ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿ ಬಂಧಿಸಿ

| Published : Aug 26 2025, 01:02 AM IST

ಸಾರಾಂಶ

ಧರ್ಮಸ್ಥಳ ಕರ್ನಾಟಕವಲ್ಲದೇ ದೇಶಾದ್ಯಂತ ಕೋಟ್ಯಾಂತರ ಭಕ್ತರನ್ನು ಹೊಂದಿದೆ. ಈ ಕ್ಷೇತ್ರಕ್ಕೆ ದಿನನಿತ್ಯ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ

ಕನ್ನಡಪ್ರಭ ವಾರ್ತೆ ಟಿ. ನರಸೀಪುರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕಿಡಿಗೇಡಿಗಳು ಷಡ್ಯಂತ್ರ ನಡೆಸುವ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದು, ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಬಿಜೆಪಿ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಜಮಾವಣೆಗೊಂಡ ವರುಣ ಮತ್ತು ಟಿ. ನರಸೀಪುರ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರು ಕೆಲಕಾಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಕರ್ನಾಟಕವಲ್ಲದೇ ದೇಶಾದ್ಯಂತ ಕೋಟ್ಯಾಂತರ ಭಕ್ತರನ್ನು ಹೊಂದಿದೆ. ಈ ಕ್ಷೇತ್ರಕ್ಕೆ ದಿನನಿತ್ಯ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ. ಹಿಂದೂಗಳಿಗೆ ಇದು ಪ್ರಮುಖ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿದೆ. ಆದರೆ, ಹಿಂದೂಗಳ ಧಾರ್ಮಿಕ ಭಾವನೆಯನ್ನು ಅಪಮಾನಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಹಾಗೂ ಎಡ ಪಂಥೀಯರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್ ಮಾತನಾಡಿ, ಅನಾಮಿಕ ವ್ಯಕ್ತಿಯೋರ್ವನು ನೀಡಿದ ದೂರಿನ ಮೇರೆಗೆ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುತ್ತಿದೆ ಮತ್ತು ಅವನು ತೋರಿಸುತ್ತಿರುವ ಸಮಾದಿಗಳನ್ನು ಅಗೆದಿದೆ, ಆ ವರದಿ ಬರುವ ಮುಂಚೆ ಕೆಲವರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾ ಕ್ಷೇತ್ರದ ಧರ್ಮಕರ್ತರಾದ ವೀರೇಂದ್ರ ಹೆಗ್ಗಡೆ ಅವರ ತೇಜೋವಧೆ ಮಾಡುತ್ತಿದ್ದಾರೆ, ಇವರ ಮೇಲೆ ಕೇಸ್ ದಾಖಲಿಸಿ ಇವರ ಆದಾಯದ ಮೂಲಗ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡ ಡಾ. ರೇವಣ್ಣ ಮಾತನಾಡಿ, ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯವು ಸತ್ಯ-ಧರ್ಮಕ್ಕೆ ಹೆಸರುವಾಸಿಯಾಗಿದ್ದು, ವಿಶ್ವಾದ್ಯಂತ ತನ್ನದೇ ಆದ ಕೋಟ್ಯಂತರ ಭಕ್ತರನ್ನು ಹೊಂದಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದ್ದು, ಅಲ್ಲಿ ನಡೆಯುತ್ತಿರುವ ಸೇವೆಗಳು ಅವಿಸ್ಮರಣೀಯವಾಗಿದೆ. ಮಾನವೀಯತೆಯ ತಾಣವಾಗಿರುವ ಧರ್ಮಸ್ಥಳ ಕ್ಷೇತ್ರವು ಯಾವುದೇ ಧರ್ಮ, ಜಾತಿ, ಭೇದವಿಲ್ಲದೆ ನಿರಂತರವಾಗಿ ದಾನ-ಧರ್ಮ ನಡೆಸಿಕೊಂಡು ಬರುತ್ತಿದ್ದು, ಎಲ್ಲಾ ಜನಾಂಗದ ಶ್ರದ್ಧಾ ಕೇಂದ್ರವಾಗಿ ರಾರಾಜಿಸುತ್ತಿರುವ ಅಲ್ಲಿನ ಚಿಂತನೆಗಳು ಸದಾ ಅನುಕರಣೆಯವಾಗಿದೆ ಎಂದರು.ವರುಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ತೋಟದಪ್ಪ ಬಸವರಾಜು ಮಾತನಾಡಿದರು.ಪ್ರತಿಭಟನೆಯಲ್ಲಿ ಟಿ. ನರಸೀಪುರ ಮತ್ತು ವರುಣ ಮಂಡಲ ಅಧ್ಯಕ್ಷ ಸತ್ಯರಾಜ್ ಹಾಗೂ ಮಹದೇವಸ್ವಾಮಿ, ಎ.ಎಂ. ಗುರುಸ್ವಾಮಿ, ಮಹೇಶ್, ನಂಜುಂಡಸ್ವಾಮಿ, ದಯಾನಂದ ಪಟೇಲ್, ದಾಸಯ್ಯ, ಎನ್. ಲೋಕೇಶ್, ಮೂಗೂರು ಚಂದ್ರಶೇಖರ್, ಸಿದ್ದರಾಜು, ಮಲ್ಲಿಕಾರ್ಜುನಸ್ವಾಮಿ, ಅನಿಲ್, ವೆಂಕಟರಮಣ ಶೆಟ್ಟಿ, ಮಾದಪ್ಪ, ಕಾಳೇಗೌಡ, ರಾಜಶೇಖರ ಮತ್ತು ಮಹಿಳಾ ಮುಖಂಡರು, ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.