ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಬನಶಂಕರಿ, ಶಾಂತಿನಗರ, ಅಮರ ಜ್ಯೋತಿನಗರ, ಸದಾಶಿವನಗರ, ವೀರಸಾಗರ, ಕುರಿಪಾಳ್ಯ, ಸರಸ್ವತಿಪುರಂ, ಮರಳೂರು, ಮರಳೂರು ದಿಣ್ಣೆ ವಸತಿಗಳ ಹಿಂದು ಸಮಾಜೋತ್ಸವ ಸಮಿತಿಯಿಂದ ಗುರುವಾರ ಸಂಜೆ ಕುಣಿಗಲ್ ರಸ್ತೆಯಲ್ಲಿ ವೈಭವದ ಶೋಭಾಯಾತ್ರೆ ನಡೆಯಿತು. ರಿಂಗ್ ರಸ್ತೆಯ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಭಾರತಮಾತೆ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಕಾರದ ವೀರಬಸವ ಸ್ವಾಮೀಜಿ, ಹಿಂದೂಗಳು ಹಿಂದೂ ಧರ್ಮದ ಹಬ್ಬವನ್ನು ಆಚರಿಸುತ್ತಿರುವ ಇಂದು ಪುಣ್ಯದ ದಿನ. ಇಂತಹ ಭರತ ಖಂಡದಲ್ಲಿ ಜನಿಸಿದ ನಾವೇ ಪುಣ್ಯವಂತರು. ಹಿಂದೂ ಧರ್ಮದ ಶ್ರೇಷ್ಠ ಆಚಾರವಿಚಾರ, ಸಂಸ್ಕೃತಿ, ಸಂಸ್ಕಾರದ ಶ್ರೇಷ್ಠತೆ ಜಗತ್ತಿಗೆ ಮಾದರಿಯಾಗಿವೆ. ಅನೇಕ ರಾಷ್ಟ್ರಗಳು ಭಾರತೀಯ ಸಂಸ್ಕೃತಿಗೆ ಮಾರುಹೋಗಿವೆ ಎಂದು ಹೇಳಿದರು.
ಭಾರತದ ಮೇಲೆ ಎಷ್ಟೇ ದಾಳಿಗಳಾದರೂ ನಮ್ಮ ಸಂಸ್ಕಾರ, ಸಂಸ್ಕೃತಿ, ಸಂಪತ್ತಿನ ಮೇಲೆ ದೌರ್ಜನ್ಯ ನಡೆದರೂ ಯಾವುದೇ ಪರಿಣಾಮವಾಗದೆ ಯಾವುದಕ್ಕೂ ಧಕ್ಕೆಯಾಗದ ರೀತಿಯಲ್ಲಿ ದೇಶ ಮುನ್ನಡೆಯುತ್ತಿದೆ. ಅಲೆಕ್ಸಾಂಡರನು ಭಾರತದ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಅರಿಸ್ಟಾಟಲ್ ಅವನಿಗೆ ಹೇಳಿದ್ದ, ನೀನು ಆ ದೇಶದ ಯಾವುದೇ ಸಂಪತ್ತು ತರುವ ಬದಲು ಭರತಖಂಡದ ಮಣ್ಣು, ಗಂಗೆ, ಒಬ್ಬ ಗುರುವನ್ನು ತೆಗೆದುಕೊಂಡು ಬಾ ನಿನ್ನ ದೇಶ ಉದ್ಧಾರವಾಗುತ್ತದೆ ಎಂದು. ಅಂದರೆ ನಮ್ಮ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ, ಶ್ರೇಷ್ಠತೆ ಆಗಲೇ ಜಗತ್ತಿಗೆ ತಿಳಿದಿತ್ತು ಎಂದರು.ಶಾಂತಿ, ಸೌಹಾರ್ದತೆ, ಸಹಬಾಳ್ವೆ ಬಯಸುವ ಹಿಂದೂ ಸಂಸ್ಕೃತಿ ಪ್ರಪಂಚಕ್ಕೇ ಮಾದರಿ, ಮಣ್ಣನ್ನು, ನೀರನ್ನು ಗಿಡಮರವನ್ನು, ಮನುಷ್ಯನನ್ನು ದೇವರೆಂದು ಪೂಜಸುವ ಸಂಸ್ಕಾರದ ದೇಶ ನಮ್ಮದು. ಹಿಂದೂ ಸಮಾಜೋತ್ಸವ ಆಚರಣೆಯು ಸಮಾಜದಲ್ಲಿ ಹಿಂದುತ್ವ ಭಾವನೆಯನ್ನು ಮತ್ತಷ್ಟು ಬಲಪಡಿಸುವುದು, ಸಮಾಜದ ಬಗ್ಗೆ ಒಗಟ್ಟು ಮೂಡಿಸಲು ಸಹಕಾರಿಯಾಗಿದೆ ಎಂದು ಸ್ವಾಮೀಜಿ ಹೇಳಿದರು.
