ಸಾರಾಂಶ
- ಪೌಷ್ಠಿಕ ಆಹಾರ ಬಳಕೆ ಕುರಿತ ಶಿಬಿರದಲ್ಲಿ ಆರೋಗ್ಯಾಧಿಕಾರಿ ಕಾವ್ಯ ಸಲಹೆ - - -
ಕನ್ನಡಪ್ರಭ ವಾರ್ತೆ ಹರಿಹರಮನೆಯಲ್ಲಿ ಎಲ್ಲರೂ ಆಹಾರದಲ್ಲಿ ಪಾಲಕ್, ಮೆಂತ್ಯೆ, ಸೌತೆ, ಮೂಲಂಗಿ, ನುಗ್ಗೆ ಹಾಗೂ ಇತರೆ ತರಕಾರಿ, ಸೊಪ್ಪು, ಕಾಳು, ಕಡಿ, ಹಣ್ಣುಗಳನ್ನು ಹೆಚ್ಚು ಬಳಸಬೇಕು. ಇದರಿಂದ ಮನುಷ್ಯನಿಗೆ ಬರುವ ಕಾಯಿಲೆಗಳ ಪೈಕಿ ಅರ್ಧದಷ್ಟು ದೂರವಾಗುತ್ತವೆ ಎಂದು ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಕಾವ್ಯ ಹೇಳಿದರು.
ತಾಲೂಕಿನ ಸಾರಥಿ ಗ್ರಾಮದ ಈಶ್ವರ ದೇವಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪೌಷ್ಠಿಕ ಆಹಾರ ಬಳಕೆ ಕುರಿತ ಶಿಬಿರದಲ್ಲಿ ಅವರು ಮಾತನಾಡಿದರು.ಹಿರಿಯರು ಮತ್ತು ಮಕ್ಕಳು ಜಂಕ್ ಅಥವಾ ಫಾಸ್ಟ್ ಫುಡ್ ಸೇವಿಸುವುದು ಅನಾರೋಗ್ಯಕ್ಕೆ ಮಾರ್ಗ ಹಾಕಿದಂತಾಗುತ್ತದೆ. ಕಡಿಮೆ ದರಕ್ಕೆ ಸಿಗುವ ಎಗ್‌ರೈಸ್, ಗೋಬಿ ಮಂಚೂರಿ, ಮಾಮ್, ಪಾನಿಪುರಿ, ಕೆಲವು ಬೇಕರಿ ಪದಾರ್ಥಗಳಂತಹ ಫಾಸ್ಟ್‌ಫುಡ್‌ಗೆ ಬಣ್ಣ, ರುಚಿ ಹಾಗೂ ಸುವಾಸನೆ ಬರಲು ಕಡಿಮೆ ದರದ ರಾಸಾಯನಿಕಗಳನ್ನು ಬಳಸಿರುವ ಸಾಧ್ಯತೆ ಇರುತ್ತದೆ, ಯಾವುದೇ ಕಾರಣಕ್ಕೂ ಇಂತಹ ಆಹಾರ ಸೇವನೆ ಮಾಡಬಾರದು ಎಂದರು.
ಮನೆ ಅಡುಗೆಯೇ ಶ್ರೇಷ್ಠ:ಗ್ರಾಮೀಣ ಭಾಗದಿಂದ ನಗರ, ಪಟ್ಟಣಗಳ ಶಾಲಾ- ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಫಾಸ್ಟ್‌ಫುಡ್ ಸೇವನೆ ಅಭ್ಯಾಸ ಹೊಂದಿರುತ್ತಾರೆ. ಇಂತಹ ತಿಂಡಿಗಳು ಬಾಯಿಗೆ ರುಚಿ ಹಾಗೂ ತಾತ್ಕಾಲಿಕವಾಗಿ ಹಸಿವನ್ನು ನೀಗಿಸುತ್ತವೆ. ಆದರೆ, ಇದರಿಂದ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಓಡಾಡುತ್ತ ಸಾವಿರಾರು ಹಣ ಹಾಗೂ ಆರೋಗ್ಯ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಮನೆ ಅಡುಗೆಯೆ ಶ್ರೇಷ್ಠ ಎಂದರು.
