ನರಸಿಂಹರಾಜಪುರಸನಾತನ ಧರ್ಮದಿಂದಲೇ ಇಂದು ಹಿಂದೂಗಳು ದೇಶದಲ್ಲಿ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದೆ ಎಂದು ಗೌರಿ ಗದ್ದೆಯ ಅವಧೂತ ಶ್ರೀ ವಿನಯ ಗುರೂಜಿ ತಿಳಿಸಿದರು.
ನಾಗರಮಕ್ಕಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಮಾಜೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸನಾತನ ಧರ್ಮದಿಂದಲೇ ಇಂದು ಹಿಂದೂಗಳು ದೇಶದಲ್ಲಿ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದೆ ಎಂದು ಗೌರಿ ಗದ್ದೆಯ ಅವಧೂತ ಶ್ರೀ ವಿನಯ ಗುರೂಜಿ ತಿಳಿಸಿದರು.
ಭಾನುವಾರ ನಾಗರಮಕ್ಕಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಆಶ್ರಯದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿದ್ಯ ವಹಿಸಿ ಆರ್ಶೀರ್ವಾಚನ ನೀಡಿದರು.ಗೋವಿಗೆ, ತೀರ್ಥಕ್ಕೆ , ಭೂಮಿಗೆ, ಹೆತ್ತ ತಾಯಿಗೆ ಮೊದಲ ಸ್ಥಾನ ನೀಡಿದವರು ಹಿಂದೂಗಳು. ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ತಂದೆ, ತಾಯಿ ಯನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಿದ್ದಾರೆ. ತಂದೆ, ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇರುವವರು ದೇಶವನ್ನು ಕಟ್ಟಲು ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಸರಿಯಾಗಿ ಸಂಸ್ಕಾರ ಸಿಗದೆ ಇರುವುದೇ ಮಕ್ಕಳ ಇಂತಹ ನಡವಳಿಕೆಗೆ ಕಾರಣ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಹಿಂದಿನ ಕಾಲದಲ್ಲಿ ತಾಯಿ ಬೇರು ಗಟ್ಟಿಯಾಗಿತ್ತು. ಈಗ ತಾಯಿ ಶಕ್ತಿ ಕಡಿಮೆಯಾಗಿದೆ ಎಂದರು.
ಮತ್ತೂರಿನ ಸಾಮಾಜಿಕ ಕಾರ್ಯಕರ್ತ ಯಾದವ ಕೃಷ್ಣ ದಿಕ್ಸೂಚಿ ಭಾಷಣ ಮಾಡಿ, ಹಿಂದೂ ಎನ್ನುವುದು ಸ್ವಾಭಿಮಾನದ ಸಂಕೇತ. ಜಗತ್ತಿನಲ್ಲೇ ಹಿಂದೂಗಳು ಬುದ್ದಿವಂತರು ಎಂಬುದು ಸಾಬೀತಾಗಿದೆ. ಈಗ ಹಿಂದೂಗಳು ಪ್ರಪಂಚಕ್ಕೇ ಮಾರ್ಗದರ್ಶನ ಮಾಡುತ್ತಾರೆ. ಒಂದು ಅಂದಾಜಿನ ಪ್ರಕಾರ ಪ್ರಪಂಚದ 55 ನಾಗರಿಕ ಸಂಸ್ಕೃತಿಗೆ ಹಿಂದೂ ಸಂಸ್ಕೃತಿ ಪ್ರಭಾವ ಬೀರಿದೆ. 100 ವರ್ಷದ ಹಿಂದೆ ಆರ್ ಎಸ್.ಎಸ್. ಪ್ರಾರಂಭವಾಯಿತು. ಈಗ ಇಡೀ ದೇಶದಲ್ಲಿ ಹಿಂದೂ ಎಂದು ಹೇಳಲು ಹೆಮ್ಮೆ ಯಾಗುತ್ತಿದೆ.ಇದಕ್ಕೆ ಆರ್.ಎಸ್.ಎಸ್.ಕಾರಣ. ಆರ್.ಎಸ್.ಎಸ್. ಜಗತ್ತಿನ ಅತಿ ದೊಡ್ಡ ಸಂಘಟನೆ. ಪ್ರಪಂಚದಲ್ಲಿ ವಿವಿಧ ದೇಶಗಳ ಯುದ್ದ ಹತ್ತಾರು ವರ್ಷ ನಡೆಯುತ್ತದೆ. ಆದರೆ, ಭಾರತ, ಪಾಕಿಸ್ತಾನದ ಯುದ್ಧ ಕೇವಲ 2 ನೇ ದಿನಕ್ಕೆ ನಿಲ್ಲಲು ಕಾರಣ ಭಾರತದ ಶಕ್ತಿ. ಹಿಂದೆ ಭಾರತ ದೇಶದಲ್ಲಿ ಮಾತ್ರ ಹಿಂದೂ ಧರ್ಮ ಇತ್ತು. ಈಗ ಪ್ರಪಂಚದ 20 ರಿಂದ 22 ದೇಶಗಳಲ್ಲಿ ಹಿಂದೂ ವಿಸ್ತರಣೆಯಾಗಿದೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಬೆಮ್ಮನೆ ಮೋಹನ್ ಮಾತನಾಡಿ, ಹಿಂದೂಗಳು ಒಂದು ಕುಟುಂಬದವರಂತೆ ಇದ್ದು ಒಟ್ಟಾಗಿ ದೇಶ ಕಟ್ಟೋಣ.ನಾವು ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಅರ್ಪಿಸಬೇಕಾಗಿದೆ ಎಂದರು. ಬೆಮ್ಮನೆ ಕೃಷ್ಣಮೂರ್ತಿ ಮತ್ತು ತಂಡದವರು ಅಂಟಿಕೆ-ಪಿಂಟಿಕೆ ಹಾಡಿನೊಂದಿಗೆ ಜ್ಯೋತಿ ತಂದು ದೀಪ ಬೆಳಗಿಸಿದರು.
ಇದಕ್ಕೂ ಮೊದಲು ಕುದುರೆಗುಂಡಿಯಿಂದ ಬೈಕ್ ಹಾಗೂ ಇತರ ವಾಹನದೊಂದಿಗೆ ಶೋಭಾ ಯಾತ್ರೆ ನಡೆಯಿತು.ರಂಗಿಣಿ ಯು ರಾವ್ ವಂದೇ ಮಾತರಂ ಗೀತೆ ಹಾಡಿದರು.ಮಹಿಳಾ ವಕ್ತಾರೆ ಕಡೇಗದ್ದೆಯ ಡಾ.ಪ್ರತೀಕ್ಷಾ ಆರ್. ಕಾರಂತ್ ,ಸೀತೂರಿನ ಯಕ್ಷಗಾನ ಕಲಾವಿದ ಅನಂತಪದ್ಮನಾಭ , ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಸಂಯೋಜಕ ಯಡಗೆರೆ ಸುಬ್ರಮಣ್ಯ, ಬಿ.ಎಸ್.ರಾಮಚಂದ್ರ, ಅನಿಲ್ ಕುಮಾರ್ , ಸಾಲೇಸಿಮಕ್ಕಿ ಚೇತನ್ ಇದ್ದರು.