ಸಮೀಪದ ಹಾನಗಲ್ಲು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಯಡೂರು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್‍ಯಕ್ರಮ ನಡೆಯಿತು.
ಸೋಮವಾರಪೇಟೆ: ಸಮೀಪದ ಹಾನಗಲ್ಲು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಯಡೂರು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್‍ಯಕ್ರಮ ನಡೆಯಿತು. ಕಲ್ಕಂದೂರಿನ ಕೂಡು ರಸ್ತೆಯಿಂದ ಯಡೂರು ಗ್ರಾಮದವರೆಗೆ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಿದ್ದ ಅಲಂಕೃತ ವಾಹನದಲ್ಲಿ ಮೆರವಣಿಗೆ ತೆರಳಲಾಯಿತು. ಹಾನಗಲ್ಲು ಗಣಪತಿ ದೇವಾಲಯದ ಅರ್ಚಕ ಪ್ರಸಾದ್ ಭಟ್ ನೇತೃತ್ವದಲ್ಲಿ ಗೋ ಪೂಜೆ ನೆರವೇರಿಸುವ ಮೂಲಕ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ಮಹಿಳೆಯರು ಪೂರ್ಣಕುಂಭದೊಂದಿಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರೆ, ಮಕ್ಕಳು, ಪುರುಷರು ಕೇಸರಿ ಶಾಲು ಧರಿಸಿ, ಕೇಸರಿ ದ್ವಜಗಳನ್ನು ಹಿಡಿದು ಹೆಜ್ಜೆ ಹಾಕಿದರು. ಯಡೂರು ಆಟದ ಮೈದಾನದವರೆಗೆ ನಡೆದ ಶೋಭಾಯಾತ್ರೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು.
ಕಾರ್‍ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಸೋಮನಾಥ ಸ್ವಾಮೀಜಿ, ಭಾರತ ಸದೃಢವಾಗಿದ್ದರೆ ಮಾತ್ರ ಜಗತ್ತು ಸುಖಿಯಾಗಿರುತ್ತದೆ. ವಸುದೈವ ಕುಟುಂಬಕಂ ಎಂಬ ಧ್ಯೇಯವನ್ನು ಹಿಂದೂ ಸಮಾಜ ಹೊಂದಿದೆ. ಭಾರತ ಭಾರತವಾಗಿ ಉಳಿಯಬೇಕಾದರೆ ಹಿಂದೂ ಕೌಟುಂಬಿಕ ಪದ್ಧತಿ ಉಳಿಯಬೇಕು ಎಂದು ಹೇಳಿದರು.ದಿಕ್ಸೂಚಿ ಭಾಷಣ ಮಾಡಿದ ಸಾಮಾಜಿಕ ಕಾರ್‍ಯಕರ್ತ, ಸುಳ್ಯ ಆಡೂರಿನ ನವೀನ್ ಸುಬ್ರಹ್ಮಣ್ಯ ಮಾತನಾಡಿ, ಈ ಹಿಂದಿನಿಂದಲೂ ಹಿಂದೂ ಸಮಾಜದ ಮೇಲೆ ಹಲವಷ್ಟು ದಾಳಿಗಳು ನಡೆದಿವೆ. ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ನಾಶಗೊಳಿಸುವ ಯತ್ನಗಳು ಧರ್ಮದ್ರೋಹಿಗಳಿಂದ ನಡೆದರೂ ಸಹ ಮತ್ತೆ ತಲೆಯೆತ್ತಿ ನಿಂತಿವೆ. ಬಹುತ್ವದಲ್ಲಿ ಹಿಂದುತ್ವ ಬೆಳೆದಿದೆ. ಹಿಂದುತ್ವದ ಜಾತ್ಯತೀತತೆಯೇ ನಿಜವಾದ ಸತ್ಯ ಎಂದು ಹೇಳಿದರು.ಕೇಸರಿ ಕಂಡರೆ ಕೆಲ ರಾಜಕಾರಣಿಗಳ ಕಣ್ಣು ಕೆಂಪಾಗುತ್ತದೆ. ಭಾರತ ಮಾತೆಯ ಭಾವಚಿತ್ರವನ್ನು ಕಂಡರೆ, ಭಗವಾದ್ವಜ ಹಿಡಿದರೆ ಆರ್ ಎಸ್ ಎಸ್ ಐಡಿಯಾಲಜಿ ಎಂದು ಹಲವರು ಹೇಳುತ್ತಾರೆ. ಆರ್ ಎಸ್ಎಸ್ ಹುಟ್ಟುವುದಕ್ಕೂ ಮುನ್ನವೇ ಕೇಸರಿ, ಭಾರತ ಮಾತೆ ಇತ್ತು. ಭಾರತ ಹಿಂದೆ ಏನಾಗಿತ್ತೋ ಅದನ್ನು ನೆನಪು ಮಾಡಿಕೊಡುವ ಕೆಲಸವನ್ನಷ್ಟೇ ಸಂಘ ಮಾಡುತ್ತಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಸಾಹಿತಿ ಜಲಾಕಾಳಪ್ಪ, ಅಧ್ಯಕ್ಷತೆ ವಹಿಸಿದ್ದ ಹಿರಿಯ ಸ್ವಯಂ ಸೇವಕ ಕೆ.ಎಸ್. ಅಪ್ಪಯ್ಯ ಮಾತನಾಡಿದರು. ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಕೆ.ಟಿ. ಸನತ್, ಗೌರವಾಧ್ಯಕ್ಷ ಎಸ್.ಎನ್. ಸೀತಾರಾಮ್, ಹಾನಗಲ್ಲು ಮಂಡಲ ಅಧ್ಯಕ್ಷ ಬಿ.ಜೆ. ದೀಪಕ್ ಇದ್ದರು.