ಭಕ್ತಗಣ ಸೆಳೆಯುತ್ತಿರುವ ನವನಗರದ ಹಿಂದು ಮಹಾಗಣಪತಿ

| Published : Sep 08 2025, 01:01 AM IST

ಸಾರಾಂಶ

ನವನಗರದ ಪಂಚಾಕ್ಷರಿ ನಗರದ ಮಹಾವೀರ ವೃತ್ತದಲ್ಲಿ ಹುಬ್ಬಳ್ಳಿ- ಧಾರವಾಡ ಹಿಂದು ಮಹಾಗಣಪತಿ ಉತ್ಸವ ಮಂಡಳಿಯಿಂದ ಕಳೆದ 3 ವರ್ಷಗಳಿಂದ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಈ ಬಾರಿ 15 ಅಡಿ ಎತ್ತರದ ಮುರುಡೇಶ್ವರನ ರೂಪದಲ್ಲಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಭಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹುಬ್ಬಳ್ಳಿ: ಇಲ್ಲಿನ ನವನಗರದ ಹಿಂದು ಮಹಾಗಣಪತಿ 21 ದಿನಗಳ ಕಾಲ ಪ್ರತಿಷ್ಠಾಪನೆಗೊಂಡಿರುತ್ತದೆ. ನಿತ್ಯವೂ ಅನ್ನಸಂತರ್ಪಣೆ, ಹಲವು ಕ್ರೀಡೆ, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನವನಗರದ ಪಂಚಾಕ್ಷರಿ ನಗರದ ಮಹಾವೀರ ವೃತ್ತದಲ್ಲಿ ಹುಬ್ಬಳ್ಳಿ- ಧಾರವಾಡ ಹಿಂದು ಮಹಾಗಣಪತಿ ಉತ್ಸವ ಮಂಡಳಿಯಿಂದ ಕಳೆದ 3 ವರ್ಷಗಳಿಂದ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಈ ಬಾರಿ 15 ಅಡಿ ಎತ್ತರದ ಮುರುಡೇಶ್ವರನ ರೂಪದಲ್ಲಿರುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಭಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಿತ್ಯವೂ ಸಾವಿರಾರು ಭಕ್ತರು ಈ ಗಣೇಶನ ದರ್ಶನ ಪಡೆಯುತ್ತಿದ್ದಾರೆ.

ಹಲವು ಕಾರ್ಯಕ್ರಮಗಳು: ಕಳೆದ 2 ವರ್ಷಗಳಿಂದ ಜ್ಯೂನಿಯರ್‌ ಡಾ. ರಾಜಕುಮಾರ, ಅಂಬರೀಶ, ಶಂಕರನಾಗ, ವಿಷ್ಣುವರ್ಧನ್, ಶಿವರಾಜಕುಮಾರ, ಉಪೇಂದ್ರ, ಪುನಿತ್‌ ರಾಜಕುಮಾರ ಸೇರಿದಂತೆ ಕರೆಸಲಾಗಿತ್ತು. ಮಹಿಳೆಯರಿಗಾಗಿ ಮ್ಯೂಸಿಕಲ್‌ ಚೇರ್‌, ಭಜನೆ, ಉಡಿತುಂಬುವ ಕಾರ್ಯಕ್ರಮ, ರುದ್ರಪಠಣ, ಟಗರಿನ ಕಾಳಗ, ಸ್ಲೋ ಬೈಕ್‌ ರೇಸ್‌, ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲಾಗಿತ್ತು.

