ನಗರದ ಭಗವತಿ ಕ್ಷೇತ್ರದಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ ಜಾಗೃತಿ ಸಭೆ

ಮಂಗಳೂರು: ಲವ್ ಜಿಹಾದ್, ಮತಾಂತರ, ದ್ವೇಷ ಭಾಷಣ ಕಾಯ್ದೆ, ಹಿಂದೂಗಳ ಬಂಧನ, ಜನಸಂಖ್ಯಾ ಸ್ಫೋಟ ಮತ್ತು ವಕ್ಫ್ ಕಾಯ್ದೆಯಂತಹ ಗಂಭೀರ ಸವಾಲುಗಳನ್ನು ಎದುರಿಸಲು ಭಾರತವನ್ನು ಸಂವಿಧಾನಬದ್ಧ ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವುದು ಇಂದಿನ ಅನಿವಾರ್ಯತೆ. ದೇವಸ್ಥಾನಗಳ ಸರ್ಕಾರಿಕರಣವನ್ನು ಕೊನೆಗಾಣಿಸಿ ಸಾತ್ವಿಕ ಸಮಾಜ ನಿರ್ಮಿಸಲು ರಾಮರಾಜ್ಯದ ಮಾದರಿ ಬೇಕಾಗಿದೆ ಎಂದು ಗುರುಪ್ರಸಾದ್ ಗೌಡ ಹೇಳಿದರು.ನಗರದ ಭಗವತಿ ಕ್ಷೇತ್ರದಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.ನಮ್ಮ ಮುಂದೆ ಲವ್ ಜಿಹಾದ್, ಹಲಾಲ್ ಜಿಹಾದ್, ಗೋ ಹತ್ಯೆ, ಹಿಂದೂಗಳ ಹತ್ಯೆ ಇತ್ಯಾದಿ ಅನೇಕ ಸಮಸ್ಯೆಗಳು ಇವೆ. ಇದಕ್ಕೆ ಒಂದೇ ಪರಿಹಾರ- ಹಿಂದೂಗಳ ಹಿತ ಕಾಪಾಡುವ ಹಿಂದೂ ರಾಷ್ಟ್ರವೇ ಬೇಕು ಎಂದು ಅವರು ಅಭಿಪ್ರಾಯಪಟ್ಟರು.ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಮಾತನಾಡಿ, ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಾವು ನಮ್ಮ ಭವ್ಯ ಪರಂಪರೆಯನ್ನೇ ಮರೆಯುತ್ತಿದ್ದೇವೆ. ನಮ್ಮ ಪ್ರತಿಯೊಂದು ಹಬ್ಬ, ಸಂಪ್ರದಾಯ ಮತ್ತು ಉತ್ಸವಗಳ ಹಿಂದೆ ವೈಜ್ಞಾನಿಕವಾದ ಧರ್ಮಶಾಸ್ತ್ರ ಅಡಗಿದೆ. ಈ ಶಾಸ್ತ್ರಗಳನ್ನು ಅರಿತು, ಶ್ರದ್ಧೆಯಿಂದ ಆಚರಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.ಅಖಿಲ ಭಾರತೀಯ ಅಧಿವಕ್ತಾ ಪರಿಷತ್ತಿನ ನ್ಯಾಯವಾದಿ ಜಯಪ್ರಕಾಶ ಮಾತನಾಡಿ, ಧರ್ಮ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಧರ್ಮಕ್ಕೆ ಧಕ್ಕೆ ಬಂದಾಗ ಮೌನವಾಗಿರದೆ, ಸಂಘಟಿತರಾಗಿ ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಿಸಬೇಕು. ಹಿಂದೂ ವಿರೋಧಿ ಕೃತ್ಯಗಳನ್ನು ತಡೆಯಲು ಕಾನೂನಿನ ಸದುಪಯೋಗ ಪಡೆದುಕೊಳ್ಳುವುದು ಮತ್ತು ಒಗ್ಗಟ್ಟಿನಿಂದ ಹೋರಾಡುವುದು ಇಂದಿನ ಅಗತ್ಯ ಎಂದರು.ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಡಾ. ಪ್ರಣವ್ ಮಲ್ಯ ಅವರು ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಸುಧಾ ಮತ್ತು ವನಜಾಕ್ಷಿ ನಿರೂಪಿಸಿದರು.