ಹಿಂದೂಗಳು ನಾಚಿಕೆ ಸಂಸ್ಕೃತಿಯಿಂದ ಹೊರಬನ್ನಿ

| Published : Dec 15 2024, 02:00 AM IST

ಸಾರಾಂಶ

ಹಲವು ದೇವರುಗಳನ್ನು ಪೂಜಿಸುವವರು ಇದ್ದರೂ ಸಹ, ದತ್ತಪೀಠದ ಮುಕ್ತಿಗೆ ತಮ್ಮ ವೈರುಧ್ಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿರುವುದು ಶ್ಲಾಘನೀಯ. ಹಿಂದೂಗಳು ನಾಚಿಕೆ ಪಡುವ ಸಂಸ್ಕೃತಿಯಿಂದ ಹೊರಬಂದು ಮೈಕೊಡವಿ ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಹಲವು ದೇವರುಗಳನ್ನು ಪೂಜಿಸುವವರು ಇದ್ದರೂ ಸಹ, ದತ್ತಪೀಠದ ಮುಕ್ತಿಗೆ ತಮ್ಮ ವೈರುಧ್ಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿರುವುದು ಶ್ಲಾಘನೀಯ. ಹಿಂದೂಗಳು ನಾಚಿಕೆ ಪಡುವ ಸಂಸ್ಕೃತಿಯಿಂದ ಹೊರಬಂದು ಮೈಕೊಡವಿ ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ದತ್ತ ಜಯಂತಿ ಅಂಗವಾಗಿ ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಶೋಭಾಯಾತ್ರೆಯಲ್ಲಿ ಸೇರಿದ್ದ ಹಿಂದೂ ಯುವಕ ಯುವತಿಯರು ಈ ಕಾರ್ಯಕ್ರಮ ಮುಗಿದ ನಂತರವೂ ತಮ್ಮ ಒಗ್ಗಟ್ಟನ್ನು ಜೀವಂತಾಗಿಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

ಜಗತ್ತಿನ ಹಲವು ನಾಗರಿಕತೆಗಳು, ಪರಂಪರೆಗಳು ಅಳಿದುಹೋದರೂ ಸಹ ಹಿಂದೂ ಸಂಸ್ಕೃತಿ ಇಂದಿಗೂ ಜೀವಂತವಿದೆ. ಹಿಂದೂ ಧರ್ಮದಲ್ಲಿ ಸತ್ತ ನಂತರ ಪಂಚಭೂತಗಳಲ್ಲಿ ಲೀನವಾಗಿ ಪುರ್ನಜನ್ಮವಾಗಿ ಹುಟ್ಟುವ ಪವಿತ್ರ ನಂಬಿಕೆಯಿರುವ ಧರ್ಮ ನಮ್ಮದು ಎಂದು ನಾವೆಲ್ಲರೂ ಹೆಮ್ಮೆಪಡಬೇಕಿದೆ ಎಂದರು.

ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ಪೀಠಾಧಿಪತಿ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳು ಮಾತನಾಡಿ, ಭಾರತ ದೇಶ ಪಾಶ್ಯಾತ್ಯ ಸಂಸ್ಕೃತಿಯ ಗ್ರಹಣಕ್ಕೆ ಒಳಗಾಗಿ ಮೂಲ ಸಂಸ್ಕೃತಿಯನ್ನು ಮರೆಯುವ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಆಧುನಿಕ ಮಾಧ್ಯಮಗಳಿಂದ ಕೌಟುಂಬಿಕತೆ ಛಿದ್ರವಾಗಿ ಭಾರತೀಯತೆಯ ಗೌರವ ಹಾಳಾಗುತ್ತಿದೆ ಎಂದು ಹೇಳಿದರು.

