ಹರಿಹರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಸಂಪನ್ನ

| Published : Sep 16 2025, 12:03 AM IST

ಹರಿಹರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ನಗರದಲ್ಲಿ ಭಾನುವಾರ ಸಂಜೆ ಹಿಂದೂ ಮಹಾಗಣಪತಿಯ ೬ನೇ ವರ್ಷದ ಗಣೇಶನ ವಿಸರ್ಜನಾ ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್‌ ಟ್ರ್ಯಾಕ್ಟರ್ ಚಾಲನೆ ಮೂಲಕ ಚಾಲನೆ ನೀಡಿದರು. ಡಿಜೆ ಸೌಂಡ್‌ ನಿಷೇಧ ನಡುವೆಯೂ ಶೋಭಾಯಾತ್ರೆಯಲ್ಲಿ ಯುವಜನರು ಕಲಾತಂಡಗಳ ತಾಳಕ್ಕೆ ತಕ್ಕಂತೆ ಮೈರೆತು ಹೆಜ್ಜೆ ಹಾಕಿ, ಸಂಭ್ರಮಿಸಿದ್ದಾರೆ.

- ಕಲಾತಂಡಗಳ ತಾಳಕ್ಕೆ ತಕ್ಕಂತೆ ಕುಣಿದ ಯುವಜನತೆ । ಬಿಗಿ ಬಂದೋಬಸ್ತ್‌

- - -

ಕನ್ನಡಪ್ರಭ ವಾರ್ತೆ ಹರಿಹರ

ಹರಿಹರ ನಗರದಲ್ಲಿ ಭಾನುವಾರ ಸಂಜೆ ಹಿಂದೂ ಮಹಾಗಣಪತಿಯ ೬ನೇ ವರ್ಷದ ಗಣೇಶನ ವಿಸರ್ಜನಾ ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್‌ ಟ್ರ್ಯಾಕ್ಟರ್ ಚಾಲನೆ ಮೂಲಕ ಚಾಲನೆ ನೀಡಿದರು. ಡಿಜೆ ಸೌಂಡ್‌ ನಿಷೇಧ ನಡುವೆಯೂ ಶೋಭಾಯಾತ್ರೆಯಲ್ಲಿ ಯುವಜನರು ಕಲಾತಂಡಗಳ ತಾಳಕ್ಕೆ ತಕ್ಕಂತೆ ಮೈರೆತು ಹೆಜ್ಜೆ ಹಾಕಿ, ಸಂಭ್ರಮಿಸಿದರು.

ಹರಿಹರ ತಾಲೂಕು ಸೇರಿದಂತೆ ಪಕ್ಕದ ದಾವಣಗೆರೆ, ಹೊನ್ನಾಳಿ, ರಾಣೇಬೆನ್ನೂರು, ಹರಪನಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿಯ ಜಾಂಜ್ ಮೇಳ, ಬೆಂಗಳೂರಿನ ಮದ್ರಾಸ್ ತಮಟೆ, ಉಡುಪಿಯ ಚಂಡೆ, ಹರಿಹರದ ಯಕ್ಷಗಾನ ವೇಷ, ಡ್ರಮ್ ಸೆಟ್, ಮಹಿಳೆಯರ ಡೊಳ್ಳು, ಸಮಾಳ, ಡೊಳ್ಳುಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗಿಯಾಗಿ, ಜನಮನ ಸೂರೆಗೊಂಡವು. ಸಾರ್ವಜನಿಕರು ಅನ್ನ ಸಂತರ್ಪಣೆ, ತಂಪು ಪಾನೀಯ, ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಿ, ಭಕ್ತಿ ಮೆರೆದರು.

