ಹಾವೇರಿ: ಇಂದಿನ ಯುವ ಸಮುದಾಯಕ್ಕೆ ಹಿಂದೂ ಸಂಸ್ಕೃತಿಯ ಶ್ರೇಷ್ಠತೆ, ಪರಂಪರೆ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಹಿಂದೂಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಫೆ.8ರಂದು ನಗರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು. ನಗರದ ಹುಕ್ಕೇರಿಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸಮಾಜ ಕವಲು ದಾರಿಯಲ್ಲಿ ಸಾಗುತ್ತಿದ್ದು, ಅದನ್ನು ಸರಿಪಡಿಸಿ ಸಮಾಜದ ಜನರನ್ನು ಜಾಗೃತಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾತಿ, ಮತ, ಪಂಥ ಎಣಿಸದೇ ಎಲ್ಲರನ್ನೂ ಒಗ್ಗೂಡಿಸುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ. ಇದು ಯಾವುದೇ ಧರ್ಮ, ಜಾತಿಯ ವಿರುದ್ಧವಲ್ಲ. ಅಲ್ಲದೇ ರಾಜಕೀಯ ರಹಿತವಾದ ಸಮಾವೇಶವಾಗಿದೆ. ಎಲ್ಲರನ್ನೂ ಸಂಘಟಿಸಲು, ಹಿಂದೂ ನಾವೆಲ್ಲ ಒಂದು ಎಂದು ಸಾರುವುದೇ ಈ ಕಾರ್ಯಕ್ರಮದ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು. ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ವಿಜಯಕುಮಾರ ಗೊಡಚಿ ಕಾರ್ಯಕ್ರಮ ರೂಪರೇಷಗಳ ಬಗ್ಗೆ ಮಾತನಾಡಿ, ಹಿಂದೂಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಫೆ. 8ರಂದು ಹಾವೇರಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 2.30ಕ್ಕೆ ಹುಕ್ಕೇರಿಮಠದಿಂದ ಆರಂಭಗೊಳ್ಳುವ ಬೃಹತ್ ಶೋಭಾಯಾತ್ರೆ ಎಂ.ಜಿ.ರೋಡ್, ಜೆ.ಪಿ.ಸರ್ಕಲ್, ಹೈಸ್ಕೂಲ್ ರೋಡ್ ಮೂಲಕ ಮುನ್ಸಿಪಲ್ ಮೈದಾನ ತಲುಪಲಿದೆ. ಈ ಶೋಭಾಯಾತ್ರೆ ಮೆರವಣಿಗೆಯಲ್ಲಿ ವಿಶೇಷವಾಗಿ ಭಾರತಮಾತೆ, ದೇವಾನು ದೇವತೆಗಳ, ಮಹಾಪುರುಷರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು, ವಿವಿಧ ಕಲಾ ತಂಡಗಳು, ಮಾತೆಯರಿಂದ ಪೂರ್ಣಕುಂಭದ ಮೆರವಣಿಗೆ, ಮಕ್ಕಳಿಂದ ವಿವಿಧ ವೇಷಭೂಷಣ ಪ್ರದರ್ಶನ ನಡೆಯಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಭಾಗವಹಿಸಲಿದ್ದಾರೆ. ಶೋಭಾಯಾತ್ರೆ ಸಾಗುವ ಮಾರ್ಗದ ರಸ್ತೆಯಲ್ಲಿ ರಂಗೋಲಿ, ತಳಿರು ತೋರಣ ಕಟ್ಟಿ ಸಿಂಗರಿಸಬೇಕು ಎಂದರು. ಸಂಜೆ 5 ಗಂಟೆಗೆ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಗುರುಪಾದ ದೇವರಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹರಸೂರ ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಮಾಜಿಕ ಕಾರ್ಯಕರ್ತ ಹನುಮಂತ ಮಳಲಿ ವಕ್ತಾರರಾಗಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಿಂದೂ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಆರ್.ಎಸ್.ಮಾಗನೂರ ಹಾಗೂ ಸಮಿತಿ ಅಧ್ಯಕ್ಷ ವಿಜಯಕುಮಾರ ಗೊಡಚಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಹಿಂದು ಸಮಾಜೋತ್ಸವ ಕಾರ್ಯಕ್ರಮ ಯಾವುದೇ ಧರ್ಮದ ವಿರುದ್ಧ ಶಕ್ತಿ ಪ್ರದರ್ಶನವಲ್ಲ. ಸಮಾಜದ ಜನರನ್ನು ಒಗ್ಗೂಡಿಸಿ ಸಾಮರಸ್ಯದಿಂದ ಬದುಕಬೇಕು ಎಂಬ ಸಂದೇಶ ಸಾರಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಅಂಗವಾಗಿ ಫೆ. 6ರಂದು ಮಧ್ಯಾಹ್ನ 3 ಗಂಟೆಗೆ ನಗರದಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ಕಾರುಗಳ ರ್‍ಯಾಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಳ್ಳಬೇಕು ಎಂದರು. ಆರ್.ಎಸ್.ಮಾಗನೂರ, ಪಿ.ಡಿ.ಶಿರೂರ, ಕೆ.ಸಿ. ಪಾವಲಿ, ಸುಭಾಸ ಬೆಂಗಳೂರ, ರಮೇಶ ಆನವಟ್ಟಿ, ಎಂಆರ್‌ಎಂ ರಾವ್, ಎಚ್.ಸಿ. ಸಿದ್ದನಗೌಡ್ರ, ನಾಗೇಂದ್ರ ಕಟಕೋಳ, ವಸಂತ ಮೊಕ್ತಾಲಿ ಇತರರು ಇದ್ದರು. ವಿಶ್ವವೇ ಒಂದು ಕುಟುಂಬ ಎಂದು ಸಂದೇಶ ಸಾರಿದ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹಿಂದೂ ಧರ್ಮದ ಆಚಾರ-ವಿಚಾರ, ಪರಂಪರೆ, ಸಂಸ್ಕೃತಿಯನ್ನು ಸಮಾಜದ ಬಾಂಧವರಿಗೆ ತಿಳಿಸಿ ಸಾಮರಸ್ಯ ಬದುಕುವ ಮೂಲಕ ಹಿಂದೂ ಸಮಾಜವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದ್ದು ಸಹಸ್ರ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು ಹೇಳಿದರು.
ಹಿಂದೂ ಧರ್ಮದ ಜಾಗೃತಿಗಾಗಿ ಫೆಬ್ರವರಿ 8ರಂದು ಹಿಂದೂ ಸಮಾಜೋತ್ಸವ
ಇಂದಿನ ಯುವ ಸಮುದಾಯಕ್ಕೆ ಹಿಂದೂ ಸಂಸ್ಕೃತಿಯ ಶ್ರೇಷ್ಠತೆ, ಪರಂಪರೆ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಹಿಂದೂಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಫೆ.8ರಂದು ನಗರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.