ಕೈ ವಿರುದ್ಧ ಹಿಂದೂ ಸಮಾಜ ತಿರುಗಿ ಬೀಳಲಿದೆ: ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ

| Published : Jul 09 2024, 12:53 AM IST

ಕೈ ವಿರುದ್ಧ ಹಿಂದೂ ಸಮಾಜ ತಿರುಗಿ ಬೀಳಲಿದೆ: ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಬಾಗಿನ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿರೋಧ ಪಕ್ಷದ ಸ್ಥಾನದಲ್ಲಿರುವ ರಾಹುಲ್‍ ಗಾಂಧಿಯವರು ಗೌರವದಿಂದ ನಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಇಡೀ ಹಿಂದೂ ಸಮಾಜ ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿ ಬೀಳುತ್ತದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಎಚ್ಚರಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ ಯಾರೂ ಹಿಂದೂ ಸಮಾಜ ಟೀಕೆ ಮಾಡಿರಲಿಲ್ಲ. ಬಿಜೆಪಿಗೆ ಬಹುಮತ ಬಾರದಿರುವುದು ಕಾಂಗ್ರೆಸ್‍ಗೆ ಹರ್ಷ ತಂದಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಹೇಳಿಕೆ ಇಡೀ ಪ್ರಪಂಚದ ಹಿಂದೂಗಳಿಗೆ ನೋವುಂಟು ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಇಡೀ ದೇಶದ ಗಮನ ಸೆಳೆದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕಾಂಗ್ರೆಸ್ ದ್ರೋಹ ಎಸಗಿದೆ. ಈಗಾಗಲೇ ಸಚಿವ ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಎಸ್ಐಟಿ ಅನೇಕ ಸಾಕ್ಷಿ ಕಲೆಹಾಕಿದ್ದರೂ ಸಹ ಇದುವರೆಗೂ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.

ಮೂಡ ಸೈಟ್ ಹಗರಣದಲ್ಲಿ ಹೆಣ್ಣು ಮಕ್ಕಳನ್ನು ಬೀದಿಗೆ ತರಲಾಗಿದೆ. ಹಗರಣ ನಡೆದೇ ಇಲ್ಲವೆಂದರೆ ತನಿಖೆಗೆ ಒಪ್ಪಿಸಿದ್ದೇಕೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಇರುವುದು ಮಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ತನಿಖೆಯಲ್ಲಿ ಆರೋಪ ಮುಕ್ತವಾದಲ್ಲಿ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ವಾಗ್ದಾಳಿ ನಡೆಸಲಿ ಎಂದರು.

ನಾನು ಈಗಲೂ ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಇರುತ್ತೇನೆ. ಯಾವ ಸಿದ್ಧಾಂತಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ ಎಂಬುವುದು ಪಕ್ಷದ ಹೈಕಮಾಂಡ್‍ಗೆ ಗೊತ್ತಿದೆ. ರಾಜ್ಯದ ನಿಷ್ಟಾವಂತ ಕಾರ್ಯಕರ್ತರ ಧ್ವನಿಯಾಗಿ ನಾನು ಸ್ಪರ್ಧೆ ಮಾಡಿದ್ದೆ. ಪ್ರಧಾನಿ ಮೋದಿ ಹೇಳಿದಂತೆ ಒಂದೇ ಕುಟುಂಬದ ಕೈಯಲ್ಲಿ ಅಧಿಕಾರ ಇರಬಾರದು ಎನ್ನುವುದು ನನ್ನ ಸಿದ್ಧಾಂತ ಎಂದರು.

ವಕೀಲ ವಿನೋದ್‍ರವರು ನನ್ನ ಮೇಲೆ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಅನೇಕ ಕೇಸ್‍ಗಳನ್ನು ಬೆಂಗಳೂರಿನ ಹೆಚ್ಚುವರಿ ನ್ಯಾಯಾಧೀಶರ ಕೋರ್ಟ್‍ಲ್ಲಿ ಹಾಕಿದ್ದರು. ಜು.5ರಂದು ನ್ಯಾಯಾಲಯ ನನ್ನ ಮೇಲಿನ ಎಲ್ಲಾ ಆರೋಪದಿಂದ ಮುಕ್ತಗೊಳಿಸಿದೆ. ವಕೀಲ ವಿನೋದ್ ಅವರು ಸುಳ್ಳು ಪ್ರಕರಣಗಳ ಮೂಲಕ ಮಾನಹಾನಿ ಮಾಡಿದ್ದಾರೆ. ಅಲ್ಲದೆ ನನ್ನನ್ನು ಪದೇ ಪದೇ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಶೀಘ್ರದಲ್ಲೇ ಅದರ ತೀರ್ಪು ಬರಲಿದೆ ಎಂದು ತಿಳಿಸಿದರು.

ನಗರದಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ, ಅಧಿಕಾರಿಗಳ ಕೈಯಲ್ಲಿ ಆಡಳಿತ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಲ್ಲ. ಮಹಾನಗರ ಪಾಲಿಕೆಯಲ್ಲಿ ಕೆಲಸಗಳು ಸಹ ಆಗುತ್ತಿಲ್ಲ. ಆಶ್ರಯ ಬಡಾವಣೆಯಲ್ಲಿ ಬಡವರು ಮನೆ ಪಡೆದುಕೊಳ್ಳಲು ಈಗಾಗಲೇ 80 ಸಾವಿರ ರು. ಹಣ ಕಟ್ಟಿದ್ದು, ಕೇವಲ 600 ಮನೆ ಕೊಡಲಾಗಿದೆ. ಇನ್ನೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಬಡವರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಿ ಯೋಜನೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಬಡವರಿಗೆ ಕೂಡಲೇ ಆಶ್ರಯ ಮನೆ ಬಿಡುಗಡೆಗೊಳಿಸುವಂತೆ ಜು.15ರಂದು ಬೆಳಗ್ಗೆ 10ಕ್ಕೆ ರಾಮಣ್ಣ ಶೆಟ್ಟಿ ಪಾರ್ಕ್‍ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಗೋಪಿ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಇ.ಕಾಂತೇಶ್, ಈ.ವಿಶ್ವಾಸ್, ಸುವರ್ಣ ಶಂಕರ್, ಶಂಕರ್‍ಗನ್ನಿ, ಮಹಾಲಿಂಗಶಾಸ್ತ್ರಿ, ಅ.ಮಾ.ಪ್ರಕಾಶ್, ಆರತಿ ಅ.ಮಾ.ಪ್ರಕಾಶ್, ಜಾಧವ್, ಶಂಕರ್, ಜಯಲಕ್ಷ್ಮೀ ಈಶ್ವರಪ್ಪ, ಸೀತಾಲಕ್ಷ್ಮೀ ಮತ್ತಿತರರು ಇದ್ದರು.

ಬೇಡಿಕೆಗೆ ನಾಯಕರು ಒಪ್ಪಿದರೆ ಮತ್ತೆ ಬಿಜೆಪಿಗೆ

ಬಿಜೆಪಿ ಮುಖಂಡರಿಂದ ನನಗೆ ಮತ್ತೆ ಪಕ್ಷ ಸೇರಿ ಸಂಘಟನೆ ಬಲಪಡಿಸಲು ಕರೆ ಬಂದಿರುವುದು ನಿಜ. ಆದರೆ, ನನಗೆ ನಾಲ್ಕು ಬಾರಿ ಪಕ್ಷದಿಂದ ಅನ್ಯಾಯವಾಗಿದೆ. ಪಕ್ಷ ನಿಷ್ಟನಾಗಿ ಪಕ್ಷ ಹೇಳಿದ ಎಲ್ಲಾ ಕಾರ್ಯ ನಿಭಾಯಿಸಿದ್ದೇನೆ. ನನ್ನ ಬೇಡಿಕೆಗೆ ನಾಯಕರು ಒಪ್ಪಿದರೆ ನಾನು ಮತ್ತೆ ಪಕ್ಷಕ್ಕೆ ಬರುತ್ತೇನೆ. ಈಗ ಸದ್ಯಕ್ಕೆ ತುರ್ತು ಇಲ್ಲ ಎಂದು ಕೆ.ಎಸ್‌.ಈಶ್ವರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರ ಶ್ರಮದಿಂದಾಗಿ ಬಳಗದ ಅಭ್ಯರ್ಥಿ ಮಹಾಲಿಂಗಶಾಸ್ತ್ರಿ ಅವರು ಜಯಶೀಲರಾಗಿದ್ದಾರೆ. ಅವರಿಗೆ ಜು.10ರಂದು ಸಂಜೆ 6ಕ್ಕೆ ಮಲ್ಲೇಶ್ವರ ನಗರದಲ್ಲಿರುವ ನಮ್ಮ ನಿವಾಸ ಆವರಣದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.