ಮೆಂಟ್ಸ್ ಫ್ಯಾಕ್ಟರಿ ಅವಶ್ಯಕತೆ ಇರುವುದನ್ನು ಮನಗಂಡಿದ್ದೇನೆ. ಇದು ಯಾವತ್ತೂ ಆಗಬೇಕಿತ್ತು. ನಾನು ಸರ್ಕಾರದ ಗಮನಕ್ಕೆ ತಂದಿದ್ದು ಸದ್ಯದಲ್ಲಿಯೇ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ ಎಂದರು.ಇತ್ತೀಚಿಗಂತೂ ಯುವಕರು ಸರ್ಕಾರಿ ಉದ್ಯೋಗಕ್ಕಿಂತ ಖಾಸಗಿ ಉದ್ಯೋಗವನ್ನೆ ಹೆಚ್ಚಾಗಿ ನಂಬುತ್ತಿದ್ದಾರೆ. ಸಂಸಾರ ತೂಗಿಸಲು ಮಹಿಳೆಯರಿಗೆ ಯಜಮಾನನ ಹಣ ಸಾಕಾಗುತ್ತಿಲ್ಲ.ಇಂತಹ ಸಂದರ್ಭದಲ್ಲಿ ಮಹಿಳೆಯರೂ ದುಡಿಯಬೇಕಾಗಿರುವುದು ಅನಿವಾರ್ಯವಾಗಿದೆ. ಆಗ ಸ್ಕೊಡ್‌ವೆಸ್‌ನಂತಹ ಸಂಸ್ಥೆಗಳ ಮೊರೆ ಹೋಗ ಬೇಕಾಗುತ್ತದೆ. ಈ ಸಂಸ್ಥೆಯು ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಬಗೆಯ ತರಬೇತಿ ನೀಡುವ ಕಾರ್ಯಕ್ಕೆ ಮುಂದಾಗಿದೆ. ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಸ್ಕೊಡ್‌ವೆಸ್ ಸಂಸ್ಥೆ ಮಾಡುತ್ತಿದೆ ಎಂದರು.ಸ್ಕೊಡ್‌ವೆಸ್ ಸಂಸ್ಥೆ ಕಾಯಾಧ್ಯಕ್ಷ ಡಾ. ವೆಂಕಟೇಶ ನಾಯ್ಕ ಮಾತನಾಡಿದರು. ಇದೇ ವೇಳೆ ಸ್ಕೊಡ್‌ವೆಸ್ ಮತ್ತು ದೇಸಾಯಿ ಫೌಂಡೇಶನ್ ಟ್ರಸ್ಟ್ ವತಿಯಿಂದ ಬ್ಯೂಟಿಶನ್, ಹೊಲಿಗೆ ಹಾಗೂ ಕಂಪ್ಯೂಟರ್‌ನಲ್ಲಿ ತರಬೇತಿ ಪಡೆದ ನಿರುದ್ಯೋಗಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ಸ್ಕೊಡ್‌ವೆಸ್‌ನ ಮಹಿಳಾ ಸೌಹಾರ್ದಸಹಕಾರಿ ಸಂಘದ ಅಧ್ಯಕ್ಷೆ ಸರಸ್ವತಿ ಎನ್ ರವಿ, ಸ್ಕೊಡ್‌ವೆಸ್ ಸಂಸ್ಥೆಯ ನಿರ್ದೇಶಕರಾದ ಕೆ.ಎನ್. ಹೊಸ್ಮನಿ ಹಾಗೂ ಕೆ.ವಿ. ಖೂರ್ಸೆ ಉಪಸ್ಥಿತರಿದ್ದರು.