ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಬೆಚ್ಚಿದ ದುರ್ಗ

| Published : Sep 29 2024, 01:31 AM IST

ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಬೆಚ್ಚಿದ ದುರ್ಗ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಸಂಭ್ರಮ ಹಾಗೂ ಭಕ್ತಿಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಶನಿವಾರ ಸಂಭ್ರಮ ಹಾಗೂ ಭಕ್ತಿಯಿಂದ ನೆರವೇರಿತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಮೂರು ಲಕ್ಷಕ್ಕೂ ಅಧಿಕ ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಧನ್ಯತೆ ಭಾವ ಪ್ರದರ್ಶಿಸಿದರು. ಕಣ್ಣಾಯಿಸಿದಷ್ಟು ಕೇಸರಿ ತೊಟ್ಟ ಯುವಕರೇ ಕಂಡು ಬಂದರು. ಬೆಳಗ್ಗೆ 11-30ಕ್ಕೆ ಆರಂಭಗೊಂಡ ಶೋಭಾಯಾತ್ರೆ , ಗಣೇಶ ಮೂರ್ತಿ ವಿಸರ್ಜನೆ ಚಂದ್ರವಳ್ಳಿ ಪ್ರದೇಶ ತಲುಪಲು ಬರೋಬ್ಬರಿ ಹತ್ತು ತಾಸುಗಳ ಸಮಯ ಪಡೆದುಕೊಂಡಿತು.

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದಲೇ ನಗರದ ಚಳ್ಳಕೆರೆ ರಸ್ತೆಯಿಂದ ಹೊಳಲ್ಕೆರೆ ರಸ್ತೆ ಕನಕ ವೃತ್ತದವರೆಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಇಡೀ ಚಿತ್ರದುರ್ಗ ನಗರಕ್ಕೆ ಕೇಸರಿ ಹೊದಿಸಲಾಗಿತ್ತು. ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಆಂಜನೇಯ ಸ್ವಾಮಿ ಭಾವಚಿತ್ರದ ಭಗವಾಧ್ವಜ ರಾರಾಜಿಸಿದವು. ಗಾಂಧಿ ವೃತ್ತದಲ್ಲಿ ಸುಮಾರು 20 ಅಡಿ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಿರುವ ಶ್ರೀರಾಮನ ಮೂರ್ತಿ ಜನರ ಗಮನ ಸೆಳೆಯಿತು.

ಬೆಳಗ್ಗೆ 11-30ಕ್ಕೆ ಆರಂಭಗೊಂಡ ಶೋಭಾಯಾತ್ರೆಗೆ ಭಂಜರಂಗ ದಳದ ರಾಷ್ಟ್ರೀಯ ಸಂಯೋಜಕ ನೀರಜ್ ದೋನೆರಿಯಾ ಚಾಲನೆ ನೀಡಿದರು. ಅತ್ಯಂತ ನಿಧಾನಗತಿಯಲ್ಲಿ ಸಾಗಿದ ಶೋಭಾಯಾತ್ರೆಗೆ ತುಸು ಬಿರುಸು ನೀಡಲು ಪೊಲೀಸರು ಯತ್ನಿಸಿದದಾರೂ ಸಾಧ್ಯವಾಗಲಿಲ್ಲ. ಸರ್ಕಾರ ವಿಜ್ಞಾನ ಕಾಲೇಜು ಬಳಿಯಿಂದ ಜಿಲ್ಲಾ ಆಸ್ಪತ್ರೆ ತನಕ ಐದು ನೂರು ಮೀಟರ್ ಶೋಭಾಯಾತ್ರೆ ಸಾಗಲು ಬರೋಬ್ಬರಿ ಐದು ತಾಸು ತೆಗೆದುಕೊಂಡಿತು. ಸಂಜೆ ಆರುವರೆ ಸುಮಾರಿಗೆ ಗಾಂಧಿ ವೃತ್ತಕ್ಕೆ ಆಗಮಿಸಿದ ಶೋಭಾಯಾತ್ರೆ ನಂತರ ಚುರುಕಾಯಿತು.

ಶೋಭಾಯಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಜನರ ಹಸಿವನ್ನು ನೀಗಿಸುವ ಸಲುವಾಗಿ ಮಾರ್ಗದುದ್ದಕ್ಕೂ ವಿವಿಧ ಸಂಘಟನೆಗಳು ಪಲಾವ್, ಪುಳಿಯೋಗರೆ, ಚಿತ್ರಾನ್ನ, ಮೊಸರು ಅನ್ನ, ನೀರು, ಐಸ್ ಕ್ರೀಂ, ಮಜ್ಜಿಗೆ ಹಾಗೂ ಸಿಹಿ ತಿನಿಸುಗಳನ್ನು ವಿತರಿಸಿದರು. ಕುಡಿವನೀರಿನ ಅಭಾವವಾಗದಂತೆ ನೋಡಿಕೊಂಡದ್ದು ವಿಶೇಷವಾಗಿತ್ತು. ಡಿಜೆ ಶಬ್ದಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸುತ್ತದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಬಿಗಿ ಪೊಲೀಸ್ ಬಂದೋ ಬಸ್ತ್:

