ಹಿಂದೂ ಅಖಂಡತೆಯನ್ನು ಒಡೆಯಲು ಅಸಾಧ್ಯ: ಶ್ರೀಕಾಂತ್‌ ಶೆಟ್ಟಿ

| Published : Jul 03 2024, 12:22 AM IST

ಹಿಂದೂ ಅಖಂಡತೆಯನ್ನು ಒಡೆಯಲು ಅಸಾಧ್ಯ: ಶ್ರೀಕಾಂತ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹನುಮಂತನ ಆದರ್ಶದ ಬಜರಂಗದಳ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಮಾಜಕ್ಕೆ ರಕ್ಷಣೆ ನೀಡುವವರೇ ಹೊರತು ತೊಂದರೆ ಮಾಡುವವರಲ್ಲ. ಈ ಕಾರ್ಯಕ್ರಮಕ್ಕೆ ಇಷ್ಟೊಂದು ಪೊಲೀಸ್ ಬಂದೋಬಸ್ತ್ ಬೇಕಿಲ್ಲ. ಆದರೆ ಹಿಂದೂ ಸಂಘಟನೆಗಳನ್ನು ಕೆಣಕಿದರೆ ಸುಮ್ಮನಿರಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ವಿಶ್ವ ಹಿಂದೂ ಪರಿಷತ್, ಬಜರಂಗ ದಳ ವತಿಯಿಂದ ಶ್ರೀರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆ ದೊಡ್ಡಬಳ್ಳಾಪುರ ನಗರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣದ ಬಳಿಯಿಂದ ಹೊರಟ ಶೋಭಾ ಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಾವಿರಾರು ಸಂಖ್ಯೆಯ ರಾಮಭಕ್ತರ ಹರ್ಷೋದ್ಘಾರಗಳ ನಡುವೆ ಸೀತಾ-ರಾಮ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ಇದರೊಂದಿಗೆ ಹನುಮ, ಶಿವಮೂರ್ತಿ, ಲಿಂಗ, ಹನುಮಮೂರ್ತಿಗಳ ಸ್ಥಬ್ದ ಚಿತ್ರಗಳು, ಭಾರತ ಮಾತೆ ಹಾಗೂ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆಯಲ್ಲಿ ಸಾಗಿದವು. ಮಕ್ಕಳ ವೇಷಭೂಷಣಗಳು ಗಮನ ಸೆಳೆದವು. ಶೋಭಾಯಾತ್ರೆ ಹೋಗುವ ಮಾರ್ಗ ಕೇಸರಿಮಯವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಹಿಂದೂ ವಿರೋಧಿಗಳಿಗೆ ಎಚ್ಚರಿಕೆ:

ಕೊಂಗಾಡಿಯಪ್ಪ ಬಸ್‌ನಿಲ್ದಾಣದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕಾರ್ಕಳದ ಶ್ರೀಕಾಂತ್‌ಶೆಟ್ಟಿ, ಭಾರತ ಹಿಂದೂ ರಾಷ್ಟ್ರವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ಖಂಡನೀಯ. ಇದು ಇನ್ನಾವ ರಾಷ್ಟ್ರ ಎಂದು ಅವರನ್ನು ಪ್ರಶ್ನಿಸಬೇಕಿದೆ. ಪಾಕಿಸ್ತಾನ್ ಜಿಂದಾಬಾದ್ ಎನ್ನುವವರಿಗೆ ಮನ್ನಣೆ ನೀಡುವ, ಹಿಂದೂ ವಿರೋಧಿ ನೀತಿ ಅನುಸರಿಸುವ ಮುಖಂಡರಿಗೆ ಹಿಂದೂ ಸಂಘಟನಾ ಶಕ್ತಿ ತೋರಿಸಬೇಕಿದೆ. ಇಂದು ದೊಡ್ಡಬಳ್ಳಾಪುರದ ಈ ಬೃಹತ್ ಶೋಭಾಯಾತ್ರೆ ಹಿಂದೂ ಸಂಘಟನೆಯ ಶಕ್ತಿ ಹಾಗೂ ಹಿಂದೂ ರಾಷ್ಟ್ರದ ಬಗ್ಗೆ ಸಂದೇಶ ರವಾನಿಸಿದೆ ಎಂದರು.

ದೇಶ ಇಸ್ಲಾಮೀಕರಣವಾಗಲು ಬಿಡಲ್ಲ:

ಹನುಮಂತನ ಆದರ್ಶದ ಬಜರಂಗದಳ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಮಾಜಕ್ಕೆ ರಕ್ಷಣೆ ನೀಡುವವರೇ ಹೊರತು ತೊಂದರೆ ಮಾಡುವವರಲ್ಲ. ಈ ಕಾರ್ಯಕ್ರಮಕ್ಕೆ ಇಷ್ಟೊಂದು ಪೊಲೀಸ್ ಬಂದೋಬಸ್ತ್ ಬೇಕಿಲ್ಲ. ಆದರೆ ಹಿಂದೂ ಸಂಘಟನೆಗಳನ್ನು ಕೆಣಕಿದರೆ ಸುಮ್ಮನಿರಲು ಸಾಧ್ಯವಿಲ್ಲ. ಸಿಡಿದೆದ್ದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಶವನ್ನು ಇಸ್ಲಾಮೀಕರಣವಾಗಲು ಬಿಡುವುದಿಲ್ಲ. ಹಾಗೆಂದು ನಾವು ಮುಸ್ಲಿಂ ವಿರೋಧಿಗಳಲ್ಲ. ಸಂತ ಶಿಶುನಾಳ ಷರೀಫ ಅವರ ರೂಪದಲ್ಲಿ ಬಂದರೆ ಸ್ವಾಗತ. ಔರಂಗಜೇಬ್ ರೂಪದಲ್ಲಿ ಬಂದರೆ ನಮ್ಮ ಶಕ್ತಿ ತೋರಿಸಬೇಕಾಗುತ್ತದೆ. ಈ ದಿಸೆಯಲ್ಲಿ ಹಿಂದೂಗಳು ಸಂಘಟಿತರಾಗಬೇಕಿದೆ ಎಂದರು.

ಬಜರಂಗದಳ ಕೋಲಾರ ವಿಭಾಗಿಯ ಸಂಯೋಜಕ ನರೇಶ್‌ರೆಡ್ಡಿ ಸೇರಿದಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳ ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು.