ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಹಿಂದೂ ಧರ್ಮಿಯರನ್ನು ಒಂದಿಲ್ಲೊಂದು ಕಾರಣಕ್ಕೆ ಗುರಿಯಾಗಿಸಿಕೊಂಡು ಸನಾತನ ಧರ್ಮವನ್ನೇ ಹಾಳು ಮಾಡುವ ವಿಚಾರ ತೀವ್ರ ಖಂಡನೀಯ. ಮೊದಲು ಈ ವಿಚಾರವನ್ನು ಮೊದಲು ತೆಗೆದು ಹಾಕಿ. ಇಲ್ಲದಿದ್ದರೆ ಹಿಂದೂ ಧರ್ಮಿಯರಲ್ಲಿ ಶಾಸ್ತ್ರದ ಕಲೆಯಿದ್ದಂತೆ ಶಸ್ತ್ರಾಸ್ತ್ರದ ಕಲೆಯೂ ಒಳಗೊಂಡಿದೆ. ಆ ಕಲೆಯೊಂದಿಗೆ ಹೊರಬರಬೇಕಾಗುತ್ತದೆ ಎಂದು ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳ ಸಾಮಾಜಿಕ ಕಾರ್ಯಕರ್ತ ಉದಯಸಿಂಗ್ ರಾಯಚೂರ ಎಚ್ಚರಿಸಿದರು.ಸಿಇಟಿ ವೇಳೆ ಜನಿವಾರ ತೆಗೆಸಿರುವ ಕ್ರಮ ಖಂಡಿಸಿ ಜನಿವಾರದಾರಿ ಸಮಾಜ ಹಾಗೂ ಸಮಸ್ತ ಹಿಂದೂಪರ ಸಂಘಟಕರು ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆ ನೇತೃತ್ವವಹಿಸಿ ಮಾತನಾಡಿದ ಅವರು, ಹಿಂದೂ ಬಂಧು ಒಂದಾಗಿದ್ದೇವೆ ಎಂಬುದನ್ನು ಮೊದಲು ಅರಿತುಕೊಳ್ಳಲಿ. ಇದೇ ರೀತಿ ಸನಾತನ ಧರ್ಮಕ್ಕೆ ಧಕ್ಕೆ ಕೊಡುವ ಕಾರ್ಯ ಮುಂದುವರಿದರೆ ಎಲ್ಲ ಧರ್ಮಿಯರು ಒಗ್ಗೂಡಿ ಸಿಡಿದೇಳಬೇಕಾದೀತು ಎಂದು ಗುಡುಗಿದರು.ಈ ಹಿಂದೆಯೂ ನಡೆದ ಸಿಇಟಿಯಲ್ಲಿ ಕೆಲವೆಡೆ ಹೆಣ್ಣುಮಕ್ಕಳಿಗೂ ಬಳೆ ತೆಗೆಸುವ ಹಾಗೂ ಕೊರಳಲ್ಲಿರುವ ಚೈನ್, ತಾಳಿಯನ್ನು ತೆಗೆಸುವ ಕಾರ್ಯವೂ ನಡೆದಿತ್ತು. ಇಂತಹ ಉದ್ಧಟತನ ಪ್ರಕರಣಕ್ಕೆ ಸಂಬಂಧಿಸಿದ ಸಿಇಟಿ ಪರೀಕ್ಷಾ ಅಧಿಕಾರಿ ವರ್ಗದವರಿಗೆ ಆ ಕಾರ್ಯದಿಂದಲೇ ವಜಾಗೊಳಿಸಿ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲುಪಾಲು ಮಾಡಬೇಕು ಎಂದರು.ಮೊದಲು ಶ್ರೀ ಭಾವಸಾರ ಕ್ಷತ್ರೀಯ ಶ್ರೀ ಅಂಭಾಭವಾನಿ ಮಂದಿರದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಕತ್ರಿಬಜಾರ ಮಾರ್ಗ ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ಚೌಕ್, ಮಹಾರಾಣಾ ಪ್ರತಾಪ್ ಸಿಂಹ್ ಸರ್ಕಲ್ ಮಾರ್ಗಗುಂಟಾ ಹಾಯ್ದು ಬಸ್ ನಿಲ್ದಾಣ ರಸ್ತೆ, ಎಪಿಎಂಸಿ ಮಾರ್ಕೆಟ್ ಮುಂಭಾಗ ರಸ್ತೆ, ಬಸವೇಶ್ವರ ಚೌಕ್‌ನಿಂದ ಮರಳಿ ಅದೇ ಮಾರ್ಗವಾಗಿ ಆಗಮಿಸಿ ಹಿಂದೂಪರ ಸಂಘಟನೆಗಳ ವತಿಯಿಂದ ಬರೆದ ರಾಜ್ಯಪಾಲರಿಗೆ ಮನವಿಪತ್ರವೊಂದನ್ನು ತಹಶೀಲ್ದಾರರಾದ ವಿನಯಾ ಹೂಗಾರ ಅವರಿಗೆ ಸಲ್ಲಿಸಲಾಯಿತು. ಈ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ರವಾನಿಸಲಾಗುವುದು ಎಂದು ತಹಶೀಲ್ದಾರ ವಿನಯಾ ತಿಳಿಸಿದರು. ಈ ಸಮಯದಲ್ಲಿ ಬ್ರಾಹ್ಮಣ ಸಮಾಜದ ಹಾಗೂ ಆರ್ಯವೈಶ್ಯ ಸಮಾಜ, ಮರಾಠಾ ಸಮಾಜ, ಸೋಮವಂಶ ಆರ್ಯಕ್ಷತ್ರೀಯ ಸಮಾಜ, ರಜಪೂತ ಸಮಾಜ, ಭಾವಸಾರ ಕ್ಷತ್ರೀಯ ಸಮಾಜದ ಪದಾಧಿಕಾರಿಗಳು ಹಿಂದೂ ಧರ್ಮದ ಸದಸ್ಯರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.