ಸಾರಾಂಶ
ಹಿರೇಕೆರೂರು: ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಎಂಬ ಹಿಂದೂ ಯುವತಿಯನ್ನು ಲವ್ ಜಿಹಾದ ಬಲೆಗೆ ಸಿಲುಕಿಸಿ ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಹಾಗೂ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ರಾಜ್ಯದಲ್ಲಿಯೇ ಅತಿ ಹೆಚ್ಚು ಲವ್ ಜಿಹಾದ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ಪತ್ತೆಯಾಗುತ್ತಿದ್ದು, ಇದಕ್ಕೆ ಉದಾಹರಣೆ ಮಾಸೂರಿನ ಸ್ವಾತಿ ಪ್ರಕರಣ. ಈ ಯುವತಿಯನ್ನು ಕೊಲೆಗೈದು ಪತ್ತೇಪುರ ಗ್ರಾಮದ ಬಳಿ ತುಂಗಾಭದ್ರಾ ನದಿಯಲ್ಲಿ ಬಿಸಾಡುವ ಮೂಲಕ ಅಮಾನವೀಯ ಕ್ರೌರ್ಯ ಎಸಗಿದ ಅರೋಪಿಗಳಾದ ನಯಾಜ್ ಬೆಣ್ಣಿಗೇರಿ, ದುರ್ಗಾಚಾರಿ ಬಡಿಗೇರ, ವಿನಾಯಕ ಪೂಜಾರ ಅವರಿಗೆ ಕಠಿಣ ಶಿಕ್ಷೆಯಾಗಬೇಕು.
ಅಲ್ಲದೇ ಈ ಕೊಲೆಯ ಸುತ್ತ ಅನುಮಾನ ಕೂಡಿರುವುದರಿಂದ ಇದರಲ್ಲಿ ಇನ್ನು ಅನೇಕ ಜನರು ಪಾಲ್ಗೊಂಡ ಬಗ್ಗೆ ಶಂಕೆ ಹುಟ್ಟಿದೆ. ಹಾಗಾಗಿ ಇದರ ಉನ್ನತವಾದ ತನಿಖೆಗಾಗಿ ಎನ್ಐಎ ವಹಿಸಿ ಇನ್ನು ಮುಂದೆ ರಾಜ್ಯದಲ್ಲಿ ಲವ್ ಜಿಹಾದ್ ಹೆಸರಲ್ಲಿ ಹಿಂದೂ ಯುವತಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಕೊಲೆಗಳಂಥ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನೆ ನಡೆಸಿ ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆ ವೇಳೆ ಮಾಜಿ ಸಚಿವ ಬಿ.ಸಿ. ಪಾಟೀಲ, ತಾಲೂಕು ಬಿಜೆಪಿ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಮುಖಂಡರಾದ ರವಿಶಂಕರ ಬಾಳಿಕಾಯಿ, ಶ್ರೀಕಾಂತ ಹೊರಕೇರಿ, ಹರೀಶ ಹಾನಗಲ್ಲ, ಗಣೇಶ ಭಜಂತ್ರಿ, ಜಗದೀಶ ದೊಡ್ಡಗೌಡ್ರ, ವೀರೇಶ ಮತ್ತಿಹಳ್ಳಿ ಹಾಗೂ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಇದ್ದರು.ಆರೋಪಿಗಳಿಗೆ ಶೀಘ್ರ ಮರಣದಂಡನೆ ವಿಧಿಸಿ
ಹಾವೇರಿ: ಇತ್ತೀಚೆಗೆ ಹತ್ಯೆಗೊಳಗಾದ ರಟ್ಟಿಹಳ್ಳಿ ತಾಲೂಕಿನ ಮಾಸೂರಿನ ಯುವತಿ ಸ್ವಾತಿ ಬ್ಯಾಡಗಿ ಆತ್ಮಕ್ಕೆ ಶಾಂತಿ ಕೋರಿ ಹಾಗೂ ಆರೋಪಿಗಳಿಗೆ ಶೀಘ್ರವಾಗಿ ಮರಣದಂಡನೆ ವಿಧಿಸುವಂತೆ ಆಗ್ರಹಿಸಿ ನಗರದ ಸುಭಾಷ್ ವೃತ್ತದಲ್ಲಿ ಹಾವೇರಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಕ ಮಂಡಳಿ ವತಿಯಿಂದ ಮೇಣದಬತ್ತಿ ಪ್ರಜ್ವಲಿಸಲಾಯಿತು.ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಯುವತಿ ಸ್ವಾತಿ ಬ್ಯಾಡಗಿ ಹತ್ಯೆಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪೊಲೀಸರು ಶವ ದೊರೆತ ದಿನವೇ ಶವಸಂಸ್ಕಾರ ಮಾಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಘಟನೆ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಒಂದು ವೇಳೆ ಅದೇ ದಿನ ಶವಸಂಸ್ಕಾರ ಮಾಡಲು ಯಾವುದಾದರು ಅನ್ಯವ್ಯಕ್ತಿ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರೆ ಅಂಥವರನ್ನು ಸಹ ಆರೋಪಿಗಳೆಂದು ಪರಿಗಣಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.ನೇತಾಜಿ ಸುಭಾಷ್‌ಚಂದ್ರ ಬೋಸ್ ಯುವಕ ಮಂಡಳಿಯ ಗೌರವಾಧ್ಯಕ್ಷ ಸಂತೋಷ್ ಆಲದಕಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರೇಮದ ಹೆಸರಿನಲ್ಲಿ ಕೊಲೆಗಳು ಯಥೇಚ್ಛವಾಗಿ ನಡೆಯುತ್ತಿವೆ. ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಪ್ರೇಮಪಾಶಕ್ಕೆ ಸಿಲುಕಿಸಿ ನಂತರ ಅವರನ್ನು ಮದುವೆಯಾಗದೆ ಹತ್ಯೆ ಮಾಡುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಮಾಸೂರಿನ ಯುವತಿ ನಯಾಜ್ ಎಂಬ ಯುವಕನ ಸುಳ್ಳು ಪ್ರೇಮಕ್ಕೆ ಬಲಿಯಾಗಿದ್ದಳು ಎಂದು ಆರೋಪಿಸಿದರು.ನೇತಾಜಿ ಸುಭಾಸ್‌ಚಂದ್ರ ಬೋಸ್ ಯುವಕ ಮಂಡಳಿಯ ಅಧ್ಯಕ್ಷ ನಿಖಿಲ್ ಡೊಗ್ಗಳ್ಳಿ, ಪ್ರಭು ಹಿಟ್ನಳ್ಳಿ, ವಿಜಯಕುಮಾರ ಚಿನ್ನಿಕಟ್ಟಿ, ರಮೇಶ ಪಾಲಕರ, ಯುವ ಬ್ರಿಗೇಡಿನ ಸಂಚಾಲಕ ಅಭಿಷೇಕ ಉಪ್ಪಿನ್, ಅಭಿಷೇಕ್ ಬ್ಯಾಡಗಿ, ನಿಖಿಲ್ ಹಿರೇಮಠ, ಲಿಂಗರಾಜ ಸಾತೇನಹಳ್ಳಿ, ಪ್ರಶಾಂತ್ ಗಾಣಿಗೇರ, ಮನ್ವಿತ್ ಬೆಟಗೇರಿ, ಮಂಜು ಬಾವಿಮನೆ, ಸಚಿನ್, ಸಂದೀಪ ಮೋಟೆಬೆನ್ನೂರ, ವಿಶಾಲ ಕಲಾಲ, ಲಿಂಗರಾಜ ಹಾದಿಮನಿ ಇತರರಿದ್ದರು.