ಈ ಸಲವೂ ವಿಶೇಷ ಕಾರ್ಯಕ್ರಮ: ಪ್ರತಿವರ್ಷದಂತೆ ಈ ವರ್ಷವೂ ವಿಶೇಷ ಕಾರ್ಯಕ್ರಮ ಆಯೋಜಿಸಲು ಗಣೇಶೋತ್ಸವ ಮಂಡಳಿ ತೀರ್ಮಾನಿಸಿದೆ. ಸೆ. 11ರಂದು ಬೆಳಗ್ಗೆ 11ಕ್ಕೆ ಗಣಹೋಮ, ಸಂಜೆ 6ಕ್ಕೆ ಮಹಾಮಂಗಳಾರತಿ ಬಳಿಕ ಮಹಾಪ್ರಸಾದ ನಡೆಯಲಿದೆ. ಸೆ. 12ರಂದು ಶ್ರೀ ನವಶಕ್ತಿ ಮಹಿಳಾ ಮಂಡಳದಿಂದ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ಸೆ. 13ರಂದು ಸಂಜೆ 6ಕ್ಕೆ ನಡೆಯಲಿರುವ ರಸಮಂಜರಿ ಕಾರ್ಯಕ್ರಮದಲ್ಲಿ ಜ್ಯೂನಿಯರ್‌ ರವಿಚಂದ್ರನ್, ವಿಷ್ಣುವರ್ಧನ್, ಅಂಬರೀಶ ಅವರಿಂದ ರಸಮಂದರಿ ಕಾರ್ಯಕ್ರಮ ನಡೆಯಲಿದೆ. ಯುವಕ ಮಂಡಳದ ಅಧ್ಯಕ್ಷರಿಗೆ, ಕಲಾವಿದರಿಗೆ, ಗಣೇಶ ಮೂರ್ತಿ ದಾನಿಗಳು ಹಾಗೂ ಗಣ್ಯರಿಗೆ ಸನ್ಮಾನ ನಡೆಯಲಿದೆ. ಸೆ. 14ರಂದು ಬೆಳಗ್ಗೆ 9ಕ್ಕೆ ರಾಜ್ಯಮಟ್ಟದ ಕ್ರಿಕೆಟ್‌ (30 ಯಾರ್ಡ್‌ ಸರ್ಕಲ್‌) ಪಂದ್ಯಾವಳಿ ನಡೆಯಲಿದ್ದು, ಧಾರವಾಡ ಜಿಲ್ಲೆ ಸೇರಿದಂತೆ ದಾವಣಗೆರೆ, ಗದಗ, ಹಾವೇರಿ, ಕೊಪ್ಪಳ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಿಂದ 25ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುತ್ತಿವೆ. ಸೆ. 16ರಂದು ಬೆಳಗ್ಗೆ 11ಕ್ಕೆ ಗಣೇಶನ ಅದ್ಧೂರಿ ವಿಸರ್ಜನಾ ಮೆರವಣಿಗೆ ನಡೆಯಲಿದೆ.

ಮಹಿಳಾ ಮಂಡಳ ಸಾಥ್: ಈ ಗಣೇಶೋತ್ಸವ ಕಾರ್ಯಕ್ರಮ ಯಶಸ್ಸಿಗೆ ಶ್ರೀ ನವಶಕ್ತಿ ಮಹಿಳಾ ಮಂಡಳವು ಕೈಜೋಡಿಸಿರುವುದು ಮತ್ತೊಂದು ವಿಶೇಷ. ಈ ಮಂಡಳದಲ್ಲಿ 40ಕ್ಕೂ ಅಧಿಕ ಮಹಿಳೆಯರು ಸದಸ್ಯರಿದ್ದಾರೆ. ಪ್ರತಿವರ್ಷವು ಗಣೇಶೋತ್ಸವದಲ್ಲಿ ಎರಡು ದಿನ ಮಹಿಳೆಯರಿಗಾಗಿಯೇ ಮೀಸಲಿರಿಸಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಂದು ಮೋದಕದಿಂದ ಸಿದ್ಧಪಡಿಸಲಾದ ವಿಶೇಷ ಹಾರ ಸಮರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜತೆಗೆ ಹಲವು ಮಹಿಳೆಯರು ಸಂತಾನ ಭಾಗ್ಯ ಕೋರಿ ಪೂಜೆ ಸಲ್ಲಿಸುತ್ತಾರೆ. ಹಲವರಿಗೆ ಇಷ್ಟಾರ್ಥ ಕರುಣಿಸಿದ ಉದಾಹರಣೆಗಳಿವೆ.

3 ವರ್ಷಗಳಿಂದ ನವನಗರದಲ್ಲಿ 15 ಅಡಿ ಎತ್ತರದ ಗಣೇಶ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. 21 ದಿನಗಳ ಕಾಲ ನಿತ್ಯವೂ ವಿಶೇಷ, ವೈಶಿಷ್ಟ್ಯಗಳಿಂದ ಕೂಡಿದ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿಂದು ಮಹಾ ಗಣಪತಿ ಉತ್ಸವ ಮಂಡಳಿ ಅಧ್ಯಕ್ಷ ಶಿವಕುಮಾರ ಅಪ್ಪಾಜಿ ಹೇಳಿದರು.

ಹಿಂದು ಮಹಾಗಣಪತಿ ಉತ್ಸವದ ಯಶಸ್ಸಿಗೆ ಮಹಿಳಾ ಮಂಡಳದ ಸದಸ್ಯರೆಲ್ಲರೂ ಶ್ರಮಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗಿನಿಂದ ಎಲ್ಲವೂ ಒಳಿತಾಗುತ್ತಿದೆ ಎಂದು ಶ್ರೀ ನವಶಕ್ತಿ ಮಹಿಳಾ ಮಂಡಳದ ಅಧ್ಯಕ್ಷೆ ಶೋಭಾ ಶಿವಕುಮಾರ ಅಪ್ಪಾಜಿ ಸಂತಸ ವ್ಯಕ್ತಪಡಿಸಿದರು.