ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಕರೆ ನೀಡಿದರು.ಸರ್ಕಾರಿ ಪದವಿ ಮಹಾವಿದ್ಯಾಲಯ ಮತ್ತು ರಾಯಚೂರು ವಿಶ್ವವಿದ್ಯಾಲಯದ ಸಹಯೊಗದೊಂದಿಗೆ ಕುಯಿಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪಠ್ಯೇತರ ಚಟುವಟಿಕೆಯ ರೂಪದಲ್ಲಿರುವ ಈ ರಾಷ್ಟ್ರೀಯ ಸೇವಾ ಯೋಜನೆ ಬಹಳಷ್ಟು ವಿಷಯಗಳನ್ನು ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ. ಅದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಹೇಳಿದರು.ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕಾಲೇಜಿನ ಆವರಣವನ್ನು ಶುಚಿಯಾಗಿ ಇಟ್ಟು ಕೊಳ್ಳುವುದರ ಮೂಲಕ ಗಿಡ ಮರಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಸಂರಕ್ಷಿಸಿಕೊಂಡು ಬರಬೇಕು. ಕೊರೋನಾ ಸಂದರ್ಭದಲ್ಲಿ ಮನುಷ್ಯನ ಉಸಿರಾಟಕ್ಕೆ ಗಿಡ-ಮರಗಳು ಅದೆಷ್ಟು ಅಗತ್ಯವೆಂಬುದನ್ನು ಇಡಿ ಜಗತ್ತಿಗೆ ಗೊತ್ತಾಗಿದೆ. ಅದಕ್ಕಾಗಿ ಗಿಡ-ಮರಗಳ ಬಗ್ಗೆ ಅವುಗಳ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಾ.ದೇವಿಂದ್ರಪ್ಪ ಹಳಿಮನಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಮೂಲಕ ಸಮಾನತೆಯ ಸೌಹಾರ್ದಭಾವ ಮೂಡಲು ಸಾಧ್ಯವಾಗುತ್ತದೆ. ಜಾತಿ-ಮತ ಪಂಥಗಳ ಜಂಜಾಟವನ್ನು ನೀಗಿ ಒಂದೇ ಎಂಬ ಭಾವವನ್ನು ಮೂಡಿಸುವಲ್ಲಿ ವಿಶೇಷ ಶಿಬಿರವು ಸಹಕಾರಿಯಾಗುತ್ತದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಜನತೆಯಲ್ಲಿ ಸಾಕ್ಷರತೆಯ ಬಗ್ಗೆ ಅರಿವನ್ನು ಮೂಡಿಸುವ ಕೆಲಸವನ್ನು ಸ್ವಯಂ ಸೇವಕರು ಮಾಡಬೇಕು. ಮನುಷ್ಯನಿಗೆ ಅನ್ನಕ್ಕಿಂತ ಅಕ್ಷರ ಮುಖ್ಯವೆಂಬುದನ್ನು ಮತ್ತೆ ಮತ್ತೆ ಹೇಳುವುದರ ಮೂಲಕ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವಲ್ಲಿ ಸ್ವಯಂ ಸೇವಕರ ಕೊಡುಗೆಯನ್ನು ನೀಡಬೇಕು ಎಂದರು.
ಡಾ.ಜೆಟ್ಟೆಪ್ಪ ದೋರನಹಳ್ಳಿ, ಡಾ.ಅಶೋಕ ರೆಡ್ಡಿ ಪಾಟೀಲ್, ಡಾ.ನರಸಪ್ಪ ಚಿತ್ತಾಪೂರ, ಪಂಪಾಪತಿ ರೆಡ್ಡಿ ಪಾಟೀಲ್, ಡಾ. ಮೋನಯ್ಯ ಕಲಾಲ, ಡಾ.ಬಸವಪ್ರಸಾದ, ಡಾ.ಬಿ.ಆರ್. ಕೇತನಕರ್, ಡಾ.ಯಲ್ಲಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ಹಣಮಂತರಾಯ ವೇದಿಕೆಯ ಮೇಲಿದ್ದರು.ಕು.ಗಂಗಮ್ಮ, ಕು.ಗೌರಮ್ಮ ಆರಂಭದಲ್ಲಿ ಎನ್.ಎಸ್.ಎಸ್. ಗೀತೆ ಹಾಡಿದರು. ಎನ್.ಎಸ್.ಎಸ್. ಅಧಿಕಾರಿ ಡಾ.ಚಂದ್ರಶೇಖರ ಕೊಂಕಲ್ ಸ್ವಾಗತಿಸಿ,ಪ್ರಾಸಾವಿಕ ಮಾತನಾದರು. ಡಾ.ರಾಘವೇಂದ್ರ ಬಂಡಿಮನಿ ನಿರೂಪಿಸಿದರೆ, ಎನ್.ಎಸ್.ಎಸ್. ಅಧಿಕಾರಿ ಮಂಜುನಾಥ ವಂದಿಸಿದರು.