ಕೈ ಕೊಟ್ಟ ಮಳೆ, ರೈತರು ಕೃಷಿ ಹೊಂಡದ ಮೊರೆ

| Published : Jul 09 2024, 12:53 AM IST

ಸಾರಾಂಶ

ಕಳೆದ ಬಾರಿ ರಾಜ್ಯದಲ್ಲಿ ಉಂಟಾದ ಬರಗಾಲದಿಂದ ರೈತರು ಬೆಳೆ ನಷ್ಟ ಮಾಡಿಕೊಂಡಿದ್ದು. ರಾಜ್ಯ ಸರ್ಕಾರದಿಂದ ಬರ ಪರಿಹಾರ ಸಿಗದೆ ಸಾಕಷ್ಟು ನೋವು ಅನುಭವಿಸಿದ್ದಾರೆ

ಎಸ್.ಜಿ.ತೆಗ್ಗಿನಮನಿ ನರಗುಂದ

ಜೂನ್‌ ತಿಂಗಳಲ್ಲಿ ಸುರಿದ ಅಲ್ಪಸ್ವಲ್ಪ ಮಳೆಗೆ ತಾಲೂಕಿನ ರೈತರು ಹೆಸರು ಬಿತ್ತನೆ ಮಾಡಿದ್ದು. ಮಳೆ ಮತ್ತೆ ಕೈಕೊಟ್ಟಿದ್ದರಿಂದ ಹೆಸರು ಬೆಳೆ ಬಾಡುತ್ತಿದೆ. ಬಾಡುತ್ತಿರುವ ಬೆಳೆ ನೋಡಲಾಗದೇ ರೈತರು ಕೃಷಿ ಹೊಂಡದ ನೀರನ್ನು ಜಮೀನುಗಳಿಗೆ ಹಾಯಿಸುತ್ತಿದ್ದಾರೆ.

ಪ್ರಾರಂಭದಲ್ಲಿ ಮಳೆಯಾಗುವ ಮುನ್ಸೂಚನೆ ಅರಿತ ರೈತರು ಮಳೆ ಆಗಬಹುದು ಎಂಬ ಭರವಸೆಯಿಂದ ತೇವಾಂಶವಿಲ್ಲದಿದ್ದರೂ ಬಿತ್ತನೆ ಮಾಡಿದ್ದಾರೆ. ಬಿತ್ತನೆಗೊಂಡು ಒಂದೂವರೆ ತಿಂಗಳು ಗತಿಸಿದ ನಂತರ ಹೆಸರು ಸೊಗಸಾಗಿ ಬೆಳೆದು ನಿಂತಿದೆ. ಈಗ ಒಂದುವರೆ ತಿಂಗಳಿಂದ ಮಳೆಯಾಗದ ಹಿನ್ನೆಲೆ ತೇವಾಂಶ ಕೊರತೆಯಿಂದ ಬೆಳೆಗಳು ಬಾಡುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕೃಷಿ ಹೊಂಡದ ಮೊರೆ: ಈ ವರ್ಷ ತಾಲೂಕಿನಲ್ಲಿ ಮುಂಗಾರು ಮಳೆಯಾಗದೇ ಕೃಷಿ ಹೊಂಡಗಳು ಖಾಲಿಯಾಗಿದ್ದವು. ಆದರೆ ಮೇ 14ರಿಂದ 24ರ ವರೆಗೆ ಮಲಪ್ರಭಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ರೈತರ ಹೊಲದಲ್ಲಿನ ಕೃಷಿ ಹೊಂಡಗಳು ತುಂಬಿಕೊಂಡಿದ್ದು, ಈಗ ಸಂಗ್ರಹವಿರುವ ನೀರನ್ನು ಪಂಪ್‌ಸೆಟ್‌, ಸ್ಪಿಂಕ್ಲರ್‌ ಮೂಲಕ ಜಮೀನುಗಳಿಗೆ ಹಾಯಿಸುತ್ತಿದ್ದಾರೆ.

ತಾಲೂಕಿನಲ್ಲಿ ಈಗಾಗಲೇ 18ರಿಂದ 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದು. ಭೂಮಿಯಲ್ಲಿ ತಳ ಹಸಿ ಇಲ್ಲದ ಕಾರಣ ಹೆಸರು ಬಾಡುತ್ತಿದೆ. ಅದನ್ನು ನೋಡಲಾಗದ ರೈತರು ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಎಂದು ಕೃಷಿ ಹೊಂಡದಿಂದ ಪಂಪ್‌ಸೆಟ್‌ ಮೂಲಕ ನೀರು ಹಾಯಿಸುತ್ತಿದ್ದಾರೆ.

ಕಳೆದ ಬಾರಿ ರಾಜ್ಯದಲ್ಲಿ ಉಂಟಾದ ಬರಗಾಲದಿಂದ ರೈತರು ಬೆಳೆ ನಷ್ಟ ಮಾಡಿಕೊಂಡಿದ್ದು. ರಾಜ್ಯ ಸರ್ಕಾರದಿಂದ ಬರ ಪರಿಹಾರ ಸಿಗದೆ ಸಾಕಷ್ಟು ನೋವು ಅನುಭವಿಸಿದ್ದಾರೆ.

ಸೊಗಸಾಗಿ ಬೆಳೆದು ನಿಂತ ಹೆಸರು ಬೆಳೆ ಮಳೆಯಿಲ್ಲದೆ, ತೇವಾಂಶ ಕೊರತೆಯಿಂದ ಬಾಡುತ್ತಿದೆ. ಸಾವಿರಾರು ಖರ್ಚು ಮಾಡಿ 48 ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದೇವೆ. ಬೆಳೆದು ನಿಂತ ಬೆಳೆ ಕಣ್ಮುಂದೆ ಹಾಳಾಗುವುದನ್ನು ನೋಡಲಾಗದೇ ಕೃಷಿ ಹೊಂಡದಿಂದ ಸ್ಪಿಂಕರ ಮೂಲಕ ನೀರನ್ನು ಹಾಯಿಸುತ್ತಿದ್ದೇವೆ ಎಂದು ಅರಿಷಿಣಗೋಟಿ ರೈತ ರಾಮರಡ್ಡಿ ಮೇಟಿ ತಿಳಿಸಿದ್ದಾರೆ.