ಧಾರವಾಡ:ಪ್ರಸ್ತುತ ದಿನಗಳಲ್ಲಿ ಲವ್ ಜಿಹಾದ್ ಹಾಗೂ ಅಪಹರಣದ ಮೂಲಕ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಜಾಲ ಹೆಚ್ಚಾಗಿದ್ದು, ಆದ್ದರಿಂದ ಹಿಂದೂ ಯುವತಿಯರು ಇಂತಹ ವ್ಯಕ್ತಿಗಳ ಜಾಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸಬೇಕು ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಸುಭಾಷ ರಸ್ತೆಯಲ್ಲಿ ಮಂಗಳವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಹಿಂದೂ ಯುವತಿಯರ ಮೇಲೆ ನಡೆಯುತ್ತಿರುವ ಲವ್ ಜಿಹಾದ್ ಖಂಡಿಸಿ ಆಯೋಜಿಸಿದ್ದ ಜನಾಕ್ರೋಶ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.ಇಂದಿನ ದಿನಗಳಲ್ಲಿ ಹಿಂದೂ ಸಮಾಜದ ಹೆಣ್ಣುಮಕ್ಕಳನ್ನು ಮುಸ್ಲಿಂ ಸಮುದಾಯದ ಯುವಕರು ಬೆನ್ನಿಗೆ ಬಿದ್ದು, ಮತಾಂತರ ಮಾಡುತ್ತಿದ್ದಾರೆ. ಏನೂ ಅರಿಯದ ಅಪ್ರಾಪ್ತ ಮಕ್ಕಳ ಇಂತಹ ಕೃತ್ಯಗಳಿಗೆ ಬಲಿಯಾಗಿದ್ದಾರೆ. ಆದ್ದರಿಂದ ಪೊಲೀಸರು ಇಂತಹ ಘಟನೆಗಳನ್ನು ಮರುಕಳಿಸದಂತೆ ಕಠಿಣ ಕ್ರಮಕೈಗೊಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಿಂದೂ ಸಂಘಟನೆಗಳು ದೊಡ್ಡ ಹೋರಾಟ ನಡೆಸಲಿವೆ ಎಂದು ಎಚ್ಚರಿಸಿದರು.

ಸಮೀರ್ ಮುಲ್ಲಾ ಎಂಬಾತ ಕೇವಲ ಒಬ್ಬ ಯುವತಿಯನ್ನು ಮಾತ್ರವಲ್ಲದೆ, ಹಲವು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಅವನ ಮೊಬೈಲ್‌ನಲ್ಲಿ ಬೇರೆ ಬೇರೆ ಯುವತಿಯರೊಂದಿಗೆ ಇರುವ ಫೋಟೋ ಹಾಗೂ ವೀಡಿಯೋ ಸಿಕ್ಕಿರುವ ದಾಖಲೆಯನ್ನು ಹಿಂದೂ ಕಾರ್ಯಕರ್ತರು ನೀಡಿದ್ದಾರೆ. ಆದರೆ, ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿರುವುದು ಖಂಡನೀಯ ಎಂದರು.

ನೇಹಾ ಹಿರೇಮಠ ಅವರನ್ನು ಫಯಾಜ್ ಪ್ರೀತಿಸುವಂತೆ ಪೀಡಿಸಿ ಕೊನೆಗೆ ಹಾಡಹಗಲೇ ಅವಳನ್ನು ಕೊಲೆ ಮಾಡಿದ್ದಾನೆ. ಆದರೆ, ಪೊಲೀಸರಿಗೆ ಇನ್ನೂ ಸರಿಯಾಗಿ ಸಾಕ್ಷಿ ಸಿಗುತ್ತಿಲ್ಲ. ಆದರೆ, ಅವನು ಜೈಲಿನಲ್ಲಿ ಅರಾಮಾಗಿ ದಿನ ಕಳೆಯುತ್ತಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಜರಂಗದಳದ ಉತ್ತರ ಕರ್ನಾಟಕ ರಾಜ್ಯ ಸಹ ಸಂಚಾಲಕ ಶಿವಾನಂದ ಸತ್ತಿಗೇರಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರೀತಿ ನೆಪದಲ್ಲಿ ಹಿಂದೂ ಯುವತಿಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಜೀಮ್‌ನಲ್ಲಿ ಮಾಲೀಕರು ಪ್ರತ್ಯೇಕ ಮಹಿಳಾ ತರಬೇತಿದಾರರನ್ನು ನೇಮಿಸಬೇಕು. ಒಂದು ವೇಳೆ ಪುರುಷರು ತರಬೇತಿ ನೀಡಿದರೆ ಬಜರಂಗದಳದಿಂದ ದಾಳಿ ಮಾಡಲಾಗುವುದು ಎಂದು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ಡಾ. ಎಸ್.ಆರ್. ರಾಮನಗೌಡರ, ಮಹೇಶ ಪಾಟೀಲ, ದೀಪಕ ಆಕಳವಾಡಿ ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಇತರರು ಇದ್ದರು.