ಧರ್ಮಸ್ಥಳ ಸಂಸ್ಥೆ ಸಮನ್ವಯಾಧಿಕಾರಿ ಭಾರತಿ ಮಾತನಾಡಿ, ಹರಿಹರ ಯೋಜನಾ ವ್ಯಾಪ್ತಿಯಲ್ಲಿ ೪೬ ನಿರ್ಗತಿಕರಿಗೆ ಅಡುಗೆ ಸಾಮಗ್ರಿಗಳ ವಿತರಿಸಲಾಗಿದೆ. ಸಾಂತ್ವನ ಯೋಜನೆಯ ಮನೆ ನಿರ್ಮಿಸಲು ಅರ್ಜಿಗಳು ಬಂದಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ₹3 ಲಕ್ಷ ಸುಜ್ಞಾನ ನಿಧಿ ಹಣ ನೀಡಲಾಗಿದೆ ಎಂದರು.೨೬ ವಿವಿಧ ತರಹದ ಮನೆ ಅಡುಗೆ ಮಾಡಿ ಮೆಚ್ಚುಗೆ ಪಡೆದ ಲತಾ, ನಿರ್ಮಲಾ, ಅನಿತಾ ಅವರಿಗೆ ಬಹುಮಾನ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿ ಎಚ್.ಎಂ. ಸದಾನಂದ ಆರೋಗ್ಯ ಗೀತೆ ಹಾಡಿದರು. ಮೇಲ್ವಿಚಾರಕ ರಾಜು, ತಿಪ್ಪೇಸ್ವಾಮಿ, ರಂಗನಾಥ್, ಸೇವಾಪ್ರತಿನಿಧಿಗಳಾದ ಸಾವಿತ್ರ, ವೀಣಾ, ಒಕ್ಕೂಟದ ಪ್ರೇಮಾವತಿ, ಕಸ್ತೂರಮ್ಮ, ಜ್ಞಾನವಿಕಾಸ ಮಹಿಳಾ ಸಂಘದ ನಾಗರತ್ನ, ಸಜಾತ, ತ್ರಿವೇಣಿ, ಗೀತಾ, ಲತಾ, ಜಯಶ್ರೀ ಹಾಗೂ ಗ್ರಾಮದ ಮಹಿಳೆಯರು ಇದ್ದರು.
- - - ಕೋಟ್ ಮಹಿಳೆಯರು ತಮ್ಮ ಸ್ತನಗಳನ್ನು ಆಗಾಗ ಸ್ಪರ್ಶಿಸಿ, ಗಂಟುಗಳಿವೆಯೆ ಎಂದು ಪರೀಕ್ಷಿಸಿಕೊಳ್ಳಬೇಕು. ಮುಟ್ಟು ಆದ ನಂತರ ವಾಸನೆ ಪರೀಕ್ಷೆ ನಡೆಸಿ, ವೈದ್ಯರ ಬಳಿ ಸೂಕ್ತ ಸಲಹೆ ಪಡೆದುಕೊಳ್ಳಬೇಕು. ಆರೋಗ್ಯ ಸಂರಕ್ಷಣೆಯಲ್ಲಿ ವೈದ್ಯರ ಬಳಿ ಹೇಗೆ ಹೇಳಿಕೊಳ್ಳುವುದೆಂದು ಮುಜುಗುರ ಪಡಬಾರದು- ಕಾವ್ಯ, ಆರೋಗ್ಯಾಧಿಕಾರಿ
- - --೭ಎಚ್‌ಆರ್‌ಆರ್೧:
ಹರಿಹರ ತಾಲೂಕಿನ ಸಾರಥಿ ಗ್ರಾಮದ ಈಶ್ವರ ದೇವಾಲಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪೌಷ್ಠಿಕ ಆಹಾರ ಬಳಕೆ ಕುರಿತ ಶಿಬಿರದಲ್ಲಿ ಆರೋಗ್ಯಾಧಿಕಾರಿ ಕಾವ್ಯ ಮಾತನಾಡಿದರು.