ಪ್ರಮುಖ ರಸ್ತೆಗಳು ಜನರಿಂದ ತುಂಬಿದ್ದವು. ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು. ಮಧ್ಯಾಹ್ನ ೩.೩೦ಕ್ಕೆ ಆರಂಭವಾದ ಮೆರವಣಿಗೆ ವಿವಿಧೆಡೆ ಸಾಗಿತು. ಹಳೆ ಪಿ.ಬಿ. ರಸ್ತೆಯಲ್ಲಿ ಸಾಗಿ ನಗರಸಭೆಯಿಂದ ಗಣಪತಿ ವಿಸರ್ಜನೆಗಾಗಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ನೀರಿನ ಹೊಂಡದಲ್ಲಿ ರಾತ್ರಿ ೧೦ ಗಂಟೆಗೆ ಗಣಪತಿ ವಿಸರ್ಜನೆ ಸಂಪನ್ನಗೊಂಡಿತು.

ನಗರವೆಲ್ಲ ಕೇಸರಿಮಯ:

ರಸ್ತೆಗಳು ಕೇಸರಿ ಬಂಟಿಂಗ್ಸ್ ಹಾಗೂ ಬಾವುಟಗಳಿಂದ ಸಿಂಗಾರಗೊಂಡಿದ್ದವು. ಬಹುತೇಕರ ಕೊರಳಲ್ಲಿ ಕೇಸರಿ ಶಾಲು ಮತ್ತು ಪೇಟಗಳು ರಾರಾಜಿಸುತ್ತಿದ್ದವು. ಮುಖ್ಯರಸ್ತೆ, ಗಾಂಧಿ ವೃತ್ತದ ಬಳಿ ಅನ್ನ ಸಂತರ್ಪಣೆ, ವುಡ್ ಲ್ಯಾಂಡ್ ಹೋಟೆಲ್‌ ರಸ್ತೆ, ಹಳೇ ಪಿ.ಬಿ. ರಸ್ತೆಯಲ್ಲಿ ಪ್ರಸಾದ ಹಾಗೂ ತುಂಗಭದ್ರಾ ಆಟೋ ಸ್ಟ್ಯಾಂಡ್ ಬಳಿ ಪ್ರಸಾದ, ಮಜ್ಜಿಗೆ ಹಾಗೂ ಪಾನೀಯ ವ್ಯವಸ್ಥೆ ಮಾಡಲಾಯಿತು.

ಬಿಗಿ ಪೊಲೀಸ್ ಬಂದೊಬಸ್ತ್:

ಶಾಂತಿಯುತ ಮೆರವಣಿಗೆ ನಡೆಯಲು ಪೂರಕವಾಗಿ ಪೊಲೀಸ್‌ ಇಲಾಖೆಯಿಂದ ಡಿವೈಎಸ್‌ಪಿ-೧, ಸಿಪಿಐ-೬, ಪಿಎಸೈ-೧೧, ಎಎಸ್‌ಐ,ಮಹಿಳಾ ಪಿಸಿ- ಒಟ್ಟು ೧೪೦, ಗೃಹ ರಕ್ಷಕದಳದ ಸಿಬ್ಬಂದಿ-೧೨೫, ಕೆಎಸ್‌ಆರ್‌ಪಿ-೧ ತುಕಡಿ, ಡಿಎಆರ್-೧ ತುಕಡಿಗಳನ್ನು ನಿಯೋಜಿಸಲಾಗಿತ್ತು. ೧೫ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಮತ್ತು ೪ಕ್ಕೂ ಹೆಚ್ಚು ವೀಡಿಯೋ ಕ್ಯಾಮರಾಗಳ ಮೂಲಕ ಚಿತ್ರೀಕರಣ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಗಣೇಶ ಮೂರ್ತಿಗಳ ಮಹಾಸಂಗಮ:

ಶೋಭಾಯಾತ್ರೆ ಸಾಗುವ ಮಾರ್ಗ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮುದ್ರ ಮಂಥನ ಸ್ವರೂಪದ ಕಲಾಕೃತಿ (ಟ್ಯಾಬ್ಲೋ) ಸಾರ್ವಜನಿಕರ ಆಕರ್ಷಣಿಯ ಕೇಂದ್ರವಾಗಿತ್ತು. ಹರಿಹರ ನಗರದಲ್ಲಿ ಮೊದಲ ಬಾರಿಗೆ ಹಿಂದೂ ಮಹಾಗಣಪತಿ ಮೆರವಣಿಗೆ ಜೊತೆಗೆ ಭರಂಪುರ ಯುವಕ ಸಂಘದ ಹರಿಹರ ಕಾ ರಾಜಾ, ದೊಡ್ಡಿ ಬೀದಿಯ ಗರಡಿ ಸರ್ಕಾರ್, ಜೆ.ಸಿ. ಬಡಾವಣೆಯ ಯುವ ಶಕ್ತಿ ಬ್ರಿಗೇಡ್ ಸಮಿತಿಯ ಗಣೇಶ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್.ರಾಮಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡರಾದ ಜಿ.ಎಸ್. ಅನಿತ್‌ಕುಮಾರ್, ಚಂದ್ರಶೇಖರ್ ಪೂಜಾರ್, ತಾಪಂ ಮಾಜಿ ಅಧ್ಯಕ್ಷ ಐರಣಿ ಅಣ್ಣೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಹಿಂದೂ ಮಹಾಗಣಪತಿ ಟ್ರಸ್ಟ್ ಗೌರವಾಧ್ಯಕ್ಷ ಡಾ.ಶಶಿಕುಮಾರ್ ಮೆಹರ್ವಾಡೆ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್‌ ಚಂದಾಪೂರ, ಶೇಖರ್‌ಗೌಡ ಪಾಟೀಲ್, ನಾಗರಾಜ್ ಬಂಡಾರಿ, ರೂಪಾ ಶಶಿಕಾಂತ್, ರಶ್ಮಿ ಮೆಹರ‍್ವಾಡೆ, ರೂಪಾ ಕಾಟ್ವೆ, ಪ್ರಮೀಳಾ ನಲ್ಲೂರು, ಸಾಕ್ಷಿ ಶಿಂಧೆ, ಸ್ವಾತಿ ಹನುಮಂತ, ಎಚ್.ದಿನೇಶ್, ರಾಘವೇಂದ್ರ ಉಪಾಧ್ಯ, ಶಿವಪ್ರಕಾಶ್ ಶಾಸ್ತ್ರಿ, ಕೃಷ್ಣಮೂರ್ತಿ ಶ್ರೇಷ್ಠಿ, ಮಹೇಶ್, ನಿತ್ಯಾನಂದ, ಚಂದನ್ ಮುರ್ಕಲ್, ಶಿವಕುಮಾರ್, ಕಾರ್ತಿಕ್, ಪ್ರಸನ್ನ, ಅದ್ವೈತ ಶಾಸ್ತ್ರಿ, ರವಿ ರಾಯ್ಕರ್, ಗಿರೀಶ್‌ ಗೌಡ ಹಳ್ಳದಕೇರಿ, ಸಂತೋಷ್ ಗುಡಿಮನಿ, ರವಿ ಸಿಂಗ್, ಪ್ರಶಾಂತ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

- - -

-೧೫ಎಚ್‌ಆರ್‌ಆರ್‌.೦೧: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಶಾಸಕ ಬಿ.ಪಿ.ಹರೀಶ್‌ ಟ್ರ್ಯಾಕ್ಟರ್‌ ಚಾಲನೆ ಮೂಲಕ ಶುಭಾರಂಭ ನೀಡಿದರು. -೧೫ಎಚ್‌ಆರ್‌ಆರ್ ೧ಎ& ಎಎ: ಮೆರವಣಿಗೆಯಲ್ಲಿ ಯಕ್ಷಗಾನ ಕಲಾವಿದರು, ಮಹಿಳಾ ಡೊಳ್ಳು ಕುಣಿತ ಕಲಾವಿದರು ಜನಮನ ಸೆಳೆದರು. -೧೫ಎಚ್‌ಆರ್‌ಆರ್೦೧ಸಿ: ಹರಿಹರ ನಗರದಲ್ಲಿ ನಡೆದ ಹಿಂದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಸೇರಿದ್ದ ಅಪಾರ ಜನಸ್ತೋಮ.

- - -