ಕನ್ನಡಪ್ರಭ ವಾರ್ತೆ ಬೆಳಗಾವಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ನೇಮಕಾತಿಯಲ್ಲಿ ತರಬೇತಿ ಪೂರ್ಣಗೊಳಿಸಿದ ನೂರಾರು ಯೋಧರನ್ನು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಸೇವೆಯಿಂದ ವಜಾಗೊಳಿಸಿರುವುದು ಗಂಭೀರ ಅನ್ಯಾಯ ಎಂದು ಎನ್‌ಎಸ್‌ಟಿಪಿಎ ರಾಷ್ಟ್ರೀಯ ಅಧ್ಯಕ್ಷ ಡಾ.ಗಿರಿರಾಜ್ ಶಿರಗೆ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಡಿ ಭದ್ರತಾ ಪಡೆ(ಬಿಎಸ್‌ಎಫ್) ನೇಮಕಾತಿಯಲ್ಲಿ ತರಬೇತಿ ಪೂರ್ಣಗೊಳಿಸಿದ ನೂರಾರು ಯೋಧರನ್ನು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಸೇವೆಯಿಂದ ವಜಾಗೊಳಿಸಿರುವುದು ಗಂಭೀರ ಅನ್ಯಾಯ ಎಂದು ಎನ್‌ಎಸ್‌ಟಿಪಿಎ ರಾಷ್ಟ್ರೀಯ ಅಧ್ಯಕ್ಷ ಡಾ.ಗಿರಿರಾಜ್ ಶಿರಗೆ ಆರೋಪಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ನೇಮಕಾತಿಯಲ್ಲಿ ಎಲ್ಲಾ ಹಂತಗಳ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಈ ಯುವಕರು ಶಾರೀರಿಕ, ಲಿಖಿತ ಸೇರಿದಂತೆ ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ವರ್ಷಕ್ಕಿಂತ ಹೆಚ್ಚು ಅವಧಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಆದರೂ ಸ್ಕಿಲ್ ಎನ್‌ಎಸ್‌ಕ್ಯೂಎಫ್ ಪ್ರಮಾಣಪತ್ರದ ಹೆಸರಿನಲ್ಲಿ ಅವರ ಅರ್ಹತೆ ತಿರಸ್ಕರಿಸಿ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಕುಕ್, ವೇಟರ್, ವಾಟರ್ ಕಾರಿಯರ್ ಹುದ್ದೆಗಳಿಗೆ ಆಯ್ಕೆಯಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಭ್ಯರ್ಥಿಗಳನ್ನು ಡ್ಯುಪ್ಲಿಕೇಟ್ ಪ್ರಮಾಣಪತ್ರ ನೆಪದಲ್ಲಿ ವಜಾಗೊಳಿಸಿದ್ದು, ಇದರಿಂದ ಅನೇಕ ಯುವಕರು ಹಠಾತ್ ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಬಡ ಹಾಗೂ ಮಧ್ಯಮ ವರ್ಗದ ಯುವಕರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಹೇಳಿದರು.ಕೇಂದ್ರ ಸರ್ಕಾರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಯುವಕರ ಭವಿಷ್ಯ ಹಾಳು ಮಾಡಬಾರದು. ತಕ್ಷಣವೇ ಪೀಡಿತ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ, ಮರು ನೇಮಕಾತಿಗೆ ಅವಕಾಶ ಕಲ್ಪಿಸಬೇಕು. ದೇಶ ಸೇವೆ ಮಾಡುವ ಕನಸಿನಿಂದ ಬಂದ ಯುವಕರನ್ನು ಮಧ್ಯದಲ್ಲೇ ವಜಾಗೊಳಿಸುವುದು ಸರಿಯಲ್ಲ. ಮಾನವೀಯ ದೃಷ್ಟಿಯಿಂದ ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು.