ಹಿಂದಿ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ನಡುವಿನ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಯಾಗ ರಾಜನ ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನ ಹಾಗೂ ಬೀದರಿನ ಗುರುನಾನಕ ಪದವಿ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನ.27 ಮತ್ತು 28ರಂದು ನಗರದ ಗುರುನಾನಕ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಹಿಂದಿ ಸಾಹಿತ್ಯ ಸಮ್ಮೇಳನ ಹಾಗೂ ಸಂಸ್ಥೆಯ 30ನೇ ರಾಷ್ಟ್ರೀಯ ಅಧಿವೇಶನ ಆಯೋಜಿಸಲಾಗಿದೆ ಎಂದು ಪ್ರಯಾಗರಾಜ ವಿಶ್ವ ಹಿಂದಿ ಸಾಹಿತ್ಯ ಸಂಸ್ಥಾನದ ಮುಖ್ಯಸ್ಥರಾದ ಡಾ.ರಂಜಿತ ಸಿಂಗ್ ಅರೋರಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದೇಶದ 15 ರಾಜ್ಯಗಳಿಂದ ಸುಮಾರು 100 ಪ್ರಮುಖ ಸಾಹಿತಿಗಳು, ಕವಿಗಳು, ಲೇಖಕರು, ಶಿಕ್ಷಣ ತಜ್ಞರು, ಭಾಷಾ ತಜ್ಞರು, ಸಂಶೋಧಕರು ಹಾಗೂ ಸಮಾಜಸೇವಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ನ.27ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿ, ಹಿಂದಿ ಸಾಹಿತಿ ಹಾಗೂ ಕವಿ ಡಾ. ರಾಜೇಶ್ ಕುಮಾರ್ ಝಾ, ಗುರುನಾನಕ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರ್ದಾರ್ ಬಲಬೀರ್‌ ಸಿಂಗ್, ಡಾ.ರೇಷ್ಮಾ ಕೌರ್ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.

ಸಂಸ್ಥೆಯ ಕಾರ್ಯದರ್ಶಿ ಡಾ.ಗೋಖಲೇಶ್ವರ ಪ್ರಸಾದ್ ಮಾತನಾಡಿ, ಬೀದರಿನಲ್ಲಿ ಶ್ರೀಮಂತ ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಅಡಗಿದೆ. ಗುರುನಾನಕ ಝೀರಾ, ಬೀದರಿ ಕಲೆ, ಐತಿಹಾಸಿಕ ಸ್ಮಾರಕಗಳು, ಶರಣರ ಪರಂಪರೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಳ ಕುರಿತು ಹೊರಜಗತ್ತಿಗೆ ಇನ್ನಷ್ಟು ಪರಿಚಯಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ನಾಲ್ಕು ಕೃತಿಗಳ ಲೋಕಾರ್ಪಣೆ ನಡೆಯಲಿದೆ. ನ.28ರಂದು ಸಾಹಿತ್ಯ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಗುರುನಾನಕ್‌ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ಯಾಮಲಾ.ವಿ.ದತ್ತಾ ಸಮ್ಮೇಳನಕ್ಕೆ ಸಕಲ ಸಿದ್ಧತೆ ಕುರಿತು ಮಾತನಾಡಿದರು. ಸಮ್ಮೇಳನದ ಆಯೋಜಕಿ ಡಾ.ಹೇಮಾ ಸುಲ್ತಾನಪುರೆ ಸೇರಿದಂತೆ ಇನ್ನಿತರರು ಇದ್ದರು.