ಪಕ್ಕದ ಶತೃರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ಬಾಂಗ್ಲಾ ದೇಶಗಳು ಶಸಸ್ತ್ರಗಳ ಮೂಲಕ ನಮ್ಮ ದೇಶವನ್ನು ಗೆಲ್ಲಲಾಗದೆ ಮಾದಕ ವಸ್ತುಗಳ ಸಾಗಣೆ, ವಿದ್ರೋಹಿಗಳನ್ನು ದೇಶದೊಳಗೆ ನುಗ್ಗಿಸುವುದು, ಜಿಹಾದ್ ತಂತ್ರಗಳ ಮೂಲಕ ಷಡ್ಯಂತರ ರೂಪಿಸುತ್ತಿದ್ದು, ಶತೃಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಸನಾತನ ಸಂಸ್ಕೃತಿಯಡಿ ಎಲ್ಲಾ ಹಿಂದೂ ಧರ್ಮಿಯರು ಒಂದಾಗಬೇಕಿದೆ ಎಂದು ತಿಳಿಸಿದರು.

ಹಿಂದೂ ಸಮಾಜದ ಜಾಗೃತಿಗಾಗಿ ದತ್ತಪೀಠದಂತಹ ಅಭಿಯಾನಗಳು ದೇಶದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಮುಂದಿನ ದಿನಗಳಲ್ಲಿ ಮಧುರ, ಕಾಶಿ ಸೇರಿದಂತೆ ವಿವಿಧ ಧರ್ಮ ಕ್ಷೇತ್ರಗಳ ರಕ್ಷಣೆಗಾಗಿ ದೇಶಾದ್ಯಂತ ಅಭಿಯಾನಗಳು ನಡೆದು ಜನ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸನಾತನ ಧರ್ಮ ಎಂದಿಗೂ ಸಾವಿಲ್ಲ. ತಾವೂ ಬದುಕಿ ಇತರರಿಗೆ ಬದುಕಲು ಬಿಡುವ ಉದಾತ್ತಾ ಸಂದೇಶಗಳನ್ನು ಹೊಂದಿರುವ ಅತ್ಯಂತ ಪವಿತ್ರವಾದ ಧರ್ಮ ಹಿಂದೂ ಧರ್ಮವಾಗಿದ್ದು, ಅದರ ರಕ್ಷಣೆಗೆ ಹಿಂದೂ ಧರ್ಮಿಯರು ತಮ್ಮ ಭಿನ್ನತೆ ಗಳನ್ನು ಬದಿಗಿಟ್ಟು ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಧರ್ಮಜಾಗೃತಿ ಮೊಳಕೆಯೊಡೆಯುತ್ತಿದ್ದು, ಅದು ಹೆಮ್ಮರವಾಗಿ ಬೆಳೆದು ಹಿಂದೂ ಧರ್ಮಿಯರನ್ನು ಒಗ್ಗಟ್ಟಾಗಿಸಬೇಕಿದೆ ಎಂದು ಹೇಳಿದ ಅವರು, ಭಾರತದ ರಾಜಕಾರಣಿಗಳು ಪಕ್ಷಭೇದ ಮರೆತು ಸಂಸ್ಕೃತಿ ರಕ್ಷಣೆಗೆ ಕಟಿಬದ್ಧರಾಬೇಕು ಎಂದು ಹೇಳಿದರು.

ಭಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಮಾತನಾಡಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ ನಡೆಸಿದ ಹೋರಾಟದ ಫಲವಾಗಿ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆ ನಡೆಯುತ್ತಿದೆ. ನಮ್ಮ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ದತ್ತಪೀಠ ಸಂಪೂರ್ಣವಾಗಿ ಹಿಂದೂಗಳ ತಕ್ಕೆಗೆ ಬರುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಎಚ್‌ಪಿ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ, ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಪೈ, ಮುಖಂಡರಾದ ಯೋಗೀಶ್ ರಾಜ್ ಅರಸ್, ಸಿ.ಡಿ. ಶಿವಕುಮಾರ್, ಆಟೋ ಶಿವಣ್ಣ, ಅಮಿತ್ ಗೌಡ, ವಿನಯ್ ಬಣಕಲ್, ವಕೀಲ ಜಗದೀಶ್ ಬಾಳಿಗ, ಶಶಾಂಕ್ ಹೇರೂರು ಉಪಸ್ಥಿತರಿದ್ದರು.