ಪಟ್ಟಣದ ನವಾಯತ್ ಕಾಲನಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಾದಿ ಕಾಲದಿಂದಲೂ ಮಾರಿಯಮ್ಮನ ಹೊರೆ ಇಳಿಸುತ್ತಿದ್ದ ಮುರಿನಕಟ್ಟೆಯನ್ನು ಪುನಃ ಸ್ಥಾಪಿಸುವ ಮೂಲಕ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲವಾರು ತಿಂಗಳುಗಳ ಕನಸನ್ನು ನನಸಾಗಿಸಲು ಯಶಸ್ವಿಯಾದರು.

ಭಾನುವಾರ ಬೆಳಗ್ಗೆ ಕಟ್ಟೆ ನಿರ್ಮಾಣ: ಅನ್ಯಕೋಮಿನವರ ಆಕ್ಷೇಪ, ರಾತ್ರಿ ಭಾಗಶಃ ತೆರವುಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ನವಾಯತ್ ಕಾಲನಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಾದಿ ಕಾಲದಿಂದಲೂ ಮಾರಿಯಮ್ಮನ ಹೊರೆ ಇಳಿಸುತ್ತಿದ್ದ ಮುರಿನಕಟ್ಟೆಯನ್ನು ಪುನಃ ಸ್ಥಾಪಿಸುವ ಮೂಲಕ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲವಾರು ತಿಂಗಳುಗಳ ಕನಸನ್ನು ನನಸಾಗಿಸಲು ಯಶಸ್ವಿಯಾದರು. ಆದರೆ ರಾತ್ರಿ ವೇಳೆಗೆ ಅನ್ಯಕೋಮಿನ ಮುಖಂಡರು ಬಂದು ಭಾಗಶಃ ತೆರವುಗೊಳಿಸಿದರು.

ಕಳೆದ ಸುಮಾರು ೩-೪ ವರ್ಷಗಳಿಂದ ಹೆದ್ದಾರಿ ಕಾಮಗಾರಿ ಆರಂಭವಾದಾಗನಿಂದ ಮುರಿನಕಟ್ಟೆ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದ್ದು, ಅಲ್ಲಿದ್ದ ಕಟ್ಟೆಯನ್ನು ತೆರವುಗೊಳಿಸಲಾಗಿತ್ತು. ಹಿಂದೂಗಳ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದ ಮುರಿನಕಟ್ಟೆಯನ್ನು ಪುನಃ ಕಟ್ಟಿಕೊಡುವಂತೆ ಹಿಂದೂ ಸಂಘಟನೆಗಳ ಬೇಡಿಕೆಯನ್ನು ಈಡೇರಿಸಲು ತಾಲೂಕು ಆಡಳಿತ, ಜಿಲ್ಲಾಡಳಿತವಾಗಲೀ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ವಾದ, ವಿವಾದ, ಹಲವು ಭಾರಿ ಸಭೆ ನಡೆಸಿ ಚರ್ಚೆ ನಡೆಸಲಾಗಿತ್ತು. ಅಲ್ಲದೇ ಮುರಿನಕಟ್ಟೆ ಪ್ರದೇಶವನ್ನು ಅನ್ಯ ಕೋಮಿನ ಕೆಲವರು ಮನೆಯನ್ನು ಕಟ್ಟುವ ತಯಾರಿನಲ್ಲಿ ಅತಿಕ್ರಮಣ ಮಾಡುವ ಭೀತಿಯು ಜನರಲ್ಲಿ ಕಾಡಿತ್ತು. ಇದರಿಂದ ಈ ಹಿಂದೆ ಹಲವು ಬಾರಿ ಕಟ್ಟೆಯನ್ನು ಕಟ್ಟಲು ಪ್ರಯತ್ನಿಸಿದರೂ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಅಡ್ಡಿಯಿಂದಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರೂ ಕಾದು ನೋಡುವ ತಂತ್ರ ಅನುಸರಿಸಿದರು. ಆದರೆ ಅಂತಿಮವಾಗಿ ಮುರಿನಕಟ್ಟೆಯ ಹಿಂಬದಿಯಲ್ಲಿ ವ್ಯಕ್ತಿಯೊಬ್ಬರು ಮನೆಯನ್ನು ಕಟ್ಟಲು ಆರಂಭ ಮಾಡಿದಾಗ ಹಿಂದೂ ಸಂಘಟನೆಯವರು ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದರು. ನಮ್ಮ ಸ್ಥಳ ನಮಗೆ ಬೇಕು, ಹಿಂದೂಗಳ ಶ್ರದ್ಧಾ-ಭಕ್ತಿಯ ಕೇಂದ್ರವಾದ ಮುರಿನಕಟ್ಟೆಯನ್ನು ಮರುಸ್ಥಾಪಿಸಬೇಕು ಎಂದು ಪಟ್ಟು ಹಿಡಿದಿದ್ದರು.

