ಹಿಂದೂ ಮಹಾಗಣಪತಿ ಉತ್ಸವ: ನಾಳೆ ಹಂದರಗಂಬ ಪೂಜೆ

| Published : Jul 30 2025, 12:45 AM IST

ಹಿಂದೂ ಮಹಾಗಣಪತಿ ಉತ್ಸವ: ನಾಳೆ ಹಂದರಗಂಬ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಮಹಾಗಣಪತಿ ಆಶ್ರಯದಲ್ಲಿ 6ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ನಿಮಿತ್ತ ಪೆಂಡಾಲ್‌ ನಿರ್ಮಿಸುವ ಹಂದರಗಂಬ ಹಾಗೂ ಗೋ ಮಾತಾ ಪೂಜೆಯನ್ನು ಜು.31ರಂದು ಬೆಳಗ್ಗೆ ನಡೆಸಲಾಗುವುದು ಎಂದು ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್ ಚಂದಾಪುರ್ ಹೇಳಿದ್ದಾರೆ.

- ಹರಿಹರದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್ ಚಂದಾಪುರ್ ಮಾಹಿತಿ । ಆ.27ರಂದು ಪ್ರತಿಷ್ಟಾಪನೆ

- - -

ಕನ್ನಡಪ್ರಭ ವಾರ್ತೆ ಹರಿಹರ ಹಿಂದೂ ಮಹಾಗಣಪತಿ ಆಶ್ರಯದಲ್ಲಿ 6ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ನಿಮಿತ್ತ ಪೆಂಡಾಲ್‌ ನಿರ್ಮಿಸುವ ಹಂದರಗಂಬ ಹಾಗೂ ಗೋ ಮಾತಾ ಪೂಜೆಯನ್ನು ಜು.31ರಂದು ಬೆಳಗ್ಗೆ ನಡೆಸಲಾಗುವುದು ಎಂದು ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್ ಚಂದಾಪುರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ 6ನೇ ವರ್ಷದ ಗಣೇಶೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಅಂದು ಬೆಳಗ್ಗೆ 11.38 ಗಂಟೆಗೆ ಸಲ್ಲುವ ಚಿತ್ತ ನಕ್ಷತ್ರ ಸಪ್ತಮಿ ತಿಥಿಯಂದು ಹಂದರಗಂಬಕ್ಕೆ ಪೂಜೆ ಸಲ್ಲಿಸಲಾಗುವುದು. ಆ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಗುವುದು ಎಂದರು.

6ನೇ ವರ್ಷದ ಗಣೇಶೋತ್ಸವ:

ಹಿಂದೂ ಗಣಪತಿ ಉತ್ಸವದ ಪ್ರಚಾರ ಸಮಿತಿ ಅಧ್ಯಕ್ಷ ಶೇಖರ ಗೌಡ ಮಾತನಾಡಿ, 5 ವರ್ಷಗಳಿಂದ ಹಿಂದೂ ಮಹಾಗಣಪತಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಬಾರಿಯ 6ನೇ ವರ್ಷದ ಉತ್ಸವವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ ಎಂದರು.

ಹಂದರಗಂಬ ಪೂಜೆಗೆ ತಾಲೂಕಿನ ವಿವಿಧ ಮಠಾಧೀಶರು, ಪಕ್ಷಗಳ ಮುಖಂಡರು, ಸರ್ವ ಸಮಾಜಗಳ ಪದಾಧಿಕಾರಿಗಳು, ನಗರದ ಹಿರಿಯರನ್ನು ಆಹ್ವಾನಿಸಲಾಗುತ್ತಿದೆ. ಸರ್ವ ಹಿಂದೂ ಸಮಾಜಗಳ ಜನತೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

ಗಣೇಶ ಪ್ರತಿಷ್ಠಾಪನೆ:

ಆ.27ರಂದು ಬೆಳಗ್ಗೆ 11.53ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆ ನಡೆಯಲಿದೆ. ಬೆಳಗ್ಗೆ 8ರಿಂದ ನಗರದ ಶಕ್ತಿ ದೇವತೆಗಳ ಸಮ್ಮುಖ ಶ್ರೀ ನವಗ್ರಹ ಹೋಮ, ಶ್ರೀ ಮಹಾಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ಮನ್ಯು ಸೂಕ್ತ ಹೋಮ, ದೇವಿಸೂಕ್ತ ಹೋಮ ನಡೆಯಲಿದೆ. ಭಕ್ತರಿಗೆ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಲಂಕಾರ ಸಮಿತಿ ಅಧ್ಯಕ್ಷ ರಾಜು ರೋಖಡೆ, ಪ್ರಸಾದ ಸಮಿತಿ ಅಧ್ಯಕ್ಷ ಪ್ರವೀಣ್ ಪವಾರ್, ಹಿಂದೂ ಮಹಾಗಣಪತಿ ಟ್ರಸ್ಟ್ ಅಧ್ಯಕ್ಷ ಬಸವನಗೌಡ, ಪ್ರಧಾನ ಕಾರ್ಯದರ್ಶಿ ದಿನೇಶ್ ಎಚ್., ಉಪಾಧ್ಯಕ್ಷ ಸ್ವಾತಿ ಹನುಮಂತಪ್ಪ, ರಾಘವೇಂದ್ರ ಉಪಾಧ್ಯಾಯ, ಚಂದ್ರಕಾಂತ ಗೌಡ, ರಟ್ಟಿಹಳ್ಳಿ ಮಂಜುನಾಥ, ಸಂತೋಷ ಗುಡಿಮನಿ, ರವಿಶಂಕರ್ ಗದ್ಗಿಮಠ, ಕಾರ್ತಿಕ ಟಿಕಾರೆ, ಎಮ್. ಭರತ್ ಶೆಟ್ಟಿ, ಶಿವಕುಮಾರ್ ಬಿ.ಜಿ., ರಾಜು ಯು, ಶಿವು, ಉಪಸ್ಥಿತರಿದ್ದರು.

- - -

(ಬಾಕ್ಸ್‌) * ಸೆ.14ರಂದು ಅದ್ಧೂರಿ ಶೋಭಾಯಾತ್ರೆ: ಶೇಖರಗೌಡ

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದೆ. ಆ ಸಾಲಿನಲ್ಲಿ ಹರಿಹರದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಪ್ರಸಿದ್ಧಿ ಪಡೆದಿದ್ದು, ಸೆ.14ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಶ್ರೀ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ಜಿಲ್ಲೆಯ ವಿವಿಧ ಶ್ರೀಗಳು, ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಮಾಜಗಳ ಜನತೆ ಹಾಗೂ ಸಂಘ ಸಂಸ್ಥೆಗಳ ಮುಖಂಡರ ಸಮ್ಮುಖ ಚಾಲನೆ ನೀಡಲಾಗುವುದು. ಅನಂತರ ನಗರದ ರಾಜ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

- - -

-29ಎಚ್‌ಆರ್‌ಆರ್‌01:

ಹರಿಹರ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಗಣೇಶೋತ್ಸವ ಕುರಿತು ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಚಂದಾಪುರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.