ಶೋಭಾಯಾತ್ರೆಯೊಂದಿಗೆ ಈ ಪ್ರದೇಶದ ವಿವಿಧ ದೇವಸ್ಥಾನಗಳ ಮೆರವಣಿಗೆ ದೇವರುಗಳ ಉತ್ಸವ ನಡೆಸಲಾಯಿತು. ಆಂಜನೇಯಸ್ವಾಮಿ, ಬಸವಣ್ಣ, ವಿದ್ಯಾಗಣಪತಿ, ಲಕ್ಷ್ಮೀನರಸಿಂಹಸ್ವಾಮಿ, ವೆಂಕಟೇಶ್ವರಸ್ವಾಮಿ, ಜಾಡ್ರಾಳಮ್ಮ, ಮುತ್ತು ಮಾರಿಯಮ್ಮ, ಮಾರಮ್ಮ, ಶಿರಡಿ ಸಾಯಿಬಾಬಾ ದೇವರುಗಳನ್ನು ವೈಭವದ ಶೋಭಾಯಾತ್ರೆಗೆ ಕರೆತರಲಾಗಿತ್ತು. ಭಾರತಮಾತೆ ಭಾವಚಿತ್ರ, ಮಂಗಳವಾದ್ಯ, ಪೂರ್ಣಕುಂಭ, ವಿವಿಧ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ಶೋಭಾಯಾತ್ರೆಯ ವೈಭವ ಹೆಚ್ಚಿಸಿದವು. ಭಾಗವಹಿಸಿದ್ದ ಎಲ್ಲಾ ಹಿಂದೂ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಸಂಭ್ರಮದಿಂದ ಶೋಭಾಯಾತ್ರೆಯಲ್ಲಿ ಸಾಗಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಶಿರಡಿ ಸಾಯಿಬಾಬಾ ದೇವಸ್ಥಾನ ಸಮಿತಿ ಕಾರ್ಯದರ್ಶಿ ಗುರುಸಿದ್ಧಪ್ಪ, ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಕೆಂಬಾಳ್ ರವೀಂದ್ರ, ಉದ್ಯಮಿ ರಂಗನಾಥ್ ಲಾಡ್, ದೇವಸ್ಥಾನಗಳ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ್, ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಸಿ.ಶಿವಕುಮಾರ್, ಖಜಾಂಚಿ ಕೆ.ವೇದಮೂರ್ತಿ, ಮುಖಂಡರಾದ ಟಿ.ಹೆಚ್.ಹನುಮಂತರಾಜು, ಬೆಳ್ಳಿ ಲೋಕೇಶ್, ಧರಣೇಂದ್ರಕುಮಾರ್, ಕೃಷ್ಣಮೂರ್ತಿ, ಬಂಬೂ ಮೋಹನ್, ಕುಮಟೇಶ್, ಕಡ್ಡಿ ಕುಮಾರ್, ನಿಸರ್ಗ ರಮೇಶ್, ಪ್ರೀತಮ್, ಆಟೋ ಯಡಿಯೂರಪ್ಪ, ಕುಮಾರ್, ಹರೀಶ್, ಗಂಗಾಧರ್, ಶಂಕರ್, ಜ್ಯೋತಿಪ್ರಕಾಶ್, ಬನಶಂಕರಿಬಾಬು, ವೆಂಕಟೇಶಾಚಾರ್, ಹನುಮಂತರಾಜು, ಕೇಬಲ್ ಮಂಜು, ದೇವರಾಜು, ನಂದಿ ಪ್ರಭಾಕರ್, ಕಾಮಕೃಷ್ಣ, ಕುಮಾರ್, ಉಮೇಶ್, ಸತೀಶ್ ಸೇರಿದಂತೆ ಈ ಭಾಗದ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