ಇಲಾಖೆಯಿಂದಲೇ ಮುರಿನಕಟ್ಟೆಯನ್ನು ಮರು ಸ್ಥಾಪಿಸಲಾಗುವುದು ಎನ್ನುವ ಭರವಸೆ ಹುಸಿಯಾಗಿದ್ದು, ಅವರು ನೀಡಿದ್ದ ಅವಧಿ ಮುಗಿದಿದ್ದರಿಂದ ಭಾನುವಾರ ಬೆಳಗ್ಗೆ ಸುರಿಯುವ ಮಳೆಯನ್ನೂ ಲೆಕ್ಕಸದೇ ಹಿಂದೂ ಸಂಘಟನೆಯ ಕಾರ್ಯಕರ್ತರು ಮುರಿನಕಟ್ಟೆಯನ್ನು ಈ ಹಿಂದೆ ಇದ್ದ ಜಾಗಾದಲ್ಲಿಯೇ ನಿರ್ಮಾಣ ಮಾಡಿದರು. ಭಾನುವಾರ ಬೆಳಗ್ಗೆ ಸುಮಾರು ೬ ಗಂಟೆಯ ಸಮಯಕ್ಕೆ ಸೇರಿದ ಜನ ಕಟ್ಟೆಯನ್ನು ಕಟ್ಟಲು ಆರಂಭಿಸಿದ್ದರು. ಸುದ್ದಿ ತಿಳಿದ ತಕ್ಷಣ ಪೊಲೀಸರು ಆಗಮಿಸಿದರಾದರೂ ಇಲಾಖೆ ಕೊಟ್ಟ ಗಡುವು ಮೀರಿದ್ದರಿಂದ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಾಗಿಲ್ಲ. ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸ್ಥಳದಲ್ಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ನೋಡಿಕೊಂಡರು. ಸ್ಥಳದಲ್ಲಿ ಅನ್ಯಕೋಮಿನ ಮುಖಂಡರು ಆಗಮಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೂ ಸರ್ಕಾರಿ ಜಾಗಾದಲ್ಲಿ ಕಟ್ಟೆ ಕಟ್ಟುತ್ತಿರುವುದರಿಂದ ಅವರ ತಕರಾರು ಕೂಡಾ ನಡೆಯಲಿಲ್ಲ. ಹಿಂದೂ ಸಂಘಟನೆಯ ಕಾರ್ಯಕರ್ತರು ಯಾವುದಕ್ಕೂ ಪ್ರಾಮುಖ್ಯ ಕೊಡದೇ ಕಟ್ಟೆಯನ್ನು ಕಟ್ಟಿ ಮುಗಿಸುವುದಕ್ಕೆ ಪ್ರಾಶಸ್ತ್ಯ ನೀಡಿದ್ದು, ಮುರಿನಕಟ್ಟೆಯನ್ನು ಮರುಸ್ಥಾಪನೆ ಮಾಡಿದರು. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಕಟ್ಟೆಗೆ ತೊಂದರೆ ಆದರೆ ಸುಮ್ಮನಿರುವುದಿಲ್ಲ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.ಅನ್ಯಕೋಮಿನವರಿಂದ ಭಾಗಶಃ ತೆರವು

