ಸಾರಾಂಶ
ಚನ್ನಗಿರಿ: ಪಟ್ಟಣದಲ್ಲಿ 8 ವರ್ಷಗಳಿಂದ ಹಿಂದೂ ಏಕತಾ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅಂತೆಯೇ, ಸೆಪ್ಟೆಂಬರ್‌ನಲ್ಲಿ ಬರಲಿರುವ 9ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಗುರುವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಟ್ಟಣದ ಹಿಂದೂ ಸಮಾಜ ಬಾಂಧವರ ಪೂರ್ವಭಾವಿ ಸಭೆ ನಡೆಸಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣೇಶೋತ್ಸವವನ್ನು ಜಾತ್ಯತೀತ, ಪಕ್ಷಾತೀತವಾಗಿ ಆಚರಿಸಲಾಗುತ್ತಿದೆ. ಸೆ.7ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗುವುದು. 9 ದಿನಗಳ ಕಾಲ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪ್ರತಿದಿನವೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಗಣಪತಿ ಮೂರ್ತಿ ವಿಸರ್ಜನೆ ಅದ್ಧೂರಿ ಮೆರವಣಿಗೆಯೊಂದಿಗೆ ಪಟ್ಟಣದಲ್ಲಿ ರಾಜಬೀದಿ ಉತ್ಸವ ನಡೆಸಲಾಗುವುದು. ಬಳಿಕ ಬಸ್ ನಿಲ್ದಾಣ ಬಳಿ ಇರುವ ಗಣಪತಿ ಹೊಂಡದಲ್ಲಿ ಮೂರ್ತಿ ವಿಸರ್ಜನೆ ಮಾಡಲಾಗುವುದು. ಈ ಉತ್ಸವಕ್ಕೆ ಎಲ್ಲ ಹಿಂದೂ ಸಮಾಜಗಳ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.ಗಣೇಶೋತ್ಸವ ಸಮಿತಿಗೆ ಶಾಸಕ ಬಸವರಾಜು ವಿ. ಶಿವಗಂಗಾ ಅಧ್ಯಕ್ಷರಾಗಿದ್ದಾರೆ. ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಗೌರವ ಅಧ್ಯಕ್ಷರು. ಇವರ ಮಾರ್ಗದರ್ಶನದಲ್ಲಿ ಶೀಘ್ರದಲ್ಲಿಯೇ ಮತ್ತೊಂದು ಸಭೆ ನಡೆಸಿ, ಗಣಪತಿ ಪ್ರತಿಷ್ಠಾಪನೆಗೆ ಚಾಲನೆ ನೀಡಲಾಗುವುದು. ಗಣೇಶೋತ್ಸವದಲ್ಲಿ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗುವುದು ಎಂದರು.
ಸಮಿತಿ ಖಜಾಂಚಿ ಸಿ.ನಾಗರಾಜ್ ಮಾತನಾಡಿ 2016ರಿಂದ ಹಿಂದೂ ಏಕತಾ ಗಣಪತಿ ಸೇವಾ ಸಮಿತಿಯನ್ನು ರಚಿಸಿಕೊಂಡು ಗಣಪತಿ ಉತ್ಸವ ನಡೆಸಲಾಗುತ್ತಿದೆ. ಎಲ್ಲ ಸಮಾಜದವರು ಸಹಾ ಒಂದೊಂದು ದಿನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾ ಏಕತೆ ಮೆರೆದಿದ್ದಾರೆ . ಈ ಗಣಪತಿ ಉತ್ಸವವು ಅದ್ಧೂರಿಯಾಗಿ ನಡೆಯಲು ಸರ್ವರ ಸಹಕಾರ ಇರಬೇಕು ಎಂದರು.ಸಭೆಯಲ್ಲಿ ಪಟ್ಟಣದ ವಿವಿಧ ಸಮಾಜಗಳ ಪ್ರಮುಖರಾದ ರಾಜಶೇಖರಯ್ಯ, ರಾಮಚಂದ್ರ ಪ್ರಜಾಪತ್, ಬುಳ್ಳಿ ನಾಗರಾಜ್, ಕಾಫಿ ಪುಡಿ ಶಿವಾಜಿ ರಾವ್, ನಟರಾಜ ರಾಯ್ಕರ್, ಜಿತೇಂದ್ರ ಕಂಚುಗಾರ್, ಕೆಂಚಪ್ಪ, ನಿಂಗಪ್ಪ, ರವಿಕುಮಾರ್ ಸೇರಿದಂತೆ ವಿವಿಧ ಹಿಂದೂ ಸಮಾಜಗಳ ಪ್ರಮುಖರು ಹಾಜರಿದ್ದರು.