ಸಾರಾಂಶ
ಎಡಗಾಲಿನ ಶಸ್ತ್ರಚಿಕಿತ್ಸೆ ಮಾಡುವ ಬದಲು ಬಲಗಾಲಿನ ಶಸ್ತ್ರಚಿಕಿತ್ಸೆ ಮಾಡಿದ ಎಡವಟ್ಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮ್ಸ್ ಆಡಳಿತ ಪರಿಷತ್ ಸದಸ್ಯ ರವೀಶ್ ಬಸವಾಪುರ ಅವರು ಆಸ್ಪತ್ರೆಗೆ ಭೇಟಿ ನೀಡಿ, ಎಡಗಾಲಿನ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಜ್ಯೋತಿ ಎಂಬ ೨೮ ವರ್ಷದ ಮಹಿಳೆಯನ್ನು ಭೇಟಿ ಮಾಡಿ ರೋಗಿಗೆ ಧೈರ್ಯ ತುಂಬಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು. ಇಂತಹ ನಿರ್ಲಕ್ಷ್ಯದಿಂದ ಹಿಮ್ಸ್‌ನ ಹೆಸರಿಗೂ ಧಕ್ಕೆಯಾಗಿದೆ. ಈ ತಪ್ಪಿಗೆ ಕಾರಣರಾದ ವೈದ್ಯ ಸಂತೋಷ್‌ರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದರು.
ಹಾಸನ: ಎಡಗಾಲಿನ ಶಸ್ತ್ರಚಿಕಿತ್ಸೆ ಮಾಡುವ ಬದಲು ಬಲಗಾಲಿನ ಶಸ್ತ್ರಚಿಕಿತ್ಸೆ ಮಾಡಿದ ಎಡವಟ್ಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮ್ಸ್ ಆಡಳಿತ ಪರಿಷತ್ ಸದಸ್ಯ ರವೀಶ್ ಬಸವಾಪುರ ಅವರು ಆಸ್ಪತ್ರೆಗೆ ಭೇಟಿ ನೀಡಿ, ಎಡಗಾಲಿನ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಜ್ಯೋತಿ ಎಂಬ ೨೮ ವರ್ಷದ ಮಹಿಳೆಯನ್ನು ಭೇಟಿ ಮಾಡಿ ರೋಗಿಗೆ ಧೈರ್ಯ ತುಂಬಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು.
ಹಾಸನ ಜಿಲ್ಲಾ ಆಸ್ಪತ್ರೆಯು ರಾಜ್ಯದ ಪ್ರಮುಖ ಹಾಗೂ ಪ್ರತಿಷ್ಠಿತ ಆರೋಗ್ಯ ಕೇಂದ್ರವಾಗಿದ್ದು, ಪ್ರತಿದಿನ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಇಂತಹ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದಿಂದ ತಪ್ಪು ಶಸ್ತ್ರ ಚಿಕಿತ್ಸೆ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ನಿರ್ಲಕ್ಷ್ಯದಿಂದ ಹಿಮ್ಸ್‌ನ ಹೆಸರಿಗೂ ಧಕ್ಕೆಯಾಗಿದೆ. ಈ ತಪ್ಪಿಗೆ ಕಾರಣರಾದ ವೈದ್ಯ ಸಂತೋಷ್‌ರನ್ನು ಕೂಡಲೇ ಅಮಾನತುಗೊಳಿಸಬೇಕು. ಬಡ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಜ್ಯೋತಿ ಅವರು ಕಡು ಬಡತನದ ಕುಟುಂಬದವರು, ಕೂಲಿ ಕಾರ್ಮಿಕರಾಗಿದ್ದಾರೆ. ಇಂತಹ ಆಘಾತಕಾರಿ ಘಟನೆಗಳಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣವೇ ನೆರವಿಗೆ ಬರಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.ಅದೇ ಸಮಯದಲ್ಲಿ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಸಚಿವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.