ಹಿಂದೂ ಸಂಘಟನೆಯ ಕಾರ್ಯಕರ್ತರು ಭಾನುವಾರ ಬೆಳಗ್ಗೆ ನಿರ್ಮಿಸಿದ ಮುರಿನಕಟ್ಟೆಯನ್ನು ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ‌‌ ಅನ್ಯಕೋಮಿನವರು ಎಸ್ಪಿ ಎಂ. ದೀಪನ್ ಸಮ್ಮುಖದಲ್ಲೆ ಕೆಡವಿ ಹಾಕಿದ್ದು, ಭಟ್ಕಳದ ಸ್ಥಿತಿ ಬೂದಿ‌ಮುಚ್ಚಿದ ಕೆಂಡದಂತಾಗಿದೆ. ಭಾನುವಾರ ಕಟ್ಟೆ ಕಟ್ಟುವ ವೇಳೆ‌ ಆಕ್ಷೇಪ ಎತ್ತಿದ ಮುಸ್ಲಿಂ ಮುಖಂಡರನ್ನು ಭಟ್ಕಳ ಉಪವಿಭಾಗಾಧಿಕಾರಿ‌ ಜೆ. ಮಹೇಶ ಸಮ್ಮುಖದಲ್ಲಿ‌ ಸಭೆ ನಡೆಸಿ, ಹೆದ್ದಾರಿ ಆಕ್ರಮಿತ ಜಾಗದಲ್ಲಿ ಕಟ್ಟೆ ನಿರ್ಮಿಸಲಾಗಿದ್ದು, ಅಪಘಾತ ತಡೆಯಲು ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಎಲ್ಲರೂ ಸಹಕಾರ ನೀಡುವಂತೆ ಕೋರಿದ್ದರು. ಆದರೆ ಇದಕ್ಕೆ ಒಪ್ಪದ ಅನ್ಯಕೋಮಿನವರು ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಮುರಿನಕಟ್ಟೆ ಬಳಿ ಹೆದ್ದಾರಿ ತಡೆ ನಡೆಸಿದರು.‌ ಸ್ಥಳಕ್ಕೆ ಆಗಮಿಸಿದ ಎಸ್ಪಿ ಎಂ. ದೀಪನ್ ಹಾಗೂ ಡಿವೈಎಸ್ಪಿ ಗಿರೀಶ ಪ್ರತಿಭಟನಾಕಾರರನ್ನು ಸಮಾಧಾನಿಸುವ ವೇಳೆಯಲ್ಲಿಯೇ ಉದ್ರಿಕ್ತ ಯುವಕರ ಗುಂಪೊಂದು ಕಬ್ಬಿಣದ ರಾಡಿನಿಂದ ಕಟ್ಟೆಯನ್ನು ಭಾಗಶಃ ತೆರವು ಮಾಡಿ ಅಲ್ಲಿಂದ ತೆರಳಿದ್ದಾರೆ. ಈ ಪ್ರಕರಣದಿಂದ ಭಟ್ಕಳ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಹಿಂದೂ ಸಂಘಟನೆಯವರು ಈ ಘಟನೆಯಿಂದ ಆಕ್ರೋಶಿತರಾಗಿದ್ದಾರೆ. ಮೇ 25ರಂದು ಭಟ್ಕಳ ಬಂದ್‌ ಮಾಡಿ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಕಟ್ಟೆಯ ಕಲ್ಲು ಕಿತ್ತು ಹಾಕಿರುವುದಕ್ಕೆ ಹಿಂದೂ ಸಂಘಟನೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.