ಗಣೇಶನ ಮೂರ್ತಿ ಶೋಭಾಯಾತ್ರೆ ವೇಳೆ ಶಿವಮೊಗ್ಗ ಹಾಗೂ ಇತರ ಕಡೆ ನಡೆದ ಶಾಂತಿ ಕದಡುವ ಘಟನೆಗಳ ಹಿನ್ನೆಲೆ ಚಿತ್ರದುರ್ಗದ ಶೋಭಾಯಾತ್ರೆಗೆ ಭಾರೀ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು. ಚಿತ್ರದುರ್ಗದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು ನಗರದಾದ್ಯಂತ ಪರಿಶೀಲನೆ ನಡೆಸಿದ್ರು. 6 ತಂಡಗಳ ಬಾಂಬ್ ಸ್ಕ್ವಾಡ್ ತಂಡ, ಶ್ವಾನ ದಳದಗಳು ಬಸ್ ನಿಲ್ದಾಣ, ಮಾಲ್, ಲಾಡ್ಜ್, ಸಿನಿಮಾ ಮಂದಿರ, ಪ್ರಮುಖ ಹೋಟೆಲ್, ಜನ ಜಂಗುಳಿ ಪ್ರದೇಶಗಳಲ್ಲಿ ತಪಾಸಣೆ ನಡೆಸಿದರು. ಅಪರಿಚಿತರು ತಂಗಿರುವ ಬಗ್ಗೆ ಹೊಸಬರ ಓಡಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಶೋಭಾಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು 3500 ಪೊಲೀಸ್ ಸಿಬ್ಬಂದಿ ಸರ್ಪಗಾವಲು ಹಾಕಲಾಗಿತ್ತು. 10 ಕೆಎಸ್ ಆರ್ ಪಿ, 12 ಡಿಎಆರ್, 4 ಕ್ಯೂ ಆರ್ ಟಿ, ತಂಡಗಳನ್ನು ಬಳಸಿಕೊಳ್ಳಲಾಗಿದೆ. ಐಜಿಪಿ,ಎಸ್ಪಿ, 6 ಎಎಸ್ಪಿ,16 ಡಿವೈಎಸ್ಪಿಗಳು ಬಂದೋ ಬಸ್ತ್ ಜವಾಬ್ದಾರಿ ಹೊತ್ತಿದ್ದರು.

ದರ್ಶನ್ ಭಾವುಟ ಜಟಾಪಟಿ:

ಶೋಭಾಯಾತ್ರೆಯಲ್ಲಿ ಕೆಲ ಯುವಕರು ದರ್ಶನ್ ಭಾವಚಿತ್ರದ ಭಾವುಟ ಪ್ರದರ್ಶಿಸಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ್ದ ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ದರ್ಶನ್ ಭಾವುಟ ಕೈಲಿಡಿದವರ ಹತ್ತಿರ ತೆರಳಿದ ಕಾರ್ಯಕರ್ತರು ಶೋಭಾಯಾತ್ರೆಯಿಂದ ಹೊರ ಹೋಗುವಂತೆ ತಾಕೀತು ಮಾಡಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಉದ್ನಿಗ್ನ ವಾತಾವರಣ ನಿರ್ಮಾಣವಾಯಿತಾದರೂ ಪೊಲೀಸರ ಸಕಾಲಿಕ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ದರ್ಶನ್ ಬಾವುಟ ಕಸಿದು ಯುವಕರ ಅಲ್ಲಿಂದ ಕಳಿಸಲಾಯಿತು.

2.05 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು

ಶೋಭಾಯಾತ್ರೆ ಆರಂಭವಾಗುವುದಕ್ಕೂ ಮೊದಲು ಮುಕ್ತಿ ಬಾವುಟ ಹರಾಜು ಹಾಕಲಾಯಿತು. ಹುನುಮನಹಳ್ಳಿ ಮಂಜುನಾಥ್ ಎಂಬುವರು ₹2.05 ಲಕ್ಷಕ್ಕೆ ಮುಕ್ತಿ ಬಾವುಟವ ಹರಾಜಿನಲ್ಲಿ ಕೂಗಿ ತಮ್ಮದಾಗಿಸಿಕೊಂಡರು. ಹೂವಿನ ಹಾರವ ₹1.60 ಲಕ್ಷ ರು ಗೆ ತೊರೆಮನಹಳ್ಳಿ ತಿಪ್ಪೇಸ್ವಾಮಿ ಹಾಗೂ ಗಣಪತಿಗೆ ಹಾಕಿದ ನೋಟಿನ ಹಾರವನ್ನು ಕೆಜಿಟಿ ಗುರುಮೂರ್ತಿ, ₹2.50 ಲಕ್ಷ ಕೂಗಿ ಪಡೆದರು. ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಪುರಿ ಜಗನ್ನಾಥ್ ದೇವಾಲಯದ ಮಾದರಿಯನ್ನು ₹2.25 ಲಕ್ಷಗಳಿಗೆ ಕೆ.ಸಿ.ನಾಗರಾಜ್ ಹಾಗೂ ಹಣ್ಣಿನ ಪುಟ್ಟಿಯನ್ನು ₹60 ಸಾವಿರಕ್ಕೆ ಉಮೇಶ್ ಕಾರಜೋಳ, ಗಣಪತಿ ಪ್ರಸಾದ ಲಡ್ಡು ₹70 ಸಾವಿರಕ್ಕೆ ಶ್ಯಾಮಿಯಾನ ಮೋಹನ್ ಪಡೆದರು. ಗಣಪತಿಯ ಭಾವಚಿತ್ರವನ್ನು ₹60 ಸಾವಿರಕ್ಕೆ ಮಂಜಣ್ಣ ಹಾಗೂ ಮೆಕ್ಕೆಜೋಳದ ಹಾರವನ್ನು ₹40 ಸಾವಿರಕ್ಕೆ ವಿಶ್ವಬಂಧು ಕೊಟ್ರೇಶ್ ರವರು ಬಹಿರಂಗ ಹರಾಜಿನಲ್ಲಿ ಪಡೆದರು.