ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಅನಧಿಕೃತ ಕಸಾಯಿಖಾನೆಗಳಲ್ಲಿ ಕಾನೂನು ಬಾಹಿರವಾಗಿ ಗೋಹತ್ಯೆ ನಡೆಯುತ್ತಿದ್ದು, ಇದನ್ನು ತಡೆಗಟ್ಟಬೇಕು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಮುಖಂಡ ವೆಂಕಣ್ಣ ಕಳ್ಳಿಗುಡ್ಡ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನಧಿಕೃತವಾಗಿ ಗೋವುಗಳನ್ನು ಕತ್ತರಿಸಿ, ಅವುಗಳ ತ್ಯಾಜ್ಯವನ್ನು ನದಿಗೆ ಎಸೆಯುವ ಮೂಲಕ ಪರಿಸರ ಮಾಲಿನ್ಯ ಮಾಡಲಾಗುತ್ತಿದೆ. ಈ ಕುರಿತು ಪೊಲೀಸ್ ಇಲಾಖೆಗೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಹಲವು ಬಾರಿ ಮಾಹಿತಿ ನೀಡಲಾಗಿದ್ದರೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಗೋಹತ್ಯೆ ನಡೆಯುತ್ತಿರುವ ಸ್ಥಳಗಳ ಛಾಯಾಚಿತ್ರಗಳು ಹಾಗೂ ಕಳೆದ ವರ್ಷ ಮುಧೋಳದಲ್ಲಿ ನಡೆದ ಇಂತಹದೇ ಘಟನೆಯ ಸಾಕ್ಷ್ಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು.

28ರಂದು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ತಡೆಯಲು ಪೊಲೀಸ್ ಇಲಾಖೆ ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಬೇಕು. ಒಂದು ವೇಳೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಹಿಂದೂ ಸಂಘಟನೆಗಳೇ ಕಾನೂನುಬಾಹಿರ ಗೋ ಸಾಗಾಟ ಮತ್ತು ಹತ್ಯೆ ತಡೆಯಲು ಮುಂದಾಗಬೇಕಾಗುತ್ತದೆ. ಈ ವೇಳೆ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತ ಮತ್ತು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆ ಎಂದು ಹೇಳಿದರು.


ಜಿಲ್ಲೆಯಲ್ಲಿ ಗೋ ಹತ್ಯೆ ಕಾಯ್ದೆ-2023 ಕಟ್ಟುನಿಟ್ಟು ಪಾಲನೆಯಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳು ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ. ಬಕ್ರೀದ್ ಹಬ್ಬದ ಹಿನ್ನೆಲೆ ಜಿಲ್ಲೆಯಲ್ಲಿ ದನದ ಸಂತೆಗಳಲ್ಲಿ ಗೋವು ಮಾರಾಟ ನಡೆಯುತ್ತದೆ. ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಈ ಕಾರಣಕ್ಕೆ ಜಿಲ್ಲಾದ್ಯಂತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಾಗೂ ಪ್ರಾಣಿ ಸಂರಕ್ಷಣಾ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಹಿರೇಮಠ, ಮಲ್ಲು ಕೋಟಿ, ಅರುಣ ಕಟ್ಟಿಮನಿ, ನಾಗರಾಜ ಅಂಬಿಗೇರ, ಕೃಷ್ಣಾ ಹಸರೆಡ್ಡಿ ಮತ್ತಿತರರು ಇದ್ದರು.